ತಾಲೂಕಿನ ಹಂಡ್ಲಿ ಕ್ಲಸ್ಟರ್‌ನ ಶೈಕ್ಷಣಿಕ ಸಾಲಿನ ಎಫ್‌ಎಲ್‌ಎನ್ ಕಲಿಕಾ ಹಬ್ಬ ಹಾರೆ ಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ತಾಲೂಕಿನ ಹಂಡ್ಲಿ ಕ್ಲಸ್ಟರ್‌ನ ೨೦೨೫–೨೬ನೇ ಶೈಕ್ಷಣಿಕ ಸಾಲಿನ ಎಫ್‌ಎಲ್‌ಎನ್ ಕಲಿಕಾ ಹಬ್ಬ ಹಾರೆ ಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆಯಿತು. ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಶೋಕ್ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳನ್ನು ಹಬ್ಬದ ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.ಎಸ್‌ಡಿಎಂಸಿ ಅಧ್ಯಕ್ಷೆ ಸೌಮ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಬಣ್ಣಬಣ್ಣದ ಟೋಪಿಗಳು, ಕಾಗದದಿಂದ ತಯಾರಿಸಿದ ಕ್ರಾಫ್ಟ್‌ಗಳು ಸೇರಿದಂತೆ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಪ್ರದರ್ಶಿಸುವ ಹಲವು ಪ್ರದರ್ಶನಗಳು ಗಮನ ಸೆಳೆದವು. ಅಂದದ ಬರವಣಿಗೆ, ಗಟ್ಟಿ ಓದು, ಜ್ಞಾಪಕ ಪರೀಕ್ಷೆ, ಕಥೆ ಹೇಳುವುದು, ವಿನೋದ ಗಣಿತ, ಪೋಷಕ ವಿದ್ಯಾರ್ಥಿಗಳ ಸಹಸಂಬಂಧದ ವಿವಿಧ ಸ್ಪರ್ಧೆಗಳನ್ನು ಕ್ಲಸ್ಟರ್‌ನ ಎಲ್ಲ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಹಬ್ಬದ ವಾತಾವರಣದಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ಗ್ರಾಮ ಪಂಚಾಯಿತಿ ಸದಸ್ಯರಾದ ಕಾರ್ತಿಕ್ ಯಶೋಧ ಪುಟ್ಟಸ್ವಾಮಿ ರೋಹಿಣಿ, ಹಂಡ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಗಿರೀಶ್, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಚೈತ್ರ, ಪ್ರೇಮ, ಶಾಲಾ ಮುಖ್ಯೋಪಾಧ್ಯಾಯರಾದ ಕವಿತಾ, ಕ್ಲಸ್ಟರ್‌ನ ಎಲ್ಲ ಶಾಲಾ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರು ಹಾಜರಿದ್ದರು.