ಸಾರಾಂಶ
ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ ಹಾನಗಲ್ಲ ಕೃಷಿ ಭೂಮಿಯಲ್ಲಿನ ವ್ಯವಸಾಯಕ್ಕೆ ಅಡಚಣೆಯಾಗುವ ವಿವಿಧ ಮರಗಳನ್ನು ತೆರವುಗೊಳಿಸಲು ಇರುವ ಈಗಿನ ನಿಯಮಗಳು ರೈತರನ್ನು ಕಚೇರಿಗಳಿಗೆ ಅಲೆದಾಡಿಸುವಂತೆ ಮಾಡಿವೆ.
ಇತರ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ಮರ ತೆರವಿಗೆ ನಿಯಮ ಸರಳೀಕರಣ ಮಾಡಲು ಬಹು ದೊಡ್ಡ ಒತ್ತಾಯ ಕೆಳಿಬರುತ್ತಿದೆ. ಬದಲಾದ ಕಾಲಕ್ಕೆ ಕುಟುಂಬಗಳು ಚಿಕ್ಕವಾಗುತ್ತ ಬಂದಿದ್ದು, ಕೃಷಿ ಭೂಮಿಯೂ ಕೂಡ ಪೀಳಿಗೆಯಿಂದ ಪೀಳಿಗೆಗೆ ಪ್ರತಿ ರೈತರಿಗೆ ಒಂದೆರಡು ಎಕರೆಗೂ ಬಂದಿವೆ. ಜಮೀನಿನಲ್ಲಿ ಉಳುಮೆಗೆ ಅನಾನುಕೂಲ ಆಗುವ ಸಾಗವಾನಿ, ಬೀಟಿ, ಹೊನ್ನಿ, ಮಾವು, ಮತ್ತಿ ಮುಂತಾದ ಗಿಡಗಳನ್ನು ತೆರವುಗೊಳಿಸಲು ರೈತ ಮುಂದಾದರೆ ಅರಣ್ಯ, ಕಂದಾಯ, ಸರ್ವೆ, ಉಪವಿಭಾಗಾಧಿಕಾರಿಗಳ ಇಲಾಖೆಗಳ ಪರವಾನಗಿ ಪಡೆಯಲು ವರ್ಷಗಟ್ಟಲೇ ಕಾಯಬೇಕಾಗಿದೆ. ಐದಾರು ವರ್ಷಗಳಾದರೂ ಪರವಾನಗಿ ಸಿಗುತ್ತಿಲ್ಲ.ರೈತರು ಹೈರಾಣು: ಜಮೀನು ಉತಾರ, ಅರ್ಜಿದಾರರ ಆಧಾರ ಕಾರ್ಡ, ಸ್ಥಳದ ಮೋಜಣಿ ನಕ್ಷೆ, ಕಂದಾಯ ಅಧಿಕಾರಿಯಿಂದ ಭೂಮಿ ಪಡೆದ ಖಾತಾ ಪತ್ರ, ಭೂಮಿ ಮರಗಳ ಮೇಲಿನ ಹಕ್ಕು ಪತ್ರ, ಭೂಮಿಯ ಪಾಲುದಾರರಿದ್ದರೆ ಮಾಲೀಕರ ಒಪ್ಪಿಗೆ ಪತ್ರ, ಕಟಾವು ಮಾಡಬೇಕಾದ ಮರಗಳ ಅಳತೆ ಯಾದಿ ಸೇರಿದಂತೆ ಹತ್ತು ಹಲವು ದಾಖಲೆಗಳನ್ನು ನೀಡಿಯೂ ವರ್ಷಾನುಗಟ್ಟಲೆ ಕಚೇರಿಗಳಿಗೆ ಅಲೆದಾಡುವುದು ರೈತರಿಗೆ ತಪ್ಪುತ್ತಿಲ್ಲ. ಅರಣ್ಯ ಇಲಾಖೆ, ತಹಸೀಲ್ದಾರ ಕಚೇರಿ, ಸರ್ವೇ ಇಲಾಖೆ, ಉಪವಿಭಾಗಾಧಿಕಾರಿಗಳ ಕಚೇರಿ ಸೇರಿದಂತೆ ಎಲ್ಲ ಇಲಾಖೆಗಳ ಬಾಗಿಲಿಗೆ ರೈತ ಎಡತಾಕಿ ಹೈರಾಣು ಆಗುತ್ತಿದ್ದಾರೆ.
ಹಾನಗಲ್ಲ ಅರಣ್ಯ ಇಲಾಖೆಯಲ್ಲಿಯೇ ಒಂದು ವರ್ಷಕ್ಕೆ 45ರಿಂದ 50ಕ್ಕೂ ಅಧಿಕ ಇಂತಹ ಪ್ರಕರಣಗಳು ದಾಖಲಾಗುತ್ತವೆ. ಆದರೆ ಇವು ಇತ್ಯರ್ಥವಾಗಲು ಹಲವು ವರ್ಷಗಳೇ ಬೇಕಾಗುತ್ತದೆ. ಕೆಲವು ಪ್ರಕರಣಗಳು ಇತ್ಯರ್ಥವಾಗುವುದೇ ಇಲ್ಲ. ಅರಣ್ಯ ಇಲಾಖೆಯಿಂದ ಪ್ರಕರಣ ಮುಂದಿನ ಇಲಾಖೆಗೆ ಹೋದರೂ ಕೂಡ ಅಲ್ಲಿ ಅನ್ಯ ಕಾರಣಕ್ಕೆ ಪ್ರಕರಣ ನಿಲ್ಲುತ್ತದೆ. ಇದಕ್ಕಾಗಿ ರೈತರು ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿ ಹೋಗುತ್ತಾರೆ. ಒಂದೊಂದು ಕಚೇರಿಯಲ್ಲಿ ತಿಂಗಳುಗಟ್ಟಲೇ ಪ್ರಕರಣಗಳು ಅಲ್ಲಿಯೇ ಇರುತ್ತವೆ. ಬೆಳೆದ ಗಿಡ ತೆಗೆದು ಕಾಲಕ್ಕೆ ಬೇಕಾದ ಫಸಲು ಮಾಡಿಕೊಳ್ಳಲು ತೀರ ಅನಾನುಕೂಲವಾಗಿರುವ ಈ ನಿಯಮ ಬದಲಾಗಬೇಕು ಎಂದು ರೈತ ಸಂಘ, ಸಾರ್ವಜನಿಕರು ಏನೇ ಒತ್ತಾಸೆ ಮಾಡಿದರೂ ಫಲ ನೀಡಿಲ್ಲ.ಆನ್‌ಲೈನ್ ಕಥೆಯೂ ಅದೆ: ಈ ನಡುವೆ 2024-25ರಲ್ಲಿ ಆನ್‌ಲೈನ್‌ನಲ್ಲಿ ಈ ಪ್ರಕರಣಗಳನ್ನು ಇತ್ಯಾರ್ಥಗೊಳಿಸಬೇಕು ಎಂಬ ನಿಯಮ ಜಾರಿಯಾದರೂ ಕೂಡ ಅದು ಕಾರ್ಯರೂಪಕ್ಕೆ ಬರಲಿಲ್ಲ. ಅದೂ ಕೂಡ ಇನ್ನೊಂದು ರೀತಿಯಲ್ಲಿ ರೈತರನ್ನು ಅಲೆದಾಡಿಸುತ್ತಿದೆ. ಸರ್ಕಾರ ಈ ನಿಯಮವನ್ನು ಬದಲಿಸಿ ಪಕ್ಕದ ಮಹಾರಾಷ್ಟ್ರ ಸರ್ಕಾರದಲ್ಲಿರುವ ನಿಯಮವನ್ನು ಪರಿಶೀಲಿಸಿ ಕೃಷಿ ಭೂಮಿಯಲ್ಲಿನ ಗಿಡಗಳನ್ನು ತೆರವುಗೊಳಿಸಲು ಸರಳ ಮತ್ತು ಶೀಘ್ರ ಅವಕಾಶಕ್ಕಾಗಿ ನಿಯಮ ರೂಪಿಸಿ ರೈತರನ್ನು ಮುಕ್ತಗೊಳಿಸಬೇಕು ಎಂಬ ಕೂಗು ಇದೆ. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಅವರು ಹೇಳುವಂತೆ, ಈಗಾಗಲೇ ಹತ್ತು ಹಲವು ಬಾರಿ, ರೈತರು ಅರ್ಜಿ ಸಲ್ಲಿಸಿಯಾಗಿದೆ. ಆದರೆ ಪ್ರಯೋಜನವಾಗಿಲ್ಲ. ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕೂಡಲೇ ಪರವಾನಗಿ ನೀಡುತ್ತಾರೆ. ರಪ್ತಿಗೆ ಕೂಡ ಸಂಬಂಧಿಸಿದ ಶುಲ್ಕ ಪಡೆದು ಗಿಡ ತೆರವುಗೊಳಿಸಲು ಅನುಕೂಲವಾಗುತ್ತದೆ. ಅರ್ಜಿ ನೀಡಿದ ಕೇವಲ 7-8 ದಿನಗಳಲ್ಲಿ ಕಾರ್ಯ ಪೂರ್ಣಗೊಳ್ಳುತ್ತದೆ. ಈ ನಿಯಮ ಕರ್ನಾಟದಲ್ಲಿಯೂ ಬರಬೇಕು ಎನ್ನುವುದು ರೈತರ ಒತ್ತಾಸೆಯಾಗಿದೆ.
ಸರ್ಕಾರದ ನಿಯಮದಂತೆ ನಮ್ಮಲ್ಲಿ ಮರ ಕಟಾವಿಗೆ ಬಂದ ಪ್ರಕರಣಗಳನ್ನು ವಿಳಂಬವಿಲ್ಲದಂತೆ ಕಂದಾಯ ಇಲಾಖೆಗೆ ಕಳಿಸಲಾಗುತ್ತದೆ. ಕಂದಾಯ, ಸರ್ವೇ, ಉಪವಿಭಾಗಾಧಿಕಾರಿಗಳಿಂದ ಪರಿಶೀಲನೆ ನಂತರ ನಮ್ಮ ಕಚೇರಿಗೆ ಪ್ರಕರಣ ಬಂದ ನಂತರ ಪರವಾನಗಿ ನೀಡುತ್ತೇವೆ. ಅರಣ್ಯ ಇಲಾಖೆಯೇ ಪರವಾನಗಿ ಕೊಡುವಂತಿಲ್ಲ. ಸರ್ಕಾರದ ನಿಯಮ ಬಿಟ್ಟು ಏನೂ ಮಾಡುವಂತಿಲ್ಲ ಎಂದು ಹಾನಗಲ್ಲ ರೇಂಜ್ ಫಾರೆಸ್ಟ ಆಫೀಸರ್ ಗಣೇಶ ಶೆಟ್ಟರ ಹೇಳಿದರು.