ಮಠ ಬಿಡ್ರೀ... ಚುನಾವಣೆಗೆ ನಿಲ್ರಿ...

| Published : Apr 11 2024, 12:52 AM IST

ಸಾರಾಂಶ

ದಿಂಗಾಲೇಶ್ವರ ಶ್ರೀಗಳು ಚುನಾವಣೆ ಸ್ಪರ್ಧೆ ಮಾಡುವ ಮುನ್ನ ಶಿರಹಟ್ಟಿಯ ಫಕೀರೇಶ್ವರ ಮಠ ಬಿಡಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ಆಗ್ರಹಿಸಿದರು. ಇಲ್ಲವಾದಲ್ಲಿ ಶೀಘ್ರವೇ ನಾಡಿನಾದ್ಯಂತ ಇರುವ ಭಕ್ತರೊಂದಿಗೆ ಚರ್ಚಿಸಿ ಮುಂದಿನ ಹೋರಾಟ ರೂಪಿಸಲಾಗುವುದು ಎಂದರು.

ಗದಗ: ಶಿರಹಟ್ಟಿಯ ಫಕ್ಕೀರೇಶ್ವರ ಮಠಕ್ಕೆ ಬಹು ದೊಡ್ಡ ಇತಿಹಾಸವಿದೆ. ಅದಕ್ಕೆ ಅದರದ್ದೇ ಆದ ಪರಂಪರೆ ಇದೆ. ಹಾಗಾಗಿ ಫಕ್ಕೀರ ದಿಂಗಾಲೇಶ್ವರ ಶ್ರೀಗಳು ಚುನಾವಣೆಗೆ ಸ್ಪರ್ಧೆ ಮಾಡುವ ಪೂರ್ವದಲ್ಲಿ ಮಠವನ್ನು ಬಿಡಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ಆಗ್ರಹಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಯಾರು ಬೇಕಾದರೂ ನಿಲ್ಲಬಹುದು. ಅದಕ್ಕೆ ಎಲ್ಲರಿಗೂ ಸಂವಿಧಾನಾತ್ಮಕವಾಗಿ ಸ್ವಾತಂತ್ರ್ಯವಿದೆ. ಆದರೆ ನೀವೂ ಒಂದು ಮಠದ ಸ್ವಾಮೀಜಿಗಳು. ಅದರ ಬಗ್ಗೆ ಆ ಮಠದ ಹಿಂದಿನ ಶ್ರೀಗಳು ಹಾಕಿಕೊಂಡು ಬಂದಿರುವ ಪರಂಪರೆ ಬಗ್ಗೆ ಗಮನವಿರಬೇಕು ಎಂದರು.

ದಿಂಗಾಲೇಶ್ವರ ಶ್ರೀಗಳು ಕಾಂಗ್ರೆಸ್‌ ಪರವಾಗಿದ್ದಾರೆ ಎಂದು ನಾನು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ. ಪ್ರಸ್ತುತ ಅವರ ಹೇಳಿಕೆಗಳು ಮತ್ತು ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿದಾಗ, ಈಗಾಗಲೇ ಕಾಂಗ್ರೆಸ್ಸಿನಿಂದ ಟಿಕೆಟ್ ಘೋಷಣೆ ಮಾಡಿರುವ ವಿನೋದ ಅಸೂಟಿ ಅವರ ಬದಲಾಗಿ ಶ್ರೀಗಳನ್ನೇ ಕಣಕ್ಕಿಳಿಸುವ ಪ್ರಯತ್ನ ನಡೆಸುತ್ತಿದೆ ಎಂದೆನಿಸುತ್ತದೆ ಎಂದರು.

ನಾವು ನಿಮ್ಮನ್ನು ಚುನಾವಣೆಗೆ ನಿಲ್ಲಬೇಡಿ ಎನ್ನುವುದಿಲ್ಲ. ಆದರೆ ತಕ್ಷಣವೇ ಮಠ ಬಿಟ್ಟು ಆ ಮೇಲೆ ಚುನಾವಣೆಗೆ ಹೋಗಿ, ಇಲ್ಲವಾದಲ್ಲಿ ಶೀಘ್ರವೇ ನಾಡಿನಾದ್ಯಂತ ಇರುವ ಭಕ್ತರೊಂದಿಗೆ ಚರ್ಚಿಸಿ ಮುಂದಿನ ಹೋರಾಟ ರೂಪಿಸಲಾಗುವುದು ಎಂದರು.