ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
‘ಮಂಡ್ಯದ ಜನರು ಛತ್ರಿಗಳು’ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ತಪ್ಪಾಗಿ ತಿಳಿದು ಅವರ ವಿರುದ್ಧ ಪ್ರತಿಭಟನೆ ನಡೆಸಿದ ರೈತ ಸಂಘ ಮತ್ತು ಕನ್ನಡ ಸಂಘಟನೆಗಳ ನಾಯಕರು ಕೆಲಸವಿಲ್ಲದ ಸೋಮಾರಿಗಳು ಎಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ಚನ್ನಪಟ್ಟಣ ತಾಲೂಕಿನ ಕಣ್ವ ಜಲಾಶಯದ ಕೋಡಿಹಳ್ಳದಿಂದ ಹಳ್ಳಿ ರಸ್ತೆ ಮತ್ತು ತೈಲೂರು ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಡಿ.ಕೆ.ಶಿವಕುಮಾರ್ ಯಾರನ್ನು ಉದ್ದೇಶ ಪೂರಕವಾಗಿ ಇಟ್ಟುಕೊಂಡು ಲಘುವಾಗಿ ಮಾತನಾಡಿಲ್ಲ. ಆಡು ಭಾಷೆಯಲ್ಲಿ ಈ ರೀತಿ ಹೇಳಿದ್ದಾರೆ. ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಅಗತ್ಯವಿಲ್ಲ ಎಂದರು.ಮಂಡ್ಯ ಜನರ ಮೇಲೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲಾ ಜಿಲ್ಲೆಯ ಜನರಿಗಿಂತ ಹೆಚ್ಚಿನ ಪ್ರೀತಿ ಹೊಂದಿದ್ದಾರೆ. ಇದನ್ನು ಅರಿಯದ ಯಾರೋ ಹಾದಿ ಬೀದಿಯಲ್ಲಿ ಟೀ ಅಂಗಡಿ ಮುಂದೆ ಕುಳಿತುಕೊಂಡು ಕಾಲಹರಣ ಮಾಡುವ ಸೋಮಾರಿಗಳು ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ರೈತ ಸಂಘದ ಏಕೀಕರಣ ಸಮಿತಿ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರ ವಿರುದ್ಧ ಉದಯ್ ಪರೋಕ್ಷವಾಗಿ ಹರಿಹಾಯ್ದರು.
ಮುಸ್ಲಿಮರು ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಮೀಸಲಾತಿ ನೀಡಲಾಗಿದೆ. ಅದನ್ನು ಸಹಿಸದ ಬಿಜೆಪಿ ನಾಯಕರು ಚಳವಳಿ ನಡೆಸುತ್ತಿದ್ದಾರೆ. ರಾಜಕೀಯವಾಗಿ ನಿರುದ್ಯೋಗಿಗಳಾಗಿರುವ ಬಿಜೆಪಿ ನಾಯಕರು ಮೀಸಲಾತಿ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.ರಾಜ್ಯದಲ್ಲಿ ಟೆಲಿಫೋನ್ ಕದ್ದಾಲಿಕೆ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ನನ್ನ ಟೆಲಿಫೋನ್ ಕದ್ದಾಲಿಕೆ ಪ್ರಕರಣ ನಡೆದಿತ್ತು. ಈಗ ಮತ್ತೆ ಕದ್ದಾಲಿಕೆ ಪ್ರಕರಣ ನಡೆಯುತ್ತಿದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಈ ವೇಳೆ ಮನ್ಮುಲ್ ನಿರ್ದೇಶಕ ಹರೀಶ್, ನಿಡಘಟ್ಟ ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ, ಮುಖಂಡರಾದ ಸಿಪಾಯಿ ಶ್ರೀನಿವಾಸ್, ಎಂ.ಪಿ.ಲಿಂಗೇಗೌಡ, ಶಿವಕುಮಾರ್, ಅಪ್ಪಾಜಿ , ಪುಟ್ಟಸ್ವಾಮಿ, ಆತ್ಮಾನಂದ ಹಾಗೂ ಪಿಡಿಒ ಶೀಲಾ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.