ಜ್ಞಾನಬಲದಿಂದ ಯಶಸ್ವಿಗೆ ಮುಂದಾಗಿ

| Published : Oct 27 2025, 12:15 AM IST

ಸಾರಾಂಶ

ಭಾರತೀಯ ಸಂಸ್ಕೃತಿಯಲ್ಲಿ ಅತಿಥಿಗಳಿಗೆ ಸ್ವಾಗತಿಸುವುದು ಹಾಗೂ ಬೀಳ್ಕೊಡುವ ಪದ್ಧತಿ ಇದೆ

ಕೊಪ್ಪಳ: ಸಕಾರಾತ್ಮಕವಾಗಿ ಯೋಚಿಸುವ ವ್ಯಕ್ತಿ ಮಾತ್ರ ಬದುಕಿನಲ್ಲಿ ನೆಮ್ಮದಿಯಿಂದ ಇರುತ್ತಾನೆ. ನಮ್ಮಲ್ಲಿರುವ ಜ್ಞಾನಬಲ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಯಶಸ್ಸಿಗೆ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಪ್ರಾಚಾರ್ಯ ಡಾ. ಬಸವರಾಜ ಹನಸಿ ಹೇಳಿದರು.

ನಗರದ ಶಿವಪ್ರೀಯಾ ಕಾನೂನು ಮಹಾವಿದ್ಯಾಲಯದಲ್ಲಿ ಜರುಗಿದ ತೃತೀಯ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಅತಿಥಿಗಳಿಗೆ ಸ್ವಾಗತಿಸುವುದು ಹಾಗೂ ಬೀಳ್ಕೊಡುವ ಪದ್ಧತಿ ಇದೆ. ಅದರಂತೆ ಪ್ರಥಮ ವರ್ಷಕ್ಕೆ ಬಂದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಆತ್ಮೀಯವಾಗಿ ಸ್ವಾಗತಿಸುವ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳು ಸತತ ಅಧ್ಯಯನದಲ್ಲಿ ತೊಡಗಿಸಿಕೊಂಡು ಸಾರ್ಥಕ ಬದುಕು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ರಾಜ್ಯ ಬಾರ್ ಕೌನ್ಸಿಲರ್ ಕೃಷ್ಣಪ್ಪ ನಾಯ್ಕ್ ಭೀಮಪ್ಪ ಮಾತನಾಡಿ, ಇಂದಿನ ಯುವಜನತೆ ಪುಸ್ತಕಕ್ಕೆ ಸೀಮಿತವಾಗದೆ, ಸಮಾಜದಲ್ಲಿನ ಓರೆಕೋರೆ ಅರಿತುಕೊಳ್ಳಲು ಪ್ರಯತ್ನಿಸಬೇಕು. ಸಮಾಜದಲ್ಲಿ ಬರುವ ನಕಾರಾತ್ಮಕ ಯೋಚನೆಗಳಿಗೆ ಆದ್ಯತೆ ನೀಡದೆ ಮಹಾತ್ಮರ ಚಿಂತನೆಗಳಿಂದ ಪ್ರೇರಣೆ ಪಡೆದು ಆತ್ಮಸ್ಥೈರ್ಯದಿಂದ ಬದುಕು ಕಟ್ಟಿಕೊಳ್ಳಬೇಕು ಆಧುನಿಕ ತಂತ್ರಜ್ಞಾನ ಯುಗದಲ್ಲಿ ಎಲ್ಲ ಕ್ಷೇತ್ರದಲ್ಲಿ ಹೆಚ್ಚು ಸ್ಪರ್ಧೆ ಇದೆ. ವಿದ್ಯಾರ್ಥಿಗಳು ಕಾಲೇಜಿನಲ್ಲಿರುವ ಗ್ರಂಥಾಲಯ ಪುಸ್ತಕ, ಕಂಪ್ಯೂಟರ್‌ಗಳ ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಜ್ಞಾನ ಸಂಪಾದಿಸಬೇಕು. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕಾಲೇಜೀನ ಉಪಾಧ್ಯಕ್ಷ ರಾಘವೇಂದ್ರ ಪಾನಘಂಟಿ, ಪ್ರಶಾಂತಿ ಶಿಕ್ಷಣ ಸಂಸ್ಥೆ ರಾಣೆಬೆನ್ನೂರಿನ ಡಾ. ಮನೋಜ ಸಾಹುಕಾರ, ಕೊಪ್ಪಳ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸೋಮಶೇಖರ ಹಿಟ್ನಾಳ, ಸುಸ್ಮೀತಾ ಜಗನ್ನಾಥ, ಅಣ್ಣಪ್ಪ, ನರೇಂದ್ರ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.