ಕಲಿಕಾ ಹಬ್ಬ ಮಕ್ಕಳಲ್ಲಿ ಶೈಕ್ಷಣಿಕ ಬಲವರ್ಧನೆಗೆ ಸಹಕಾರಿ: ಎಚ್.ಜಿ.ಶ್ರೀನಿವಾಸ್

| Published : Feb 21 2025, 11:47 PM IST

ಸಾರಾಂಶ

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಗಣಿತ, ರಸಪ್ರಶ್ನೆ, ಭಾಷಣ, ಚಿತ್ರಕಲೆ ಸೇರಿದಂತೆ ಅನೇಕ ಕಲೆಗಳು ಪ್ರದರ್ಶನಗೊಳ್ಳಲಿವೆ. ನರೇಗಾ ಯೋಜನೆ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅನೇಕ ಯೋಜನೆಗಳಿವೆ. ಸ್ಥಳೀಯ ಗ್ರಾಪಂ ನೆರವಿನೊಂದಿಗೆ ಸದುಪಯೋಗ ಪಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕಲಿಕಾ ಹಬ್ಬದಿಂದ ಮಕ್ಕಳಲ್ಲಿ ಶೈಕ್ಷಣಿಕ ಬಲವರ್ಧನೆ, ಸಂಖ್ಯಾಜ್ಞಾನ ಶಕ್ತಿ ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ತಾಪಂ ಇಒ ಎಚ್.ಜಿ.ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಅಣಸಾಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿ, ಕಲಿಕಾ ಹಬ್ಬದ ಮೂಲಕ ಮಕ್ಕಳಲ್ಲಿ ಬುದ್ಧಿಶಕ್ತಿ ಬೆಳೆಯಲು ನೆರವಾಗಿದೆ. ಇದರ ಜತೆಗೆ ಮಕ್ಕಳ ಪ್ರತಿಭೆಯನ್ನು ಬಾಲ್ಯದಿಂದಲೇ ಗುರುತಿಸಲು ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಗಣಿತ, ರಸಪ್ರಶ್ನೆ, ಭಾಷಣ, ಚಿತ್ರಕಲೆ ಸೇರಿದಂತೆ ಅನೇಕ ಕಲೆಗಳು ಪ್ರದರ್ಶನಗೊಳ್ಳಲಿವೆ. ನರೇಗಾ ಯೋಜನೆ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅನೇಕ ಯೋಜನೆಗಳಿವೆ. ಸ್ಥಳೀಯ ಗ್ರಾಪಂ ನೆರವಿನೊಂದಿಗೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ ಮಾತನಾಡಿ, ಕಥೆ ಹೇಳುವುದು, ಗಟ್ಟಿಓದು, ವೈವಿಧ್ಯಮಯ ಚಿತ್ರ ಬಿಡಿಸುವ ಮೂಲಕ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಲು ಇದೊಂದು ಸೂಕ್ತ ವೇದಿಕೆ. ಜೊತೆಗೆ ವೃತ್ತಿ, ಜ್ಞಾನ ಸೇರಿದಂತೆ ಮಕ್ಕಳ ಉತ್ತಮ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ. ಕಲೆ ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆಯನ್ನು ಆಯೋಜಿಸುವುದರ ಜತೆಗೆ ಮಕ್ಕಳಲ್ಲಿ ಕಲಿಕೆಗೆ ಒತ್ತು ನೀಡಲಾಗುತ್ತದೆ ಎಂದರು.

ಮುಖ್ಯಶಿಕ್ಷಕ ಎಚ್.ನಾಗೇಶ್ ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಇಂಥ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಕಲಿಕಾ ಹಬ್ಬದಿಂದ ಮಕ್ಕಳಲ್ಲಿ ಶೈಕ್ಷಣಿಕ ಬಲವರ್ಧನೆಗೆ ಸಹಕಾರಿಯಾಗಿದೆ ಎಂದರು.

ಈ ವೇಳೆ ಎಸ್ಡಿಎಂಸಿ ಅಧ್ಯಕ್ಷ ಮರಿಚನ್ನೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಸದಸ್ಯರಾದ ಎಸ್.ಕಾಂತರಾಜು, ಚಿಕ್ಕತಾಯಮ್ಮ, ಗಾಯಿತ್ರಮ್ಮ, ಶಿಕ್ಷಕರಾದ ಎಂ.ಕೆ.ರವೀಂದ್ರ, ರುದ್ರಸ್ವಾಮಿ, ಮಹದೇವಯ್ಯ ಇದ್ದರು.