ವಕೀಲರಿಗೆ ವೃತ್ತಿ ಬದ್ಧತೆ ಜತೆಗೆ ಸತತ ಅಧ್ಯಯನ ಅಗತ್ಯ: ನ್ಯಾಯಾಧೀಶ ಬಿ.ಬಿ. ಜಕಾತಿ

| Published : Dec 21 2023, 01:15 AM IST

ವಕೀಲರಿಗೆ ವೃತ್ತಿ ಬದ್ಧತೆ ಜತೆಗೆ ಸತತ ಅಧ್ಯಯನ ಅಗತ್ಯ: ನ್ಯಾಯಾಧೀಶ ಬಿ.ಬಿ. ಜಕಾತಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರಿನಲ್ಲಿ ವಕೀಲರ ಸಂಘದಿಂದ ವಕೀಲರ ದಿನಾಚರಣೆ, ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು

ಕನ್ನಡಪ್ರಭ ವಾರ್ತೆ ಸಿಂಧನೂರು

ವಕೀಲರು ವೃತ್ತಿ ಬದ್ಧತೆಯೊಂದಿಗೆ ಸತತವಾಗಿ ಅಧ್ಯಯನ ಮಾಡಿ ಕಕ್ಷಿದಾರರಿಗೆ ನ್ಯಾಯ ಒದಗಿಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಮೂರನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಬಿ. ಜಕಾತಿ ಕರೆ ನೀಡಿದರು.

ಅವರು ಬುಧವಾರ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಮೊದಲ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ ಅವರು ಮೂಲತಃ ವಕೀಲರು. ಅವರು ತಮ್ಮ ಜ್ಞಾನ ಬಲದಿಂದ ಅತ್ಯುನ್ನತ ಹುದ್ದೆಗೆ ಏರಿದರು. ಅವರಂತೆ ವಕೀಲರು ತಮ್ಮ ವೃತ್ತಿಯೊಂದಿಗೆ ನಾಯಕತ್ವದ ಗುಣ ಬೆಳೆಸಿಕೊಂಡು ರಾಜಕೀಯ ರಂಗಕ್ಕೆ ಪ್ರವೇಶಿಸಬೇಕು. ಇದರಿಂದಾಗಿ ವಕೀಲರು ಕಾನೂನಿನ ಜ್ಞಾನದಿಂದಾಗಿ ಹೆಚ್ಚು ಹೆಚ್ಚು ಜನಪರ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ದೀಪಾ ಜಿ. ಮನೇಕರ್ ಮಾತನಾಡಿ, ಕಿರಿಯ ವಕೀಲರು ಮುಖ್ಯವಾಗಿ ನ್ಯಾಯಾಲಯಗಳ ಕಾರ್ಯ ಕಲಾಪಗಳಲ್ಲಿ ಭಾಗವಹಿಸಬೇಕು. ವಸ್ತ್ರ ಸಂಹಿತೆಯನ್ನು ನ್ಯಾಯಾಲಯದಲ್ಲಿ ಕಡ್ಡಾಯವಾಗಿ ಎಲ್ಲ ವಕೀಲರು ಪಾಲಿಸಬೇಕು. ನಂಬಿ ಬಂದ ಕಕ್ಷಿದಾರರಿಗೆ ನ್ಯಾಯಕೊಡಿಸುವ ನೈಜ ಪ್ರಯತ್ನವನ್ನು ವಕೀಲರು ಪಾಲಿಸಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎನ್. ರಾಮನಗೌಡ ಮಾತನಾಡಿ, ಸಿಂಧನೂರಿನ ವಕೀಲರು ಪ್ರತಿಯೊಂದು ಸೌಲಭ್ಯ, ನ್ಯಾಯಾಲಯದ ಕಟ್ಟಡಗಳನ್ನು ಹೋರಾಟಗಳ ಮೂಲಕವೆ ಪಡೆದುಕೊಂಡಿದ್ದಾರೆ. ಇಂದು ಸಿಂಧನೂರಿನಲ್ಲಿ 5 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಮುಖ್ಯವಾಗಿ ಮೂರನೇ ಜಿಲ್ಲಾ ಹೆಚ್ಚುವರಿ ನ್ಯಾಯಾಲಯಕ್ಕೆ ಎಂಟು ಹೊಸ ಕಾಯ್ದೆಗಳ ವಿಚಾರಣಾ ಅಧಿಕಾರದ ವ್ಯಾಪ್ತಿಯನ್ನು ನೀಡಿರುವುದು ವಕೀಲ ವೃಂದಕ್ಕೆ ಸಂತಸ ತಂದಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ. ಪಾಟೀಲ್, ಶಾಸಕರಾದ ಹಂಪನಗೌಡ ಬಾದರ್ಲಿ, ಆರ್. ಬಸನಗೌಡ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ನೀಡಿದ ಸಹಕಾರ ಮರೆಯಲಾಗುವುದಿಲ್ಲ. ಅವರೆಲ್ಲರಿಗೂ ವಕೀಲರ ಸಂಘ ಅಭಿನಂದಿಸುತ್ತದೆ ಎಂದರು.

ಅನಾವರಣ: ಆರಂಭದಲ್ಲಿ ಶಾಸಕ ಹಂಪನಗೌಡ ಬಾದರ್ಲಿ 8 ವಿಶೇಷ ಕಾಯ್ದೆಗಳ ನಾಮಫಲಕವನ್ನು ಹಾಗೂ ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ ವಕೀಲರ ಹಿತರಕ್ಷಣಾ ಕಾಯ್ದೆ ನಾಮಫಲಕ ಅನಾವಣಗೊಳಿಸಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆ, ಶಾಸಕರಾದ ಹಂಪನಗೌಡ ಬಾದರ್ಲಿ, ಆರ್. ಬಸನಗೌಡ ತುರ್ವಿಹಾಳ, ಮಾತನಾಡಿದರು. ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಆನಂದಪ್ಪ ಎಂ., ಅಚ್ಚಪ್ಪ ದೊಡ್ಡಬಸವರಾಜ, ಕಾರ್ಯದರ್ಶಿ ಶಿವಕುಮಾರ ಉಮಲೂಟಿ, ಖಜಾಂಚಿ ಶರಣಬಸವರ ಉಮಲೂಟಿ ಇದ್ದರು.

ಸನ್ಮಾನ: ಇದೇ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಮಲ್ಲಿಕಾರ್ಜುನ ಮೈಲಾಪೂರ, ಜಿ.ವಿ.ಜೋಷಿ, ಗೋಪಾಲಕೃಷ್ಣ ಮುನ್ಸಿ ಅವರನ್ನು ವಕೀಲರ ಸಂಘದಿಂದ ಸನ್ಮಾನಿಸಲಾಯಿತು. ಹಾಗೂ ಉಮಾಶಂಕರ ಫೌಂಡೇಶನ್ ವತಿಯಿಂದ ವಕೀಲರಾದ ಜಿಎಸ್‌ಆರ್‌ಕೆ ರೆಡ್ಡಿ, ಶ್ರೀಧರ ಕುಲಕರ್ಣಿ ಹಾಗೂ ಆರ್.ಕೆ. ನಾಗರಾಜ ಅವರನ್ನು ಫೌಂಡೇಶನ ಅಧ್ಯಕ್ಷ ಎಸ್.ಎಸ್. ಹಿರೇಮಠ ಹಾಗೂ ಸಹನಾ ಹಿರೇಮಠ ಸನ್ಮಾನಿಸಿದರು. ಶೇಖರಪ್ಪ ದುಮತಿ ಸ್ವಾಗತಿಸಿದರು. ಹೇಮಾಲತಾ ಜೋಳದರಾಶಿ, ಸುರೇಶರೆಡ್ಡಿ ಚನ್ನಳ್ಳಿ ನಿರೂಪಿಸಿದರು. ವೀರೇಶ ಚಿಂಚಿರಕಿ ವಂದಿಸಿದರು.