ಸಾರಾಂಶ
ಕನ್ನಡಪ್ರಭವಾರ್ತೆ ಚಳ್ಳಕೆರೆ
ಇಡೀ ದೇಶವೇ ಅಭಿವೃದ್ಧಿ ಪಥದತ್ತ ಹೆಜ್ಜೆ ಇಡುತ್ತಿದೆ.ಆದರೆ ನೂರಾರು ವರ್ಷಗಳಿಂದ ಆಚರಣೆಯಲ್ಲಿರುವ ಗೊಡ್ಡು ಸಂಪ್ರದಾಯ, ಮೌಢ್ಯವನ್ನು ತೊರೆದು ಯಾದವ ಸಮುದಾಯ ಮುಂದೆ ಬರಬೇಕಿದೆ ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ. ರಘುಮೂರ್ತಿ ತಿಳಿಸಿದರು.ಅವರು, ಭಾನುವಾರ ನಗರದ ಯಾದವರ ಹಾಸ್ಟಲ್ ಆವರಣದಲ್ಲಿ ತಾಲೂಕು ಗೊಲ್ಲ ನೌಕರರ ಸಂಘ ಮತ್ತು ಸಮುದಾಯದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಮತ್ತು ನಿವೃತ್ತ ಯಾದವ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಜ್ಯೋತಿಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಹಲವಾರು ವರ್ಷಗಳಿಂದ ಈ ಸಮುದಾಯದ ಮುಖಂಡರೊಂದಿಗೆ ನನಗೆ ನಿಕಟ ಸಂಪರ್ಕವಿದೆ. ಸಮುದಾಯಕ್ಕೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರೂ ಅದನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಈ ಹಿಂದೆ ಯಾದವ ಸಮುದಾಯ ಭವನ ನಿರ್ಮಿಸಲುವ ಹಾಗೂ ದೊಡ್ಡೇರಿಯಲ್ಲಿ ಎರಡು ಎಕರೆ ಜಮೀನನ್ನು ಸಮುದಾಯಕ್ಕೆ ನೀಡುವ ಭರವಸೆ ನೀಡಿದ್ದೆ. ಈ ಎರಡೂ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ ಎಂದರು.ಯಾದವ ಸಮುದಾಯ ನನ್ನ ಮೇಲೆ ಅಪಾರವಾದ ಗೌರವ, ವಿಶ್ವಾಸವಿಟ್ಟಿದೆ. ಇದನ್ನು ಉಳಿಸಿಕೊಳ್ಳಲು ನಾನು ಸಮರ್ಥನಾಗಿದ್ದೇನೆಂಬುವುದನ್ನು ತಮ್ಮ ಬೇಡಿಕೆ ಈಡೇರಿಸುವ ಮೂಲಕ ಸಾಬೀತು ಪಡಿಸುತ್ತೇನೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗೊಲ್ಲನೌಕರರ ಸಂಘದ ಗೌರವಾಧ್ಯಕ್ಷ ಪ್ರೊ. ಮಂಜುನಾಥ, ಯಾದವ ಸಮುದಾಯದಲ್ಲೂ ಸಹ ವಿದ್ಯಾರ್ಥಿ ಪ್ರತಿಭೆಗೆ ಕೊರತೆ ಇಲ್ಲ. ಪ್ರಸ್ತುತ ಈ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ ಎಂದು ತಿಳಿಸಿದರು.ವಿಶೇಷ ಉಪನ್ಯಾಸ ನೀಡಿದ ಬಳ್ಳಾರಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಗೇಗೌಡ್ರು, ನಮ್ಮ ಸಮುದಾಯ ಮೂಢ ಸಂಪ್ರದಾಯಗಳನ್ನು ಆಚರಿಸಿಕೊಂಡು ಬಂದರೂ ಸತ್ಯಮತ್ತು ಪ್ರಾಮಾಣಿಕತೆಯನ್ನು ಬಿಟ್ಟು ಎಂದೂ ಬದುಕಿಲ್ಲ. ಸದಾಕಾಲ ಭಗವಂತನನ್ನು ಪ್ರಾರ್ಥಿಸುವ ಮೂಲಕ ಮೂಲ ಸುಬುಗಳಿಂದಲೇ ಬದುಕುತ್ತಿದೆ. ನಾವು ಎಲ್ಲಾ ಕ್ಷೇತ್ರಗಳಲ್ಲೂ ಪ್ರಾತಿನಿಧ್ಯ ಹಾಗೂ ಎಸ್ಟಿ ಮೀಸಲಾತಿ ಪಡೆಯಲು ಹೆಚ್ಚು ಸಂಘಟಿತರಾಗಬೇಕು ಎಂದರು.
ತಾಲೂಕು ಗೊಲ್ಲ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಶ್ರೀಕಾಂತ್ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ ಮತ್ತು ನಿವೃತ್ತ ನೌಕರರ ಸನ್ಮಾನದ ಜತೆಗೆ ಈ ಬಾರಿ ಉನ್ನತ್ತ ಶಿಕ್ಷಣದಲ್ಲೂ ಸಹ ಪ್ರಗತಿ ಸಾಧಿಸಿದವರನ್ನು ಗೌರವಿಸಲಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿಯಲ್ಲಿ ಹೆಚ್ಚು ಅಂಕ ಪಡೆದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿದೆ ಎಂದು ತಿಳಿಸಿದರು.ವಿಶೇಷವಾಗಿ ಬಿಎಎಂಎಸ್- 4, ಎಂಬಿಬಿಎಸ್- 1, ಪಿಎಚ್‌ಡಿ- 1, ಬಿಇ - 4. ಹಾಗೂ ಇಬ್ಬರು ಎಂಜಿನಿಯರಿಂಗ್ ನೌಕರಿ ಪಡೆದವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ. ಗೊಲ್ಲ ನೌಕರರ ಸಂಘ ಮುಂದಿನ ದಿನಗಳಲ್ಲೂ ಸಹ ಸಮುದಾಯದ ವಿದ್ಯಾರ್ಥಿಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಗೊಲ್ಲರ ಸಂಘದ ಅಧ್ಯಕ್ಷ ಟಿ. ರವಿಕುಮಾರ್ ಮಾತನಾಡಿ, ಯಾದವ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳಲು ಆರಂಭಿಸಿದೆ. ಇಂದು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಜತೆಗೆ, ಇಂಜಿನಿಯರಿಂಗ್, ಎಂಬಿಬಿಎಸ್ ಪದವಿ ಪಡೆದವರನ್ನು ಅಭಿನಂದಿಸಿದೆ. ಸಮುದಾಯ ಮುಂದಿನ ದಿನಗಳಲ್ಲೂ ಸಮಾಜದ ಅಭಿವೃದ್ಧಿಗೆ ಹೆಜ್ಜೆ ಹಾಕಬೇಕಿದೆ. ಸಮುದಾಯವನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯುವ ಜವಾಬ್ದಾರಿ ಹಿರಿಯ ಮುಖಂಡರ ಮೇಲಿದೆ ಎಂದರು.ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಬಿ.ವಿ. ಸಿರಿಯಣ್ಣ, ಹಟ್ಟಿರುದ್ರಪ್ಪ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ, ಮಹಿಳಾ ಸಂಘದ ಅಧ್ಯಕ್ಷೆ ಚಿತ್ರಾವತಿ, ಸಂಪತ್ ಕುಮಾರ್, ಗುರುಪ್ರಸಾದ್, ಮಲ್ಲಿಕಾರ್ಜುನ್, ರಾಜಣ್ಣ, ಕೆ. ಮಂಜಪ್ಪ, ಡಾ. ಹನುಮಂತಪ್ಪ, ಕರಿಯಪ್ಪ, ಕಾರ್ಯಾಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷೆ ಜಯಮ್ಮ, ಬಾಲರಾಜು, ಕಾರ್ಯದರ್ಶಿ ಎಸ್. ನಾಗರಾಜ, ಹುಲಿಕುಂಟೆ ವೈ. ಕಾಂತರಾಜ್, ಎಚ್. ಮಹಲಿಂಗಪ್ಪ, ಈರಗಟ್ಟಪ್ಪ, ವೃಷಬೇಂದ್ರಪ್ಪ, ಶಿವಣ್ಣ, ರಾಜಣ್ಣ, ಮುರುಗೇಶಪ್ಪ, ಈರಣ್ಣ ಮುಂತಾದವರು ಇದ್ದರು.