ಕೀಳರಿಮೆ ಬಿಟ್ಟು ಸಾಧನೆಯತ್ತ ಮುಖ ಮಾಡಿ: ಡಾ.ಜಗದೀಶ್‌ಕುಮಾರ್

| Published : Feb 15 2024, 01:30 AM IST

ಕೀಳರಿಮೆ ಬಿಟ್ಟು ಸಾಧನೆಯತ್ತ ಮುಖ ಮಾಡಿ: ಡಾ.ಜಗದೀಶ್‌ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಕಲಿತ ವಿದ್ಯೆಯಿಂದ ವೈದ್ಯಕ್ಷೇತ್ರದಲ್ಲಿ ಸಾಧನೆ ಮಾಡುವ ಮಟ್ಟಿಗೆ ತಂದು ನಿಲ್ಲಿಸಿದೆ. ನಾನೂ ಕೂಡ ಗ್ರಾಮೀಣ ಪ್ರದೇಶದಿಂದ ಬಂದವನು. ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದೇನೆ. ಇದಾವುದೂ ನನ್ನ ಓದಿಗೆ ಅಡ್ಡಿಯಾಗಲಿಲ್ಲ. ಓದಬೇಕೆಂಬ ಹಂಬಲ ನನ್ನಲ್ಲಿದ್ದ ಕಾರಣ ನಾನಿಂದು ವೈದ್ಯನಾಗಿ ಉನ್ನತ ಮಟ್ಟದಲ್ಲಿದ್ದೇನೆ. ಅದೇ ರೀತಿ ಕೀಳರಿಮೆ ಬಿಟ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಾಧನೆಯತ್ತ ಮುಖ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ ಓದಿನಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಸರ್ಕಾರಿ ಶಾಲೆ, ಖಾಸಗಿ ಶಾಲೆ ಎನ್ನುವುದು ಮುಖ್ಯವಾಗುವುದಿಲ್ಲ. ಕೀಳರಿಮೆ ಬಿಟ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಾಧನೆಯತ್ತ ಮುಖ ಮಾಡಬೇಕು ಎಂದು ಮಕ್ಕಳ ತಜ್ಞ ಡಾ.ಪಿ.ಎಂ. ಜಗದೀಶ್‌ಕುಮಾರ್ ಹೇಳಿದರು.

ತಾಲೂಕಿನ ಹೊಳಲು ಗ್ರಾಮದ ಶ್ರೀವೆಂಕಟೇಶ್ವರ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಲೋತ್ಸವ ಉದ್ಘಾಟಿಸಿ ಮಾತನಾಡಿ, ನಾನು ಕಲಿತ ವಿದ್ಯೆಯಿಂದ ವೈದ್ಯಕ್ಷೇತ್ರದಲ್ಲಿ ಸಾಧನೆ ಮಾಡುವ ಮಟ್ಟಿಗೆ ತಂದು ನಿಲ್ಲಿಸಿದೆ. ನಾನೂ ಕೂಡ ಗ್ರಾಮೀಣ ಪ್ರದೇಶದಿಂದ ಬಂದವನು. ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದೇನೆ. ಇದಾವುದೂ ನನ್ನ ಓದಿಗೆ ಅಡ್ಡಿಯಾಗಲಿಲ್ಲ. ಓದಬೇಕೆಂಬ ಹಂಬಲ ನನ್ನಲ್ಲಿದ್ದ ಕಾರಣ ನಾನಿಂದು ವೈದ್ಯನಾಗಿ ಉನ್ನತ ಮಟ್ಟದಲ್ಲಿದ್ದೇನೆ. ಅದೇ ರೀತಿ ಕೀಳರಿಮೆ ಬಿಟ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಾಧನೆಯತ್ತ ಮುಖ ಮಾಡಬೇಕು ಎಂದರು.

ನಾನು ರಾಜಕಾರಣಿಯಲ್ಲ, ಮಕ್ಕಳ ತಜ್ಞನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ನನ್ನ ರೀತಿ ಗ್ರಾಮೀಣ ಪ್ರದೇಶದ ಮಕ್ಕಳು ಉತ್ತಮ ಶಿಕ್ಷಣ ಪಡೆದು, ಛಲ ಬಿಡದೆ ವಿದ್ಯಾಭ್ಯಾಸ ಮಾಡಿ ಗುರು-ಹಿರಿಯರಿಗೆ ಕೀರ್ತಿ ತರುವಂತಾಗಬೇಕು ಎಂದರು.

ರಾಜ್ಯ ಒಕ್ಕಲಿಗ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್.ಶಿವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ೩೦ ವರ್ಷಗಳಿಂದ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭವಾಗಿದ್ದು, ಈ ಶಾಲೆಯು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ೨೦೨೨-೨೩ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಉತ್ತೇಜಿಸುತ್ತಿರುವುದು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ ಎಂದರು.

ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ವಿದೇಶಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿ ಗ್ರಾಮಕ್ಕೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾರೆ. ಅಂತಹ ಸಾಲಿನಲ್ಲಿ ಈ ಶಾಲೆಯ ನಮ್ಮ ಮಕ್ಕಳು ಇರಬೇಕು ಎಂದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಎಂ.ಕೆ.ಅರ್ಪಿತಾ, ಉಪಾಧ್ಯಕ್ಷ ಜಯಪ್ರಕಾಶ್, ಸದಸ್ಯರಾದ ನಾರಾಯಣ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಿಂಗೇಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಎಚ್.ಡಿ.ಕೃಷ್ಣ, ಶಿಕ್ಷಣ ಸಂಯೋಜಕ ಶಶಿಧರ್, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎಸ್.ವಿಜಯಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನುಸೂಯ ಕುಮಾರಸ್ವಾಮಿ, ಶಾಲಾ ಮುಖ್ಯ ಶಿಕ್ಷಕ ಸಿ.ಜೆ.ಜವರೇಗೌಡ, ವೀಣಾ, ಸುಮಾ, ಶಿಕ್ಷಕರಾದ ಪ್ರಶಾಂತ್‌ಕುಮಾರ್, ಕುಸುಮ, ಸಂಯೋಜಕರಾದ ಶೋಭಾ ಇತರರು ಹಾಜರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.