ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಸರ್ಕಾರದ ‘ಗೃಹಲಕ್ಷ್ಮೀ’ ಯೋಜನೆಯಡಿ ನೋಂದಾಯಿಸಿಕೊಂಡಿರುವ ರಾಜ್ಯದ 1.21 ಕೋಟಿ ಮಹಿಳಾ ಫಲಾನುಭವಿಗಳ ಪೈಕಿ 1.12 ಕೋಟಿ ಫಲಾನುಭವಿಗಳಿಗೆ 2,000 ರು. ನೇರ ನಗದು ವರ್ಗಾವಣೆಯಾಗುತ್ತಿದ್ದು, ಇನ್ನು 8.20 ಲಕ್ಷ ಮಹಿಳೆಯರ ಖಾತೆಗೆ ನಗದು ವರ್ಗಾವಣೆ ಬಾಕಿ ಇದೆ.
ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ಲಿಖಿತ ಉತ್ತರದಲ್ಲಿ ಈ ಅಂಶ ತಿಳಿಸಿದ್ದಾರೆ.ಪ್ರತಿ ತಿಂಗಳ 15ನೇ ತಾರೀಖಿನ ನಂತರ ಫಲಾನುಭವಿಗಳಿಗೆ ಹಣ ಸಂದಾಯ ಮಾಡಲಾಗುತ್ತಿದೆ.
ಅನೇಕ ಜಿಲ್ಲೆಗಳಲ್ಲಿ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ಫಲಾನುಭವಿಗಳಿಗೆ ಕೆವೈಸಿ ಅಪ್ಡೇಟ್, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದಿರುವುದು ಮತ್ತಿತರ ತಾಂತ್ರಿಕ ಕಾರಣಗಳಿಂದ ಖಾತೆಗೆ ಹಣ ಸಂದಾಯವಾಗಿಲ್ಲ.
ಇಂತಹ ಸಮಸ್ಯೆಗಳನ್ನು ಪರಿಹರಿಸಿಕೊಂಡ ನಂತರ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಹಣ ಜಮಾ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಪಡಿತರ ಚೀಟಿಯಲ್ಲಿ ಮನೆಯ ಯಜಮಾನ ಇರುವುದನ್ನು ಬದಲಾಯಿಸಿ, ಮಹಿಳೆಯನ್ನು ಯಜಮಾನಿಯನ್ನಾಗಿ ತಿದ್ದುಪಡಿ ಮಾಡಿಸಿಕೊಂಡಿರುವ ಮಹಿಳೆಯರಿಗೂ ಸೌಲಭ್ಯ ದೊರಕಿಲ್ಲ.
ಅಂತಹ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಿದ ತಿಂಗಳಿಂದಲೇ ಧನ ಸಹಾಯ ಪಾವತಿ ಮಾಡಲಾಗುತ್ತದೆ ಎಂದು ಹೆಬ್ಬಾಳ್ಕರ್ ಉತ್ತರಿಸಿದ್ದಾರೆ.
ಅಂಕಿ-ಅಂಶ: ನೋಂದಾಯಿಸಿಕೊಂಡಿರುವವರು - 1,21,07,065
ಧನ ಸಹಾಯ ಪಡೆದವರು
ಆಗಸ್ಟ್ - 1,05,32,317
ಸೆಪ್ಟಂಬರ್ - 1,08,35,375
ಅಕ್ಟೋಬರ್ - 1,11,50,195
ನವೆಂಬರ್- 1,11,39,963
ಡಿಸೆಂಬರ್- 1,12,86,532