ಹವಾಮಾನ ವೈಪರೀತ್ಯದಲ್ಲಿ ಕಳೆದ ವರ್ಷ!

| Published : Dec 28 2024, 01:02 AM IST

ಸಾರಾಂಶ

ಹಿಂಗಾರು ಬಿತ್ತನೆಗೂ ಮುಂಚೆ ವಾಯುಭಾರ ಕುಸಿತದಿಂದ ಅಕ್ಟೋಬರ್‌ ತಿಂಗಳ ಒಂದು ವಾರ ಕಾಲ ನಿರಂತರ ಸುರಿದ ಮಳೆ ಜಿಲ್ಲೆಯ ಜನರನ್ನು ಹೈರಾಣು ಮಾಡಿತು. ಇದರೊಂದಿಗೆ ಮಳೆಯಿಂದ ಧಾರವಾಡದ ತಗ್ಗು ಪ್ರದೇಶಗಳಲ್ಲಿ ನೀರು ಹೊಕ್ಕು ಅವಾಂತರ ಸೃಷ್ಟಿಯಾಯಿತು.

ಬಸವರಾಜ ಹಿರೇಮಠ

ಧಾರವಾಡ

ಈ ವರ್ಷವನ್ನು ಹವಾಮಾನ ವೈಪರೀತ್ಯದಲ್ಲಿಯೇ ಕಳೆಯಬೇಕಾಯಿತು. ಅಕಾಲಿಕ ಮಳೆಯು ಬೆಳೆ ಹಾನಿ, ಮನೆ ಹಾನಿ ಮಾತ್ರವಲ್ಲದೇ ಜನರ ಆರೋಗ್ಯದ ಮೇಲೂ ಪರಿಣಾಮ ಬೀರಿತು. ಈ ವರ್ಷ ಅಷ್ಟರ ಮಟ್ಟಿಗೆ ಬಿಸಿಲು, ಮಳೆ, ಮಂಜು ಮತ್ತು ಚಳಿ ಅನಿಶ್ಚಿತತೆ ತೋರಿದೆ.

ಮುಂಗಾರು ಪೂರ್ವ ಹದವಾದ ಮಳೆ ಹಿನ್ನೆಲೆಯಲ್ಲಿ ಉತ್ಸಾಹದಿಂದ ಬಿತ್ತನೆ ಮಾಡಿದ ರೈತರಿಗೆ ನಂತರದಲ್ಲಿ ಬಿದ್ದ ವಿಪರೀತ ಮಳೆ ತೀವ್ರ ಸಮಸ್ಯೆ ತಂದೊಡ್ಡಿತು. ಕೈ ಬಂದ ತುತ್ತು ಬಾಯಿಗೆ ಬರದಂತೆ ಬೆಳೆ ಕೊಯ್ಲು ಸಮಯದಲ್ಲಿ ಸುರಿದ ಮಳೆಯಿಂದಾಗಿ ಸಾವಿರಾರು ಎಕರೆ ಕೃಷಿ ಬೆಳೆಗಳು ಹಾನಿಯಾದವು. ಜುಲೈ 12ರಿಂದ 22ರ ವರೆಗೆ ಸುರಿದ ಮಳೆಯಿಂದ 127 ಮನೆಗಳಿಗೂ ಹಾನಿ ಉಂಟಾಯಿತು. 2.50 ಲಕ್ಷ ಹೆಕ್ಟೇರ್‌ ಮುಂಗಾರು ಬಿತ್ತನೆ ಪೈಕಿ 50 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿ ಉಂಟಾಯಿತು.

ಹೈರಾಣು ಮಾಡಿದ ವಾರದ ಮಳೆ:

ಇನ್ನು, ಹಿಂಗಾರು ಬಿತ್ತನೆಗೂ ಮುಂಚೆ ವಾಯುಭಾರ ಕುಸಿತದಿಂದ ಅಕ್ಟೋಬರ್‌ ತಿಂಗಳ ಒಂದು ವಾರ ಕಾಲ ನಿರಂತರ ಸುರಿದ ಮಳೆ ಜಿಲ್ಲೆಯ ಜನರನ್ನು ಹೈರಾಣು ಮಾಡಿತು. ಅ. 25ರಿಂದ 27ರ ವರೆಗೆ ಶಾಲೆ-ಕಾಲೇಜುಗಳಿಗೆ ರಜೆ ನೀಡುವಷ್ಟು ಮಳೆ ಅಬ್ಬರ ಇತ್ತು. ಅ. 1ರಿಂದ 21ರ ವರೆಗೆ 86.3 ಮಿಮೀ ಪೈಕಿ ಆಗಿದ್ದು 187 ಮಿಮೀ ಈ ಮಳೆಗೆ ಜಿಲ್ಲೆಯ ಕೆರೆ-ಕಟ್ಟೆಗಳು ತುಂಬಿ ಹರಿದವು. ಈ ಮಳೆಗೆ ಜಿಲ್ಲೆಯ 25,525 ಹೆಕ್ಟೆರ್ ಪ್ರದೇಶದಲ್ಲಿ ಬೆಳೆ, 180 ಮನೆಗಳು ಮತ್ತು 3 ಜಾನುವಾರು ಹಾನಿ ಉಂಟಾಯಿತು.

ತಗ್ಗು ಪ್ರದೇಶದಲ್ಲಿ ನೀರು:

ಇದರೊಂದಿಗೆ ಮಳೆಯಿಂದ ಧಾರವಾಡದ ತಗ್ಗು ಪ್ರದೇಶಗಳಲ್ಲಿ ನೀರು ಹೊಕ್ಕು ಅವಾಂತರ ಸೃಷ್ಟಿಯಾಯಿತು. ಅತಿಯಾದ ಮಳೆಯಿಂದ ಜಿಲ್ಲೆಯ ಪ್ರಮುಖ ರಸ್ತೆಗಳು ಸಹ ಹಾನಿ ಉಂಟಾಯಿತು. ಜತೆಗೆ ನಿರಂತರ ಮಳೆಯಿಂದ ಹಿಂಗಾರು ಹಂಗಾಮು ಒಂದೂವರೆ ತಿಂಗಳು ಮುಂದೂಡಬೇಕಾಯಿತು. ಶೇ. 90ರಷ್ಟು ರೈತರು ದೀಪಾವಳಿ ನಂತರ ಬಿತ್ತನೆ ಮಾಡುವ ಸ್ಥಿತಿ ಉಂಟಾಯಿತು. ಇನ್ನು, ಡಿಸೆಂಬರ್‌ ತಿಂಗಳಲ್ಲಿ ಚಳಿ ವಾತಾವರಣದಲ್ಲಿ ಹಿಂಗಾರು ಬೆಳೆ ಕಡಲೆ, ಗೋದಿ ಬೆಳೆ ಬರಲಿದ್ದು, ಚಳಿ ಬದಲು ಫೆಂಗಲ್‌ ಚಂಡಮಾರುತದ ಪರಿಣಾಮ ಕಡಲೆ, ಭತ್ತ, ಗೋದಿ ಹಾಗೂ ಮಾವು ಬೆಳೆಗೆ ಕುತ್ತು ಬಂದಿದೆ. ಚಳಿ ಬಿಡಬೇಕಾದ ಸಮಯದಲ್ಲಿ ಮಳೆ ಹಾಗೂ ಮೋಡದ ವಾತಾವರಣ ಸೃಷ್ಟಿಯಾಗಿದೆ.

ಆರೋಗ್ಯದಲ್ಲೂ ಏರುಪೇರು:

ಬೇಸಿಗೆಯಲ್ಲಿ ಮಳೆ, ಮಳೆಗಾಲದಲ್ಲಿ ಬಿಸಿಲು, ಚಳಿಗಾಲದಲ್ಲಿ ಮಳೆ, ಮೋಡ ಮುಸುಕಿದ ವಾತಾರವಣದಿಂದ ಜನರ ಅದರಲ್ಲೂ ಮಕ್ಕಳ ಆರೋಗ್ಯಕ್ಕೂ ಕುತ್ತು ತಂದ ವರ್ಷವಿದು. ವಾಯುಭಾರ ಕುಸಿತದಿಂದಾಗಿ ಅಕಾಲಿಕ ಮಳೆ, ಶೀತಗಾಳಿಯಿಂದ ಜಿಲ್ಲೆಯಲ್ಲಿ ಡೆಂಘೀ ರೋಗಿಗಳ ಸಂಖ್ಯೆ ಹೆಚ್ಚಿತು. ತಂಪು ವಾತಾವರಣ, ಶೀತಗಾಳಿ, ಮಳೆಯಿಂದಾಗಿ ಬಹುತೇಕರಲ್ಲಿ ಕೆಮ್ಮು-ನೆಗಡಿ, ಜ್ವರ ಲಕ್ಷಣಗಳು ಹೆಚ್ಚಾಯಿತು. ಈ ವರ್ಷ ಜಿಲ್ಲೆಯಲ್ಲಿ 521 ಜನರಲ್ಲಿ ಡೆಂಘೀ ಕಾಣಿಸಿಕೊಂಡಿದ್ದು, ಮುಮ್ಮಿಗಟ್ಟಿ ಗ್ರಾಮದ ನಾಲ್ಕು ವರ್ಷದ ಸಮೃದ್ಧಿ ದೇಸಾಯಿ ಬಾಲಕಿ ಮೃತಪಟ್ಟಿದ್ದು ನೋವಿನ ಸಂಗತಿ.