ವಕೀಲರ ‘ಕುರುಕ್ಷೇತ್ರ’ ಪ್ರದರ್ಶನ: ಹಿರಿಯರಿಗೆ ಬೆಳ್ಳಿ ಕಿರೀಟ

| Published : May 26 2024, 01:33 AM IST

ಸಾರಾಂಶ

ವಕೀಲರು ಪೌರಾಣಿಕ ನಾಟಕ ಪ್ರದರ್ಶನದ ಮೂಲಕ ತಮ್ಮ ಕಲಾಸಕ್ತಿಯನ್ನು ಪ್ರದರ್ಶಿಸಿರುವುದನ್ನು ಶ್ಲಾಘಿಸಿದ ನ್ಯಾಯಾಧೀಶರು, ನಾಟಕದಲ್ಲಿ ಕಲಾವಿದರು ಭೀಮ, ದುರ್ಯೋಧನನ ಪಾತ್ರ ವಹಿಸುತ್ತಾರೆ, ಅದೇ ಪಾತ್ರದಲ್ಲಿ ಮನೆಗೆ ಹೋದರೆ ಸಮಸ್ಯೆಯಾಗುತ್ತದೆ. ಹಾಗೇ ವಕೀಲರು, ನ್ಯಾಯಾಧೀಶರು ಕರ್ತವ್ಯದಲ್ಲಿದ್ದಾಗ ತಮ್ಮ ಪಾತ್ರದಲ್ಲಿರುತ್ತಾರೆ. ನಂತರ ಸಾಮಾನ್ಯ ಮನುಷ್ಯರಾಗಿರಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ತುಮಕೂರುಬದುಕಿನಲ್ಲಿ ಎಲ್ಲರೂ ಒಂದಲ್ಲಾ ಒಂದು ಪಾತ್ರ ವಹಿಸಬೇಕಾಗುತ್ತದೆ. ಆದರೆ ಆ ಪಾತ್ರಕ್ಕೆ ಅಂಟಿಕೊಳ್ಳದೇ ಪಾತ್ರದ ಒಳ್ಳೆಯ ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ನೆಮ್ಮದಿ ಕುಟುಂಬ, ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಜಯಂತ್‌ಕುಮಾರ್ ಹೇಳಿದರು.ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಶ್ರೀ ಸಂಕಷ್ಟಹರ ಗಣಪತಿ ವಕೀಲರ ಕಲಾ ಬಳಗ ಶನಿವಾರ ಪ್ರದರ್ಶಿಸಿದ ಕುರುಕ್ಷೇತ್ರ ನಾಟಕ ಹಾಗೂ ಕಲಾ ಸಂಘದ 25ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ವಕೀಲರು ಪೌರಾಣಿಕ ನಾಟಕ ಪ್ರದರ್ಶನದ ಮೂಲಕ ತಮ್ಮ ಕಲಾಸಕ್ತಿಯನ್ನು ಪ್ರದರ್ಶಿಸಿರುವುದನ್ನು ಶ್ಲಾಘಿಸಿದ ನ್ಯಾಯಾಧೀಶರು, ನಾಟಕದಲ್ಲಿ ಕಲಾವಿದರು ಭೀಮ, ದುರ್ಯೋಧನನ ಪಾತ್ರ ವಹಿಸುತ್ತಾರೆ, ಅದೇ ಪಾತ್ರದಲ್ಲಿ ಮನೆಗೆ ಹೋದರೆ ಸಮಸ್ಯೆಯಾಗುತ್ತದೆ. ಹಾಗೇ ವಕೀಲರು, ನ್ಯಾಯಾಧೀಶರು ಕರ್ತವ್ಯದಲ್ಲಿದ್ದಾಗ ತಮ್ಮ ಪಾತ್ರದಲ್ಲಿರುತ್ತಾರೆ. ನಂತರ ಸಾಮಾನ್ಯ ಮನುಷ್ಯರಾಗಿರಬೇಕಾಗುತ್ತದೆ ಎಂದರು.ಕುಟುಂಬದಲ್ಲಿ ಹೆಣ್ಣು ತಾಯಿಯಾಗಿ, ಮಗಳಾಗಿ, ಹೆಂಡತಿಯಾಗಿ, ಅಕ್ಕನಾಗಿ, ತಂಗಿಯಾಗಿ, ನಾದಿನಿಯಾಗಿ, ಅತ್ತಿಗೆಯಾಗಿ ಪಾತ್ರ ವಹಿಸುತ್ತಾಳೆ. ಆ ಪಾತ್ರವನ್ನು ಅವರು ಸಮರ್ಥವಾಗಿ ನಿಭಾಯಿಸಬೇಕು. ಅತ್ತೆಯಾದವಳು ಸೊಸೆಯ ಮೇಲೆ ದಬ್ಬಾಳಿಕೆ ಮಾಡುವ ಪಾತ್ರವಾಗಬಾರದು. ಯಾವುದೇ ಪಾತ್ರದ ಒಳ್ಳೆಯ ಅಂಶಗಳನ್ನಷ್ಟೇ ನಾವು ಬದುಕಿಗೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಈ ವೇಳೆ ವಕೀಲರೂ ಆದ ಕಲಾ ಬಳಗದ ಅಧ್ಯಕ್ಷ ಎಂ.ಸಿ.ಚಂದ್ರಯ್ಯ ಅವರಿಗೆ ಕಲಾರತ್ನ, ವಕೀಲ, ಹಿರಿಯ ಕಲಾವಿದ ಡಿ.ಶಿವಮಹದೇವಯ್ಯರಿಗೆ ಕಲಾ ಸಾಮ್ರಾಟ್, ಜಕ್ಕೇನಹಳ್ಳಿ ಎಸ್.ರಾಜಣ್ಣ ಅವರಿಗೆ ಸಂಗೀತ ಶ್ರೀನಿಧಿ ಪ್ರಶಸ್ತಿ ವಿತರಿಸಿದ ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿಯವರು, ಈ ಕಲಾವಿದರಿಗೆ ಬೆಳ್ಳಿ ಕಿರೀಟ ತೊಡಿಸಿ ಅವರ ಹಲವು ವರ್ಷಗಳ ಕಲಾ ಸೇವೆಯನ್ನು ಗೌರವಿಸಿ ಸನ್ಮಾನಿಸಿದರು.

ನಂತರ ಮಾತನಾಡಿದ ಕಾರದ ವೀರಬಸವ ಸ್ವಾಮೀಜಿ, ಧರ್ಮ ಪಾಲನೆಯಿಂದ ಶಕ್ತಿವಂತರಾಗಿ ಬಾಳಲು ಸಾಧ್ಯ. ಕುರುಕ್ಷೇತ್ರದ ಧರ್ಮ ರಕ್ಷಣೆಯ ಸಂದೇಶ ನಮಗೆಲ್ಲಾ ಆದರ್ಶವಾಗಲಿ, ಆ ಮೂಲಕ ಎಲ್ಲರೂ ಸೌಹಾರ್ದತೆಯಿಂದ ಬಾಳೋಣ ಎಂದು ಹೇಳಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಕೆಂಪರಾಜಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ನ್ಯಾಯಾಧೀಶೆ ಜಿ.ಎಸ್.ಪ್ರಶೀಲ ಕುಮಾರಿ, ಜೆ.ಅನಂತ, ಎ.ನಾಗೀರೆಡ್ಡಿ, ಟಿ.ಪಿ.ರಾಮಲಿಂಗೇಗೌಡ, ಸಂಧ್ಯಾರಾವ್, ಮುನಿರಾಜು, ನೂರುನ್ನೀಸ, ಎಚ್.ಪಿ.ಚರಿತ, ಲಕ್ಷ್ಮೀಭವಾನಿ ಶಂಕರಪ್ಪ, ಎನ್.ಗಾಯತ್ರಿ, ಕಲಾ ಸಂಘದ ಅಧ್ಯಕ್ಷ ಎಂ.ಸಿ.ಚಂದ್ರಯ್ಯ, ವಕೀಲರು ಹಾಗೂ ಕಲಾವಿದರಾದ ಡಿ.ಶಿವಮಹದೇವಯ್ಯ, ಎಸ್.ರಾಜಣ್ಣ, ಬಿಜೆಪಿ ಮುಖಂಡ ಅರಕೆರೆ ರವೀಶ್, ರೊಟೇರಿಯನ್ ಉಮೇಶ್, ಹಿರಿಯ ಕಲಾವಿದ ಎಂ.ವಿ.ನಾಗಣ್ಣ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ವಕೀಲರು ಭಾಗವಹಿಸಿದ್ದರು.