ಸಾರಾಂಶ
ಸಿಂಧನೂರಿನಲ್ಲಿ 3 ದಿನ ಆಯೋಜನೆ, ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಉತ್ತರ ಕರ್ನಾಟಕ ಟೆನ್ನಿಸ್ ಅಸೋಸಿಯೇಶನ್ ಸಂಸ್ಥಾಪಕ ಅಧ್ಯಕ್ಷ ಸಿ.ಟಿ.ಪಾಟೀಲ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ಉತ್ತರ ಕರ್ನಾಟಕ ಟೆನ್ನಿಸ್ ಅಸೋಸಿಯೇಶನ್ ಹಾಗೂ ಫ್ಯಾಮಿಲಿ ರಿಕ್ರಿಯೇಶನ್ ಕ್ಲಬ್ ಸಿಂಧನೂರು ಸಹಯೋಗದಲ್ಲಿ ಫೆಬ್ರವರಿ 2, 3 ಮತ್ತು 4ರಂದು ಮೂರು ದಿನಗಳ ಕಾಲ ಸಿಂಧನೂರಿನಲ್ಲಿ ಉತ್ತರ ಕರ್ನಾಟಕ ಮಟ್ಟದ ಲಾನ್ ಟೆನ್ನಿಸ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಉತ್ತರ ಕರ್ನಾಟಕ ಟೆನ್ನಿಸ್ ಅಸೋಸಿಯೇಶನ್ ಸಂಸ್ಥಾಪಕ ಅಧ್ಯಕ್ಷ ಸಿ.ಟಿ.ಪಾಟೀಲ್ ತಿಳಿಸಿದರು.ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 8 ವರ್ಷಗಳಿಂದ ಪ್ರತಿವರ್ಷವೂ ಸಿಂಧನೂರಿನಲ್ಲಿ ರಾಜ್ಯಮಟ್ಟದ ಟೆನ್ನಿಸ್ ಪಂದ್ಯಾವಳಿ ಹಮ್ಮಿಕೊಳ್ಳುತ್ತಾ ಬರಲಾಗಿದೆ. ಈ ಬಾರಿ ಉತ್ತರ ಕರ್ನಾಟಕದ 15 ಜಿಲ್ಲೆಗಳನ್ನು ಒಳಗೊಂಡು ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.
35 ಪ್ಲಸ್, 45 ಪ್ಲಸ್, 55 ಪ್ಲಸ್ ಹಾಗೂ 65 ಪ್ಲಸ್ ಸಿಂಗಲ್ಸ್ ಮತ್ತು ಡಬಲ್ಸ್ ಸ್ಪರ್ಧೆಗಳು ನಗರದ ಎಫ್ಆರ್‌ಸಿಎಸ್ ಕ್ಲಬ್‌ನಲ್ಲಿ ಹಾಗೂ ಓಪನ್ ಸಿಂಗಲ್ಸ್ ಮತ್ತು ಡಬಲ್ಸ್ ಸ್ಪರ್ಧೆಗಳು ಸ್ಥಳೀಯ ಯೂಥ್ ಅಸೋಸಿಯೇಶನ್ ಕ್ಲಬ್‌ನಲ್ಲಿ ನಡೆಯಲಿದ್ದು, ಪ್ರತಿಯೊಬ್ಬರಿಗೂ ಮುಕ್ತ ಅವಕಾಶವಿದೆ ಎಂದರು.ಎಫ್ಆರ್‌ಸಿಎಸ್ ಸದಸ್ಯ ಡಾ.ಎಸ್.ಶಿವರಾಜ ಮಾತನಾಡಿ, ಮಧ್ಯ ಕರ್ನಾಟಕದ ಚಿತ್ರದುರ್ಗ, ದಾವಣಗೆರೆ ಸೇರಿ ಉತ್ತರ ಕರ್ನಾಟಕದ 15 ಜಿಲ್ಲೆಗಳನ್ನು ಒಳಗೊಂಡು ಉತ್ತರ ಕರ್ನಾಟಕ ಅಸೋಸಿಯೇಶನ್ ರಚಿಸಲಾಗಿದೆ. ರಾಯಚೂರಿನಲ್ಲಿ ನೋಂದಣಿ ಮಾಡಲಾಗಿದೆ. ಸಂಸ್ಥಾಪಕ ಅಧ್ಯಕ್ಷ ಅಧ್ಯಕ್ಷರಾಗಿ ಸಿ.ಟಿ.ಪಾಟೀಲ್ ಆಯ್ಕೆಯಾಗಿದ್ದು, ಜಿಲ್ಲೆಗೆ ಒಬ್ಬರಂತೆ 15 ಪ್ರತಿನಿಧಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಈಗಾಗಲೇ 300 ಟೆನ್ನಿಸ್ ಆಟಗಾರರು ಅಸೋಸಿಯೇಶನ್‌ಗೆ ಸದಸ್ಯತ್ವ ಪಡೆದಿದ್ದು, ಇನ್ನೂ 200 ಆಟಗಾರರಿಗೆ ಸದಸ್ಯತ್ವ ನೀಡಲಾಗುವುದು. ಸದಸ್ಯತ್ವಕ್ಕೆ ಶುಲ್ಕ ನಿಗದಿ ಪಡಿಸಲಾಗಿದೆ. 15 ಜಿಲ್ಲೆಗಳಲ್ಲಿಯೂ ಅಕಾಡೆಮಿ ಆರಂಭಿಸಿ ವರ್ಷ ಪೂರ್ತಿ ಮಕ್ಕಳಿಗೆ ಟೆನ್ನಿಸ್, ಬ್ಯಾಡ್ಮಿಂಟನ್ ತರಬೇತಿ ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡುವ ಗುರಿ ಹೊಂದಲಾಗಿದೆ. ಜೊತೆಗೆ ಪ್ರತಿವರ್ಷವು ರಾಜ್ಯಮಟ್ಟದ ಟೆನ್ನಿಸ್ ಪಂದ್ಯಾವಳಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ಎಫ್ಆರ್‌ಸಿಎಸ್ ಕ್ಲಬ್‌ನ ಖಜಾಂಚಿ ಮುರಳೀಧರ ರೆಡ್ಡಿ, ಸದಸ್ಯರಾದ ವಿಶ್ವನಾಥ ಮಾಲಿ ಪಾಟೀಲ್, ಆರ್.ಸಿ.ಪಾಟೀಲ್, ರವಿರಾಜ ಇದ್ದರು.