ಸಾರಾಂಶ
ಬಾಗಲಕೋಟೆ: ಪ್ರಕೃತಿಯಲ್ಲಿನ ಅನೇಕ ಸಂಗತಿಗಳಿಂದ ಪಾಠ ಕಲಿತರೆ ಶಾಂತಿಯುತವಾದ ಬದುಕು ನಡೆಸಬಹುದು ಎಂದು ಬೆಂಗಳೂರಿನ ವಿದ್ವಾಂಸ ಬ್ರಹ್ಮಣ್ಯಾಚಾರ ಹೇಳಿದರು.
ನಗರದ ಕಿಲ್ಲಾ ಡಾ.ಕೊಪ್ಪ ದವಾಖಾನೆ ಬಳಿ ದಿ.ರಾಮ ಮನಗೂಳಿ ವೇದಿಕೆಯಲ್ಲಿ ಶ್ರೀ ರಂಗವಿಠ್ಠಲ ಭಜನಾ ಮಂಡಳಿಯಿಂದ ಹಮ್ಮಿಕೊಂಡಿದ್ದ ಹರಿದಾಸ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎಲ್ಲರೂ ಶಾಂತಿ ಬಯಸುತ್ತಾರೆ. ಐಷಾರಾಮಿ ಬದುಕೇ ಶಾಂತಿ ಎಂದು ಭಾವಿಸಿ ವಿವಿಧ ದುಬಾರಿ ವಸ್ತುಗಳನ್ನು ಖರೀದಿಸುತ್ತ ಹೋಗುತ್ತಾರೆ. ಆದರೆ ಇಂತಹ ಭೌತಿಕ ವಸ್ತುಗಳಿಂದ ಮಾತ್ರ ಶಾಂತಿ ದೊರೆಯುವುದಿಲ್ಲ ಎಂಬುವುದು ತಡವಾಗಿ ತಿಳಿಯುತ್ತದೆ. ಪ್ರಕೃತಿಯಲ್ಲಿನ 24 ಅಂಶಗಳಿಂದ ಪಾಠ ಕಲಿತ ಅವಧೂತ ಸರಳ ಬದುಕು ರೂಪಿಸಿಕೊಂಡ ಪ್ರಸಂಗ ನಮಗೆಲ್ಲ ಆದರ್ಶವಾಗಿದೆ. ಸರಳ ಬದುಕು ಹಾಗೂ ದೇವರ ನಾಮಸ್ಮರಣೆಯಿಂದ ಶಾಂತಿಯುತ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ನಂತರ ನಡೆದ ಧಾರ್ಮಿಕ ಹರಟೆ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನಿ ಹಾಗೂ ನರಸಿಂಹ ಜೋಶಿ ಅವರು ನಗೆ ಚಟಾಕಿಗಳೊಂದಿಗೆ ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬ ಸಂದೇಶವನ್ನು ಸಾರಿದರು.ಇದಕ್ಕೂ ಮುನ್ನ ಆಕಾಶವಾಣಿ ಕಲಾವಿದರಾದ ಪರಿಮಳಾ ಗಿರಿಯಾಚಾರ್ ಹಾಗೂ ವಿ.ಜಿ.ಶ್ರೀನಿಧಿ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು. ನಟರಾಜ ಸಂಗೀತ ವಿದ್ಯಾಲಯದ ಪುಟ್ಟ ವಿದ್ಯಾರ್ಥಿಗಳಿಂದ ನಡೆದ ತಬಲಾ ಸೋಲೊ ಜನಮನ ರಂಜಿಸಿತು. ಸಮನಾ ಭಜನಾ ಮಂಡಳಿಯ ಭಕ್ತಿ ಸಂಗೀತದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿ.ಗಿರಿಯಾಚಾರ, ಪವನ ಸೀಮಿಕೇರಿ, ಕಿರಣ ಕುಲಕರ್ಣಿ ಮುರಳೀಧರಾಚಾರ ಕಿರಸೂರ, ಅಭಯ ಮನಗೂಳಿ, ಭಾಸ್ಕರ್ ಮನಗೂಳಿ, ಶಾರದಾ ಗಿಂಡಿ, ಆಕಾಶ ದೇಸಾಯಿ, ವೆಂಕಟೇಶ ದೇಶಪಾಂಡೆ, ಭರತ ಆಲೂರ, ಸಂಕಲ್ಪ ದೇಸಾಯಿ, ಪಾಂಡುರಗ ಹೊಸೂರ ಇತರರು ಇದ್ದರು.