ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂಧನೂರು
ಇಲ್ಲಿನ ಶೇಖರಪ್ಪ ಧುಮತಿ ವಕೀಲರಿಗೆ ಅಪರಿಚಿತ ವ್ಯಕ್ತಿಯೊಬ್ಬ ಪದೇಪದೆ ಮೊಬೈಲ್ ಕರೆ ಮಾಡಿ ಜೀವ ಬೆದರಿಕೆ ಹಾಕಿರುವುದು ಖಂಡನೀಯವಾಗಿದ್ದು, ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಆ ವ್ಯಕ್ತಿಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಪಿಸಿ ಮತ್ತು ಎಎಸ್ಐ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ರಾಮನಗೌಡ ಒತ್ತಾಯಿಸಿದರು.ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಸಮಕಲ್ ಗ್ರಾಮದ ದೊಡ್ಡ ದುರುಗೇಶ ಮತ್ತು ಬಳಗಾನೂರು ಪೊಲೀಸ್ ಕಾನ್ಸ್ಟೇಬಲ್ ಮಂಜುನಾಥ ಯಂಕಪ್ಪ ನಡುವೆ ಮಾರಾಮಾರಿ ಗಲಾಟೆಯಾಗಿ ಸಿಂಧನೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಎಸ್ಸಿ ಪ್ರಕರಣ ದಾಖಲಾಗಿದೆ. ದೊಡ್ಡ ದುರುಗೇಶ ಪರವಾಗಿ ವಕಾಲತು ವಹಿಸಿರುವ ಶೇಖರಪ್ಪ ಧುಮತಿ ಅವರಿಗೆ ಮಂಜುನಾಥನ ಕುಮ್ಮಕ್ಕಿನಿಂದ ಅನಾಮಿಕ ವ್ಯಕ್ತಿಯೊಬ್ಬ ಅ.5 ರಿಂದ ನಿರಂತರವಾಗಿ ಮೊಬೈಲ್ ಕರೆ ಮಾಡಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದಲ್ಲದೆ, ಕೊಲೆ ಬೆದರಿಕೆ ಹಾಕು ತ್ತಿದ್ದಾನೆ. ಇದಲ್ಲದೆ ಕಕ್ಷಿದಾರನ ಪತ್ನಿ ಸ್ವಪ್ನ ಅವರಿಗೂ ಕರೆ ಮಾಡಿ ಮನಸೋಇಚ್ಛೆ ನಿಂದಿಸುತ್ತಿದ್ದಾನೆ. ಇದರಿಂದ ವಕೀಲರು ಮತ್ತು ಕಕ್ಷಿದಾರನ ಪತ್ನಿ ವಿಚಲಿತರಾಗಿದ್ದಾರೆ ಎಂದು ವಿವರಿಸಿದರು.
ಪೊಲೀಸರ ಬೇಜವಾಬ್ದಾರಿ, ನಿರ್ಲಕ್ಷತನ ಮತ್ತು ವಕೀಲರು ನೀಡಿದ ದೂರಿನ ಕುರಿತು ವಿಚಾರಣೆ ನಡೆಸದೆ, ಮೊಬೈಲ್ ಫೋನ್ನಲ್ಲಿದ್ದ ಮಾತಿನ ಸಂವಹನದ ಸಾಕ್ಷಿಗಳನ್ನು ಪರಿಗಣಿಸದೆ ಕರ್ತವ್ಯಲೋಪ ಎಸಗಿದ ಎಎಸ್ಐ ವೀರೇಶ ಮತ್ತು ವಕೀಲರಿಗೆ, ಕಕ್ಷಿದಾರನ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಅನಾಮಿಕ ವ್ಯಕ್ತಿಗೆ ಕುಮ್ಮಕ್ಕು ನೀಡಿರುವ ಬಳಗಾನೂರು ಪೊಲೀಸ್ ಕಾನ್ಸ್ಟೇಬಲ್ ಮಂಜುನಾಥ ಅವರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಿ, ತನಿಖೆಗೆ ಒಳಪಡಿಸಬೇಕು. ವಕೀಲರು ಮತ್ತು ಅವರ ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ ಕಲ್ಪಿಸಬೇಕು. ಅನಾಮಧೇಯ ವ್ಯಕ್ತಿ ಬಂಧನವಾದ ನಂತರ ಆತನ ಪರ ಯಾವ ವಕೀಲರು ವಕಾಲತು ವಹಿಸಬಾರದು ಎಂದು ಆಗ್ರಹಿಸಿದರು.ನಂತರ ಶೇಖರಪ್ಪ ಧುಮತಿ ವಕೀಲ ಮಾತನಾಡಿ, ಪದೇಪದೆ ಕರೆ ಮಾಡಿ ನನಗೆ ಮತ್ತು ನನ್ನ ಹೆಂಡತಿ, ಮಕ್ಕಳನ್ನು ಸುಫಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕುತ್ತಿರುವುದಿಂದ ನನಗೆ ಜೀವ ಭಯವಿದೆ. ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಮ್ಮ ಕುಟುಂಬಕ್ಕೆ ಮತ್ತು ಕಕ್ಷಿದಾರನ ಪತ್ನಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಎಚ್.ರಾಮನಗೌಡ, ಅಬ್ದುಲ್ ಗನಿಸಾಬ ವಕೀಲ, ಜಿ.ಎಸ್.ಆರ್.ಕೆ.ರೆಡ್ಡಿ, ಕೆ.ಭೀಮನಗೌಡ, ಖಾಜಿಮಲಿಕ್, ಆರ್.ಕೆ.ನಾಗರಾಜ, ಬಾಲಸ್ವಾಮಿ, ಜಗದೀಶ, ನಿರುಪಾದೆಪ್ಪ ಬೊಮ್ಮನಾಳ, ಕೆ.ರಾಜು, ಶರಣಬಸವ ಉಮಲೂಟಿ ಮತ್ತಿತರರು ಇದ್ದರು.