ಕೇಂದ್ರೀಯ ಮಹಾವಿದ್ಯಾಲಯ ಶೀಘ್ರದಲ್ಲಿ ಸ್ಥಾಪನೆ

| Published : Dec 01 2023, 12:45 AM IST

ಕೇಂದ್ರೀಯ ಮಹಾವಿದ್ಯಾಲಯ ಶೀಘ್ರದಲ್ಲಿ ಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರೀಯ ಮಹಾವಿದ್ಯಾಲಯ ಶೀಘ್ರದಲ್ಲಿ ಸ್ಥಾಪನೆ

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸತಿ ಶಾಲೆ ಸ್ಥಾಪನೆಗೆ ತಾಂತ್ರಿಕ ಅಡಚಣೆಗಳಿವೆ. ನಂದಗಡದಲ್ಲಿ ಸ್ಥಾಪನೆಯಾಗಿರುವ ವಸತಿ ಶಾಲೆಯ ಮಾದರಿಯಲ್ಲಿ ಅಥಣಿಯಲ್ಲಿ ಕೇಂದ್ರೀಯ ಮಹಾವಿದ್ಯಾಲಯ ಶೀಘ್ರದಲ್ಲಿ ಸ್ಥಾಪಿಸಲಾಗುವುದು. ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ಇದು ಬಹಳ ಅನುಕೂಲವಾಗಲಿದೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲೂಕು ಹಾಲುಮತ ಕುರುಬರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಕನಕದಾಸರ 536ನೇ ಜಯಂತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಕನಕ ಭವನದ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಸರ್ಕಾರದಿಂದ ಹೆಚ್ಚಿನ ಅನುದಾನ ಮಂಜೂರು ಮಾಡಿ ಕಾಮಗಾರಿ ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬೆಳಗಾವಿಯ ಅಧಿವೇಶನದಲ್ಲಿ ಸಮುದಾಯದ ಮುಖಂಡರೊಂದಿಗೆ ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಶೀಘ್ರವೇ ಹೆಚ್ಚು ಅನುದಾನ ಒದಗಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

ದಾಸ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಸಂತ ಶ್ರೇಷ್ಠ ಕನಕದಾಸರ ಜೀವನ ಮತ್ತು ಸಾಧನೆ ವಿಶ್ವಕ್ಕೆ ಮಾದರಿ. ಅವರು ಕನ್ನಡ ನಾಡಿನಲ್ಲಿ ಜನಿಸಿದ್ದು ನಮ್ಮೆಲ್ಲರಿಗೆ ಹೆಮ್ಮೆ. ಅವರ ಆಚಾರ, ವಿಚಾರ ಮತ್ತು ನೀಡಿದ ಸಂದೇಶಗಳನ್ನು ನಾವು ಅನುಸರಿಸಿದಾಗ ಅವರ ಜಯಂತಿ ಆಚರಣೆ ಅರ್ಥ ಪೂರ್ಣವಾಗುತ್ತದೆ ಎಂದು ತಿಳಿಸಿದರು.

ದಾಸ ಸಾಹಿತ್ಯದಲ್ಲಿಯೇ ಅತ್ಯಂತ ಶ್ರೇಷ್ಠ ಸಾಹಿತ್ಯದ ಜ್ಞಾನ ಹೊಂದಿದ್ದ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಮತ್ತು ತಮ್ಮ ದಾಸ ಸಾಹಿತ್ಯದ ಮೂಲಕ ಕನ್ನಡ ನಾಡಿನ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಜಾತಿ ಪದ್ಧತಿ ಮತ್ತು ಸಮಾಜದ ಮೌಢ್ಯಗಳ ವಿರುದ್ಧ ಜನ ಜಾಗೃತಿ ಮೂಡಿಸಿದ್ದಾರೆ. ಅವರ ಸಾಹಿತ್ಯ ಅರಿತು ನಾವೆಲ್ಲರೂ ಜೀವನದಲ್ಲಿ ಅನುಸರಿಸಿದಾಗ ನಮ್ಮ ಬದುಕು ಕೂಡ ಸುಂದರವಾಗುತ್ತದೆ ಎಂದರು. ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ಹಾಲುಮತದ ಸಮಾಜದವರು ಸಾಮಾಜಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿಯಾಗಲು ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೇ ಅವರು ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎಂದರು. ತಾಲೂಕು ಹಾಲುಮತ ಕುರುಬರ ಸಂಘದ ಅಧ್ಯಕ್ಷ ರಾವಸಾಬ್‌ ಬೇವನೂರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಅಂಕು - ಡೊಂಕು ತಿದ್ದಿ ಜನರಿಗೆ ಜಾತ್ಯತೀತ ಪ್ರಜ್ಞೆಯ ಬೆಳಕು ಹರಿಸಿದ ಕನಕದಾಸರ ಸಂದೇಶಗಳು ನಮ್ಮೆಲ್ಲರಿಗೆ ದಾರಿದೀಪ. ಅಥಣಿ ಪಟ್ಟಣದ ತಂಗಡಿ ಶಿನಾಳ್ ರಸ್ತೆಯಲ್ಲಿ ₹1.70 ಕೋಟಿ ಅನುದಾನದಲ್ಲಿ ಕನಕ ಭವನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ರಾಜ್ಯ ಸರ್ಕಾರದಿಂದ ಇನ್ನೂ ಅನುದಾನ ಬರದಿದ್ದರಿಂದ ಕಾಮಗಾರಿ ಅರ್ಧದಲ್ಲಿ ನಿಂತಿದ್ದು, ಕಾಗವಾಡ ಶಾಸಕರು ಮತ್ತು ಅಥಣಿ ಶಾಸಕರು ಈ ಭವನದ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಅನುದಾನ ಒದಗಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಜಂಬಗಿಯ ಸುರೇಶ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಾಜಿ ಶಾಸಕ ಶಹಜಾನ ಡೊಂಗರಗಾವ, ಮುಖಂಡ ಗಜಾನನ ಮಂಗಸೂಳಿ, ಸದಾಶಿವ ಬುಟಾಳಿ, ಸುರೇಶ್ ಮಾಯಣ್ಣವರ, ಪುರಸಭಾ ಸದಸ್ಯ ಬೀರಪ್ಪ ಯಕ್ಕಂಚಿ, ರಾವಸಾಬ ಐಹೊಳೆ, ಸುರೇಶ್ ಇಚೇರಿ, ನಿಂಗಪ್ಪ ಐನಾಪುರ, ಬಾಬು ಮೆಂಡಿಗೇರಿ, ಚಿದಾನಂದ ಮೂಕಣಿ, ಬೀರಪ್ಪ ಪೂಜಾರಿ, ಪರಶುರಾಮ ಕೋಳಿಕರ, ಕಲ್ಲಪ್ಪ ಮೇತ್ರಿ, ಜಕ್ಕಪ್ಪ ಬೇವನೂರ, ತುಕಾರಾಮ ದೇವಖಾತೆ, ಮಹಾಂತೇಶ ಲಂಗೋಟಿ, ಅಮೋಘ ಪೂಜಾರಿ, ಪುರಸಭೆ ಮುಖ್ಯ ಅಧಿಕಾರಿ ಅಶೋಕ ಗುಡಿಮನಿ, ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಅಬಕಾರಿ ಅಧಿಕಾರಿ ಮಹಾಂತೇಶ ಬಂಡಗರ, ಅಭಿಯಂತರ ವೀರಣ್ಣ ವಾಲಿ ಸೇರಿದಂತೆ ಹಲವರಿದ್ದರು. ಸುರೇಶ ಇಚೇರಿ ಸ್ವಾಗತಿಸಿದರು. ಅಶೋಕ ಕೌಲಗುಡ್ಡ ನಿರೂಪಿಸಿದರು. ಬೀರಪ್ಪ ಯಕ್ಕಂಚಿ ವಂದಿಸಿದರು. ಅಥಣಿ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಭಕ್ತ ಕನಕದಾಸರ ಭಾವಚಿತ್ರವನ್ನು ಸಂಭ್ರಮದಿಂದ ಮೆರವಣಿಗೆ ಮಾಡಲಾಯಿತು. ಮೆರವಣಿಗೆಗೆ ಶಾಸಕ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಡೊಳ್ಳು ಕುಣಿತದ ಕಲಾತಂಡಗಳು ಭಾಗವಹಿಸಿದ್ದವು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ ಕನಕದಾಸರ ಭಾವಚಿತ್ರ ಮೆರವಣಿಗೆ ಅಂಬೇಡ್ಕರ್ ವೃತ್ತದ ಮೂಲಕ ದಡ್ಡಿ ಸಿದ್ದೇಶ್ವರ ದೇವಸ್ಥಾನದಲ್ಲಿ ಸಮಾರೋಪಗೊಂಡ ನಂತರ ವೇದಿಕೆ ಕಾರ್ಯಕ್ರಮ ಜರುಗಿತು.