ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಎಲ್ಲ ಭಾಷೆಗಳನ್ನೂ ಕಲಿಯಬೇಕು, ಆದರೆ ಕನ್ನಡವನ್ನು ಪ್ರೀತಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಎಲ್ಲ ಭಾಷೆಗಳನ್ನೂ ಕಲಿಯಬೇಕು, ಆದರೆ ಕನ್ನಡವನ್ನು ಪ್ರೀತಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್ ತಿಳಿಸಿದರು.ನಗರದ ಎಸ್. ಎಸ್. ಪದವಿಪೂರ್ವ ಕಾಲೇಜಿನ ಸಾವಿತ್ರಿಬಾಯಿ ಪುಲೆ ವೇದಿಕೆಯಲ್ಲಿ ನಡೆದ ೭೦ನೇ ಕನ್ನಡ ರಾಜ್ಯೋತ್ಸವ ಮತ್ತು ೮ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡು, ನುಡಿಗೆ ಹೋರಾಟ ಮಾಡಿದವರನ್ನು ನೆನಪಿಸಿಕೊಳ್ಳಬೇಕು ಮತ್ತು ಅವರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಒಳಗಾಗದೇ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಉತ್ತಮ ಭವಿಷ್ಯ ರೂಪಿಸಿಕೊಂಡು ಹೆತ್ತ ತಂದೆ- ತಾಯಿಗೆ ಹಾಗೂ ಓದಿದ ಕಾಲೇಜಿಗೆ ಗೌರವ ತಂದುಕೊಡಬೇಕು ಎಂದು ಕಿವಿಮಾತು ಹೇಳಿದರು.
ಖ್ಯಾತ ಜಾನಪದ ಗಾಯಕರೂ ಮತ್ತು ಸಿನಿಮಾ ರಂಗಕರ್ಮಿ ಗುರುರಾಜ್ ಹೊಸಕೋಟೆ ಮಾತನಾಡಿ, ಕನ್ನಡ ಅತ್ಯಂತ ಶ್ರೇಷ್ಠ ಹಾಗೂ ಶ್ರೀಮಂತ ಭಾಷೆ. ಕನ್ನಡದಲ್ಲಿರುವ ಜಾನಪದ ಶೈಲಿ ಯಾವುದೇ ಭಾಷೆಯಲ್ಲಿಲ್ಲ. ಜನಪದವನ್ನು ಉಳಿಸಿ ಬೆಳೆಸಬೇಕಿದೆ. ಇದು ಇಂದಿನ ಪೀಳಿಗೆಯ ಮಕ್ಕಳಿಂದ ಮಾತ್ರ ಸಾಧ್ಯ ಎಂದು ತಿಳಿಸಿದ ಅವರು, ತಮ್ಮ ಜನಪ್ರಿಯ ಹಾಡುಗಳನ್ನು ಹಾಡುವುದರ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಜೋಗಿ ಚಿತ್ರದ ಗೀತೆಗಳನ್ನೊಳಗೊಂಡಂತೆ ಅವರ ಶೈಲಿಯ ಜನಪ್ರಿಯಗೀತೆಗಳ ಗಾಯನದೊಂದಿಗೆ ಜಾನಪದ ಶೈಲಿಯನ್ನು ಮೆಲುಕು ಹಾಕಿದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಶೈಕ್ಷಣಿಕ ಮುಖ್ಯಸ್ಥ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಡಾ. ಎ.ಎಂ. ಶಿವಣ್ಣ, ರಾಜ್ಯೋತ್ಸವದ ಮಹತ್ವವನ್ನು ತಿಳಿಸುವುದರ ಜೊತೆ ವಿದ್ಯಾರ್ಥಿಗಳಿಗೆ ಓದಿನ ಹಾದಿ ತಪ್ಪಿಸುವ ಚಟಗಳಲ್ಲಿ ತೊಡಗದಂತೆ ಕರೆಕೊಟ್ಟರು. ಮತ್ತಿಹಳ್ಳಿಯ ಮುಖ್ಯ ಶಿಕ್ಷಕರೂ ಹಾಗೂ ಯಕ್ಷಗಾನ ಭಾಗವತರಾದ ಶ್ರೀ ಎಂ.ಎಂ. ಮಂಜಪ್ಪನವರನ್ನು ಮತ್ತು ಅರಳಗುಪ್ಪೆಯ ಯಕ್ಷಗಾನ ಭಾಗವತರಾದ ಶ್ರೀ ಪುಟ್ಟಸ್ವಾಮಿರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ತಾಲೂಕು ಮಟ್ಟದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಎಸ್‌ವಿಪಿ ಶಾಲೆಯ ಡಿಂಪು ಕುಮಾರ್ (ಪ್ರಥಮ), ಕೆಸಿಎಸ್ ಶಾಲೆಯ ವರ್ಷಾ (ದ್ವಿತೀಯ) ಮತ್ತು ನೊಣವಿನಕೆರೆ ಕೆಪಿಎಸ್ ಶಾಲೆಯ ಸಹನ ಕೆ.ಬಿ. (ತೃತೀಯ) ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಸಂಸ್ಥೆಯ ಕಾರ್ಯದರ್ಶಿ ಯಮುನ ಎ.ಆರ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಪಿ.ಜೆ.ರಾಮಮೋಹನ್, ಮಾಜಿ ಸದಸ್ಯ ಸಂಗಮೇಶ ಕಳ್ಳೀಹಾಳ್, ಕೆಪಿಸಿಸಿ ಸದಸ್ಯ ಯೋಗೀಶ್, ಸಾಹಿತಿ ಬಿ.ಎಸ್.ಪಾರ್ವತಿ, ಸಂಸ್ಥೆಯ ನಿರ್ದೇಶಕರಾದ ಎ.ಬಿ.ರಾಜಶೇಖರ್, ಡಾ. ಬೊಮ್ಮೆಗೌಡ, ಹರೀಶ್ ಉಪಸ್ಥಿತರಿದ್ದು ತಾಲೂಕು ಮತ್ತು ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧಾ ವಿಜೇತರು, ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು.
ಕುಮಾರಿ ಶುಕ್ಲಶ್ರೀ ಪ್ರಾರ್ಥನೆ, ಉಪನ್ಯಾಸಕ ಗಂಗಾಧರ್ ಸ್ವಾಗತಿಸಿದರು, ಪವಿತ್ರ ವಂದಿಸಿ, ಗಿರೀಶ್ ಕಾರ್ಯಕ್ರಮದ ನಿರೂಪಣೆ ಮಾಡಿದರು.