ಮದುವೆಗೆ ಒಪ್ಪದ ಶಿಕ್ಷಕಿ ಅಪಹರಣ

| Published : Dec 01 2023, 12:45 AM IST

ಸಾರಾಂಶ

ಮದುವೆ ಮಾಡಿಕೊಡಲು ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಸಂಬಂಧಿಕರೇ ಯುವತಿಯನ್ನೇ ಅಪರಿಸಿದ ಘಟನೆ ನಗರದ ಹೊರವಲಯ ಬಿಟ್ಟಗೌಡನಹಳ್ಳಿಯ ಬಳಿ ಗುರುವಾರ ನಡೆದಿದೆ. ಶಿಕ್ಷಕಿ ಅರ್ಪಿತಾ ಸಂಬಂಧಿ ರಾಮು ಎಂಬಾತನೇ ಈ ಕೃತ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಗಳ ಪತ್ತೆಗೆ ಮೂರು ತಂಡಗಳ ರಚಿಸಲಾಗಿತ್ತು. ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ ಮದುವೆ ಮಾಡಿಕೊಡಲು ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಸಂಬಂಧಿಕರೇ ಯುವತಿಯನ್ನೇ ಅಪರಿಸಿದ ಘಟನೆ ನಗರದ ಹೊರವಲಯ ಬಿಟ್ಟಗೌಡನಹಳ್ಳಿಯ ಬಳಿ ಗುರುವಾರ ನಡೆದಿದೆ. ಕನಕ ಜಯಂತಿ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇತ್ತು. ಆದರೆ ಶಾಲೆಯಲ್ಲಿ ಕಾರ್ಯಕ್ರಮ ಇದ್ದುದರಿಂದ ಶಿಕ್ಷಕಿ ಅರ್ಪಿತ ರೆಡಿಯಾಗಿ ಬೆಳಿಗ್ಗೆಯೇ ಶಾಲೆಗೆ ತೆರಳಲು ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆ ಬದಿಯ ಶಾಲೆ ಮುಖ್ಯದ್ವಾರದ ಬಳಿಯೇ ಅಪಹರಣ ಮಾಡಿದ್ದಾರೆ. ಅರ್ಪಿತಾ ಸಂಬಂಧಿ ರಾಮು ಎಂಬಾತನೇ ಈ ಕೃತ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಏಕೆಂದರೆ ಹದಿನೈದು ದಿನಗಳ ಹಿಂದೆಯೇ ರಾಮು ಮತ್ತು ಪೋಷಕರು ಮದುವೆ ಪ್ರಸ್ತಾಪದೊಂದಿಗೆ ಯುವತಿ ಮನೆಗೆ ಬಂದಿದ್ದರು. ಮದುವೆ ಪ್ರಸ್ತಾಪಕ್ಕೆ ಯುವತಿ ಹಾಗು ಯುವತಿ ಕುಟುಂಬ ಸದಸ್ಯರಿಂದಲೂ ವಿರೋಧವಿತ್ತು. ಮದುವೆ ಮಾಡಿಕೊಡಲು ಒಪ್ಪದ ಹಿನ್ನೆಲೆಯಲ್ಲಿ ಯುವತಿಯನ್ನೇ ಕಿಡ್ನಾಪ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಎಸ್ಪಿ ಸುಜೀತಾ ಭೇಟಿ ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಶಿಕ್ಷಕಿ ಅಪಹರಣವಾದ ಘಟನಾ ಸ್ಥಳಕ್ಕೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿತ್ತು.

ಅರ್ಪಿತ ಕೆಲಸಕ್ಕೆ ಹೋಗುವ ಶಾಲೆ ಮತ್ತು ಮನೆ ಹತ್ತಿರದಲ್ಲೆ ಇದ್ದು, ಇದನ್ನು ಗಮನಿಸಿ ಇನ್ನೋವ ಕಾರಿನಲ್ಲಿ ಐದಾರು ಜನರು ಬಂದಿದ್ದು, ಮೊದಲು ಓರ್ವ ವ್ಯಕ್ತಿ ಆಕೆ ಬರುವ ರಸ್ತೆಯ ಎದುರು ನಿಂತು ಸಿಗ್ನಲ್ ನೀಡುತ್ತಿದ್ದನು. ಶಾಲೆ ಬಳಿ ರಸ್ತೆಗೆ ಕಾಲಿಡುತ್ತಿದ್ದಂತೆ ಕಾರು ಆಕೆಯ ಹತ್ತಿರ ಬಂದಿದ್ದು, ಕಾರಿನಿಂದ ಕೆಲವರು ಇಳಿದು ಆಕೆಯನ್ನು ಹೊತ್ತುಕೊಂಡು ಕೂರಿಸಿಕೊಂಡು ಅತೀ ವೇಗದಲ್ಲಿ ಕಾಲ್ಕಿತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಿಡ್ನಾಪ್ ಮಾಡುವಾಗ ಆಕೆ ಕೂಗಿ ಅರುಚಾಡಿದ್ದು, ಇದನ್ನು ನೋಡಿದ ಅಕ್ಕಪಕ್ಕದ ಜನರು ಓಡಿ ಬಂದಿದ್ದು, ಅಷ್ಟರಲ್ಲಿ ಅರ್ಪಿತಾಳನ್ನು ಅಪಹರಿಸಿಕೊಂಡು ಕಾರಿನಲ್ಲಿ ಪರಾರಿಯಾಗಿದ್ದರು.

ಮಿಂಚಿನ ಕಾರ್ಯಾಚರಣೆ

ಆರೋಪಿಗಳ ಪತ್ತೆಗೆ ಮೂರು ತಂಡಗಳ ರಚಿಸಲಾಗಿತ್ತು. ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರಂಭದಲ್ಲಿ ಕೊಡ್ಲಿಪೇಟೆ ಮಾರ್ಗದಲ್ಲಿ ಲೋಕೇಶನ್‌ ಪತ್ತೆಯಾಗಿತ್ತು. ನಂತರದಲ್ಲಿ ಗುಂಡ್ಯ ಮುಂದಿರುವ ನೆಲ್ಯಾಡಿ ಇನ್ನೋವಾ ಕಾರನ್ನು ಅಡ್ಡಗಟ್ಟಿ ಯುವತಿಯನ್ನು ವಶಕ್ಕೆ ಪಡೆದು ಅಪಹರಣಕಾರರನ್ನು ಬಂಧಿಸಲಾಗಿದೆ.

ಬಂಧಿತರನ್ನು ನಗರದ ಬಡಾವಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಂಧಿತ ರಾಮು ತನ್ನ ಅತ್ತೆ ಮಗಳಾದ ಅರ್ಪಿತಾಳನ್ನು ತನ್ನೊಂದಿಗೆ ವಿವಾಹ ಮಾಡಿಕೊಡಲು ಒಪ್ಪದೇ ಇದ್ದದ್ದಕ್ಕೆ ಅಪಹರಣ ಮಾಡಿದ್ದ ಎನ್ನಲಾಗಿದೆ.