ಮೊಬೈಲ್ ಬಿಡಿ, ಪುಸ್ತಕ ಓದಿ: ಪ್ರೊ.ಕುಂಬಾರ

| Published : Aug 15 2024, 01:57 AM IST

ಸಾರಾಂಶ

ಜ್ಞಾನಾರ್ಜನೆಯ ಜೊತೆಗೆ ಮಾನಸಿಕ ಆರೋಗ್ಯದ ಉದ್ದೇಶಕ್ಕಾಗಿ ವಿದ್ಯಾರ್ಥಿಗಳು ಮೊಬೈಲ್ ಗೀಳು ಬಿಟ್ಟು, ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಡಾ. ಬಿ.ಡಿ. ಕುಂಬಾರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ದಾವಿವಿಯಲ್ಲಿ ಡಾ. ಎಸ್.ಆರ್. ರಂಗನಾಥನ್‌ 132ನೇ ಹುಟ್ಟುಹಬ್ಬ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಜ್ಞಾನಾರ್ಜನೆಯ ಜೊತೆಗೆ ಮಾನಸಿಕ ಆರೋಗ್ಯದ ಉದ್ದೇಶಕ್ಕಾಗಿ ವಿದ್ಯಾರ್ಥಿಗಳು ಮೊಬೈಲ್ ಗೀಳು ಬಿಟ್ಟು, ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಡಾ. ಬಿ.ಡಿ. ಕುಂಬಾರ ಹೇಳಿದರು.

ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಬುಧವಾರ ಡಾ. ಎಸ್.ಆರ್. ರಂಗನಾಥನ್‌ 132ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕುಂಠಿತವಾಗುತ್ತಿದೆ. ಭವಿಷ್ಯದ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲ, ಅಧ್ಯಯನ ಮಹತ್ವವನ್ನು ತಿಳಿಯುವ ಪ್ರಯತ್ನವೂ ಆಗುತ್ತಿಲ್ಲ. ಇದು ಆತಂಕಕಾರಿ ಸಂಗತಿ ಎಂದರು.

ಇತಿಹಾಸ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ವೆಂಕಟ ರಾವ್ ಪಲಾಟೆ ಮಾತನಾಡಿ, ಕಲಿತ ವಿದ್ಯೆ ಮತ್ತು ಅನುಭವಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗೆಯೇ ಗ್ರಂಥಾಲಯವು ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯ ಸೇರಿದಂತೆ ಶೈಕ್ಷಣಿಕ ಕೇಂದ್ರಗಳ ಆತ್ಮವಿದ್ದಂತೆ. ವಿದ್ಯಾರ್ಥಿಗಳು ಓದಿನ ಅಭಿರುಚಿ ಬೆಳೆಸಿಕೊಂಡು, ಹೆಚ್ಚಿನ ಸಮಯವನ್ನು ಗ್ರಂಥಾಲಯದಲ್ಲಿ ವಿನಿಯೋಗಿಸಿದರೆ ಭವಿಷ್ಯವು ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.

ವಿ.ವಿ.ಯ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಮಹಾಲಿಂಗಪ್ಪ ಭಾರತದ ಗ್ರಂಥಾಲಯ ಪಿತಾಮಹ ಡಾ.ರಂಗನಾಥನ್ ಅವರ ‘ದಿ ಫೈವ್ ಲಾಸ್ ಆಫ್ ಲೈಬ್ರರಿ’ ಕುರಿತು ವಿವರಿಸಿದರು. ಸಹಾಯಕ ಗ್ರಂಥಪಾಲಕಿ ಡಾ. ಜಿ.ನೀಲಮ್ಮ ಸ್ವಾಗತಿಸಿದರು. ಬೋರಣ್ಣ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಗ್ರಂಥಪಾಲಕ ಡಾ.ನಾಗರಾಜ ವಂದಿಸಿದರು.

- - - -14ಕೆಡಿವಿಜಿ1:

ದಾವಣಗೆರೆ ವಿಶ್ವವಿದ್ಯಾನಿಲಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಬುಧವಾರ ಗ್ರಂಥ ಪಾಲಕರ ದಿನಾಚರಣೆಯನ್ನು ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಉದ್ಘಾಟಿಸಿದರು.