ಕನ್ನಡಪ್ರಭ ವಾರ್ತೆ ಮಂಡ್ಯ

ಮೊಬೈಲ್ ಬಿಡಿ, ಪುಸ್ತಕ ಹಿಡಿ ಎನ್ನುವ ಸಂದೇಶವನ್ನು ಸಮಾಜಕ್ಕೆ ಸಂದೇಶ ಹೇಳುವ ಮೂಲಕ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಮೈಸೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಡಾ.ಎಂ.ಪ್ರಸನ್ನಕುಮಾರ್ ಹೇಳಿದರು.

ನಗರದ ಕರ್ನಾಟಕ ಭವನದಲ್ಲಿ ಡಾ.ಈ.ಸಿ.ನಿಂಗರಾಜ್‌ಗೌಡ ಫೌಂಡೇಷನ್‌ನಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಪ್ರಸ್ತುತ ತಂತ್ರಜ್ಞಾನದಿಂದ ಸಾಮಾಜಿಕ ಮೌಲ್ಯಗಳು, ಸಂಬಂಧಗಳು, ಜವಾಬ್ದಾರಿಗಳು ಕಡಿಮೆಯಾಗುತ್ತಿವೆ. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕು ಎಂದರು.

ಮೊಬೈಲ್‌ನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳದೆ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳಬೇಕು. ಪುಸ್ತಕಗಳನ್ನು ಓದುವ ಮೂಲಕ ಸಂಸ್ಕಾರವಂತರಾಗಬೇಕು. ವ್ಯಕ್ತಿತ್ವವನ್ನು ಅರಳಿಸಿಕೊಳ್ಳಬೇಕು. ಇದರಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚಾಗುತ್ತದೆ. ಆಗ ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು, ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದರು.

ಯುವಕರು ಕೇವಲ ಉದ್ಯೋಗವಕಾಶಗಳಿಗೆ ಎದುರು ನೋಡದೆ ಸ್ವ ಉದ್ಯೋಗಿಗಳಾಗಬೇಕು. ಸ್ವಾವಲಂಬನೆಯ ಬದುಕಿನೊಂದಿಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಹುಟ್ಟಿನಿಂದ ಯಾರೂ ಬುದ್ಧಿವಂತರಲ್ಲ. ಬೆಳೆದಂತೆಲ್ಲಾ ಮನಸ್ಸನ್ನು ಪರಿಪಕ್ವತೆಯಲ್ಲಿಟ್ಟುಕೊಂಡು ಬೌದ್ಧಿಕ ವಿಕಾಸ ಹೊಂದಬೇಕು. ಪ್ರತಿಯೊಬ್ಬ ನಾಗರೀಕ ಉತ್ತಮವಾಗಿ ಕಾರ್ಯನಿರ್ವಹಿಸಲು ಶಿಕ್ಷಣ ಬಹಳ ಮುಖ್ಯ. ಶಿಕ್ಷಣಕ್ಕೆ ಮೌಲ್ಯ ಹಾಗೂ ಉತ್ತೇಜನ ಕೊಟ್ಟಾಗ ಸಮಾಜ ಅಭಿವೃದ್ಧಿಯತ್ತ ಮುನ್ನಡೆಯಲಿದೆ ಎಂದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಎಚ್.ಎಸ್.ಮುದ್ದೇಗೌಡರು, ರಾಜಕಾರಣಿ ಕೇವಲ ರಾಜಕಾರಣಿಯಾಗಿ ಉಳಿಯದೆ ಮುತ್ಸದ್ಧಿಯಾಗಬೇಕು. ಮುಂದಿನ ಜನಾಂಗಕ್ಕೆ ಏನು ಕೊಡಬೇಕೆಂದು ಆಲೋಚಿಸುವವನೇ ಮುತ್ಸದ್ಧಿ ಎಂದರು.

ಸಜ್ಜನರಿಗೆ ರಾಜಕೀಯ ಅಧಿಕಾರ, ಅವಕಾಶಗಳು ಸಿಗಬೇಕು. ಆಗ ಅವರು ಏನನ್ನಾದರೂ ಮಾಡಿ ತೋರಿಸುತ್ತಾರೆ. ಹಣ, ಅಧಿಕಾರಕ್ಕೆ ಪ್ರಾಧಾನ್ಯತೆಯನ್ನು ನೀಡದೆ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಪ್ರಭಾರ ವಕ್ತಾರ ಡಾ.ಈ.ಸಿ.ನಿಂಗರಾಜ್‌ಗೌಡ ಮಾತನಾಡಿ, ಭಾರತೀಯ ಸಂಸ್ಕೃತಿ ಪರಂಪರೆ ಮೇಲೆ ಭಾರತವನ್ನು ನಿರ್ಮಾಣ ಮಾಡಬೇಕು. ಯುವಕರನ್ನು ಕಟ್ಟಬೇಕು. ಕೇವಲ ರಾಜಕೀಯ ಅಧಿಕಾರ ಪಡೆಯುವುದಕ್ಕಷ್ಟೇ ಇದನ್ನು ಮಾಡದೆ ವಿಶ್ವದಲ್ಲಿ ಶಾಂತಿ, ಸಮೃದ್ಧಿ, ಮಾನವ ಸಂಬಂಧಗಳು ಉಳಿಯಬೇಕೆಬುದು ನಮ್ಮೆಲ್ಲರ ಆಶಯವಾಗಿದೆ. ಮಹಾಪುರುಷರನ್ನು ಪ್ರೇರಣೆಯಾಗಿಟ್ಟುಕೊಂಡು ಕೆಲಸ ಮಾಡಬೇಕು ಎಂದರು.

ಸ್ವಾಮಿ ವಿವೇಕಾನಂದರನ್ನು ಓದಿಕೊಂಡು ಬೆಳೆದಿದ್ದೇವೆ. ಅವರಂತೆ ನಾವಾಗದಿದ್ದರೂ ಭಾರತ ವಿಶ್ವಗುರು ಆಗಬೇಕು. ನರೇಂದ್ರಮೋದಿ ಪ್ರಧಾನಿಯಾದ ನಂತರ ಭಾರತದ ಘನತೆ- ಗೌರವ ವಿಶ್ವದಲ್ಲಿ ಹೆಚ್ಚಿದೆ. ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದೇವೆ. ೧೨ ವರ್ಷಗಳ ಸಾಧನೆಯಲ್ಲಿ ಕೇಂದ್ರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಂಡರೆ ಭಾರತ ಸಮೃದ್ಧ ರಾಷ್ಟ್ರವಾಗುವುದರಲ್ಲಿ ಅನುಮಾನವಿಲ್ಲ ಎಂದು ನುಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎಸ್.ಮುದ್ದೇಗೌಡ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಿ.ಎಂ.ಶಿವರಾಮೇಗೌಡ, ಮಮತೆಯ ಮಡಿಲು ಮಂಗಲ ಯೋಗೀಶ್, ರೈತರ ಶಾಲೆಯ ಡಾ.ಸತ್ಯಮೂರ್ತಿ, ವಿದ್ಯಾರ್ಥಿನಿ ಕೀರ್ತಿ ಮುರಳೀಧರ್ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಡಾ.ಸಿದ್ದರಾಮಯ್ಯ, ಅಲೈಯನ್ಸ್ ಕ್ಲಬ್ ಅಧ್ಯಕ್ಷ ಕೆ.ಟಿ.ಹನುಮಂತು, ಡಿ.ಶ್ರೀಕಂಠೇಗೌಡ ನೆಲಮನೆ, ವೈ.ಎಚ್.ಲೋಹಿತ್‌ಕುಮಾರ್, ಮನುಕುಮಾರ್ ಇತರರಿದ್ದರು.