ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಿರತೆ ಕೊನೆಗೂ ಬೋನಿಗೆ

| Published : Sep 26 2024, 10:15 AM IST

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಿರತೆ ಕೊನೆಗೂ ಬೋನಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಕಳೆದೆರಡು ವಾರದಿಂದ ಆಗಾಗ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಮಂಗಳವಾರ ಸೆರೆಯಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ

ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಕಳೆದೆರಡು ವಾರದಿಂದ ಆಗಾಗ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಮಂಗಳವಾರ ರಾತ್ರಿ 11.53ಕ್ಕೆ ಬಿದ್ದಿದೆ.

ಕಳೆದ ವಾರದ ಹಿಂದೆ ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆ ಟೋಲ್ ಬಳಿ ಚಿರತೆ ಹಾದು ಹೋಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಟೋಲ್ ರಸ್ತೆ ಕ್ರಾಸ್ ಮಾಡಿ ಫನಕ್ ಕಂಪನಿ ಮತ್ತು ಎನ್.ಟಿ.ಟಿ.ಎಫ್ ಕಾಂಪೌಂಡ್‌ನಲ್ಲಿ ಚಿರತೆ ಓಡಾಡಿತ್ತು. ಇದರಿಂದ ಎಲೆಕ್ಟ್ರಾನಿಕ್‌ ಸಿಟಿಯ ಐಟಿ ಬಿಟಿ ಜನತೆ ಬೆಚ್ಚಿ ಬಿದ್ದಿದ್ದರು. ಆತಂಕಗೊಂಡು ಅರಣ್ಯ ಇಲಾಖೆ ಪೊಲೀಸರಿಗೆ ದೂರು ನೀಡಿದ್ದರು.

ಕೆ.ಆರ್.ಪುರಂ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಇಡೀ ಪ್ರದೇಶವನ್ನು ಜಾಲಾಡಿದ್ದರೂ ಚಿರತೆ ಪತ್ತೆ ಆಗಿರಲಿಲ್ಲ. ಬಳಿಕ ಡ್ರೋನ್‌ ಕ್ಯಾಮೆರಾಗಳನ್ನು ಅಳವಡಿಸಿ 3 ಬೋನುಗಳನ್ನು ಇರಿಸಲಾಗಿತ್ತು. ಒಂದು ವಾರದ ನಂತರ ಸಿ.ಡಾಟ್ ಕಂಪನಿಯ ಪೊದೆಯಲ್ಲಿ ಅಡಗಿ ಕುಳಿತಿದ್ದ ಚಿರತೆ ಕೊನೆಗೂ ಬೋನಿನಲ್ಲಿ ಸೆರೆಯಾಗಿದೆ.

ಗುರುವಾರ ಎಲೆಕ್ಟ್ರಾನಿಕ್ ಸಿಟಿಗೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಶಿಂಧೆ ಭೇಟಿ ನೀಡಲಿದ್ದಾರೆ. ಕೇಂದ್ರ ಸಚಿವರು ಆಗಮಿಸಬೇಕಿರುವ ಕಂಪನಿಯ ಪಕ್ಕದಲ್ಲಿಯೇ ಚಿರತೆ ಓಡಾಡುತ್ತಿತ್ತು. ಇದರಿಂದ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಮೂರು ದಿನದಿಂದ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದರು. ಥರ್ಮಲ್ ಡ್ರೋಣ್ ಬಳಸಿ ಕಾರ್ಯಾಚರಣೆ ನಡೆಸುವ ಮೂಲಕ ಚಿರತೆಯನ್ನು ಬೆನ್ನತ್ತಿದ್ದರು. ಕೊನೆಗೂ ಚಿರತೆ ಬೋನಿಗೆ ಬೀಳುವ ಮೂಲಕ ನಿಟ್ಟುಸಿರು ಬಿಡುವಂತಾಗಿದೆ.

ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಐದು ವರ್ಷದ ಗಂಡು ಚಿರತೆ ಸೆರೆ ಸಿಕ್ಕಿದೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸಮೇತ ಬೋನನ್ನು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕೊಂಡೊಯ್ದರು. ಚಿರತೆಯ ಆರೋಗ್ಯ ತಪಾಸಣೆ ನಡೆಸಲಾಯಿತು. ಚಿಕಿತ್ಸೆ ಬಳಿಕ ಚಿರತೆಯನ್ನು ಕಾಡಿಗೆ ಬಿಡಲು ಚಿಂತನೆ ನಡೆಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಬನ್ನೇರುಘಟ್ಟಕ್ಕೆ ಕೇಜ್ ಮೂಲಕ ಕರೆತಂದ ಚಿರತೆ ಐದು ವರ್ಷದ ಗಂಡು ಚಿರತೆಯಾಗಿದೆ. ಗಾಬರಿಗೊಂಡಿರುವ ಚಿರತೆಗೆ ಹೆಚ್ಚಿನ ಚಿಕಿತ್ಸೆ ನೀಡಿ ರೇಡಿಯೋ ಕಾಲರ್ ಅಳವಡಿಸಿ ಕಾಡಿಗೆ ಬಿಡಲಾಗುವುದು. ನಂತರ ಅದರ ಚಲನವಲನ ಅರಿತು ಚಿರತೆ ಮೇಲೆ ಹೆಚ್ಚಿನ ನಿಗಾ ವಹಿಸುವ ಮೂಲಕ ನಾಡಿಗೆ ಬರದಂತೆ ಕ್ರಮಕೈಗೊಳ್ಳಲಾಗುವುದು.

-ಕಿರಣ್, ವೈದ್ಯಾಧಿಕಾರಿ, ಬನ್ನೇರುಘಟ್ಟ ಜೈವಿಕ ಉದ್ಯಾನ.