ಉಪನ್ಯಾಸಕನಿಗೆ ಸೃಜನಶೀಲ ಬರವಣಿಗೆ ಆಸಕ್ತಿ ಬೇಕು: ಎಸ್‌.ಪಿ. ನಾಗನಗೌಡ

| Published : Jul 03 2024, 12:19 AM IST

ಉಪನ್ಯಾಸಕನಿಗೆ ಸೃಜನಶೀಲ ಬರವಣಿಗೆ ಆಸಕ್ತಿ ಬೇಕು: ಎಸ್‌.ಪಿ. ನಾಗನಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಹೂವಿನಹಡಗಲಿ ಜಿಬಿಆರ್‌ ಕಾಲೇಜಿನಲ್ಲಿ ಬಳ್ಳಾರಿ ವೀವಿ ಸಂಘ, ಜಿಬಿಆರ್‌ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ವಸಂತ ಪ್ರಕಾಶನ ಸಹಯೋಗದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಉಪನ್ಯಾಸಕರಿಗೆ ಕೇವಲ ಪಠ್ಯ ಬೋಧನೆ ಅಷ್ಟೇ ಅಲ್ಲದೇ, ವಿದ್ಯಾರ್ಥಿಗಳಲ್ಲಿ ಗುಣಮಟ್ಟ ಹೆಚ್ಚಳಕ್ಕಾಗಿ, ಸೃಜಲಶೀಲ ಬರಣಿಗೆಯೂ ಇರಬೇಕು ಎಂದು ಹಗರಿಬೊಮ್ಮನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ, ಉಪನ್ಯಾಸಕ ಎಸ್‌.ಪಿ. ನಾಗನಗೌಡ ಹೇಳಿದರು.

ಇಲ್ಲಿನ ಜಿಬಿಆರ್‌ ಕಾಲೇಜಿನಲ್ಲಿ ಬಳ್ಳಾರಿ ವೀವಿ ಸಂಘ, ಜಿಬಿಆರ್‌ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ವಸಂತ ಪ್ರಕಾಶನ ಸಹಯೋಗದಲ್ಲಿ, ಆಯೋಜಿಸಿದ್ದ ಪ್ರೊ. ಎಸ್‌.ಎಸ್‌. ಪಾಟೀಲ್‌ ಇವರ ಕರ್ನಾಟಕದ ಆರ್ಥಿಕತೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈಚಿಗೆ ಸಾಹಿತ್ಯ ಸೇರಿದಂತೆ ಇತರೆ ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕ ಬರುತ್ತಿವೆ. ಓದುಗ, ಲೇಖಕ ಮತ್ತು ಶಿಕ್ಷಕ ಈ ಮೂವರಲ್ಲಿ ಲೇಖಕ ಬಹಳ ಮುಖ್ಯವಾಗಿದ್ದು, ಜತೆಗೆ ಆತನಿಗೆ ಬಹಳಷ್ಟು ಜವಾಬ್ದಾರಿಯೂ ಇದೆ. ವಿದ್ಯಾರ್ಥಿಗಳ ಮನಸ್ಸಿಗೆ ಮುಟ್ಟುವ ಹಾಗೆ ಪುಸ್ತಕವನ್ನು ಹೊರ ತಂದಿರುವ ವಸಂತ ಪ್ರಕಾಶನ ಉತ್ತಮ ಕೆಲಸ ಮಾಡಿದೆ. ಇಂದಿನ ಸೆಮಿಸ್ಟರ್‌ ಯುಗದಲ್ಲಿ ವಿದ್ಯಾರ್ಥಿಗಳು ಪುಸ್ತಕ ಸೈಜ್‌ ಮತ್ತು ಬೆಲೆಗೆ ಹೆದರಬಾರದು. ಈ ಕರ್ನಾಟಕದ ಆರ್ಥಿಕತೆ ಪುಸ್ತಕದಲ್ಲಿ ಪಠ್ಯ, ಪಾಂಡಿತ್ಯ ಇದರ ಸೂಕ್ಷ್ಮತೆ ಹೆಚ್ಚಾಗಿದೆ. ಆದರಿಂದ ಉಪನ್ಯಾಸಕರು ಹೆಚ್ಚು ಅಭ್ಯಾಸದ ಜತೆಗೆ ಪುಸ್ತಕ ಬರೆಯುವ ಹವ್ಯಾಸ ಹೊಂದುವ ಅಗತ್ಯವಿದೆ ಎಂದರು.

ಈ ಪುಸ್ತಕದಲ್ಲಿ ಆರ್ಥಿಕ ಸ್ಥಿತಿಗತಿ ತಿಳಿಸುವ ಜತೆಗೆ ಕಲ್ಯಾಣ ಕರ್ನಾಟಕದ ಆಶಯಗಳು, ನೈಸರ್ಗಿಕ ಸಂಪನ್ಮೂಲಗಳ ಪರಿಚಯ, ಮಾನವ ಸಂಪನ್ಮೂಲಕಗಳ ಮಾಹಿತಿ ಹೊಂದಿದೆ. ಪುಸ್ತಕಗಳು ಕಾಲಕ್ಕೆ ತಕ್ಕಂತೆ ಮಾಹಿತಿ ಒಳಗೊಂಡಿದೆ. ಕೃಷಿ ಉತ್ಪಾದಕತೆ ಕೊರತೆಗೆ ಕಾರಣಗಳ ಪಟ್ಟಿ ಪಲ್ಲಟಗಳು, ಕೃಷಿ ಮೇಲೆ ಅವಲಂಬನೆ ಹಾಗೂ ಸವಾಲುಗಳು ಬಗ್ಗೆ ಮಾಹಿತಿ ಹೊಂದಿದೆ ಎಂದರು.

ರೈತ ಆತ್ಮಹತ್ಯೆ ಪ್ರಕರಣಗಳ ಕುರಿತು ಇಂದಿನ ಶೈಕ್ಷಣಿಕ ಚಟುವಟಿಕೆಗಳ ಚೌಕಟ್ಟಿನಲ್ಲಿ, ವಿದ್ಯಾರ್ಥಿಗಳನ್ನು ಚರ್ಚೆಗೆ ಇಳಿಸುವಂತಹ ಪ್ರಯತ್ನ ಈ ಪುಸ್ತಕದಲ್ಲಿ ಲೇಖಕರು ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ. ಕೈಗಾರಿಕೆ, ನೀತಿ ಆಯೋಗಗಳ ಸಂಶೋಧನೆಯ ವರದಿಗಳನ್ನು ಹೆಕ್ಕಿ ತೆಗೆಯುವ ಕೆಲಸ ಮಾಡಿದ್ದಾರೆ. ಇದು ಇಂದಿನ ವಿದ್ಯಾರ್ಥಿಗಳಿಗೆ ಬಹು ಉಪಯೋಗವಾಗಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ, ಉಪನ್ಯಾಸಕರಿಗೆ ಸಾಹಿತ್ಯ ಮತ್ತು ಪುಸ್ತಕ ಬರವಣಿಗೆಗೆ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ಲೇಖಕರು ಹಾಗೂ ಪ್ರಾಚಾರ್ಯ ಎಸ್‌.ಎಸ್‌. ಪಾಟೀಲ್‌ ಇವರ ಪುಸ್ತಕ ಬರವಣಿಗೆಯಿಂದ ಕಾಲೇಜು ಜಿಲ್ಲೆಗೆ ಮಾದರಿಯಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವೀ.ವಿ. ಸಂಘ ಸಿದ್ದವಿದ್ದು, ಈ ಶಿಕ್ಷಣ ಸಂಸ್ಥೆ ಉನ್ನತ ಮಟ್ಟಕ್ಕೇರಲಿ ಎಂದರು.

ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ವೀ.ವಿ. ಸಂಘದ ಕಾರ್ಯದರ್ಶಿ ಅರವಿಂದ ಪಟೇಲ್‌, ದೇಶದ ಪ್ರಗತಿಗೆ ರಾಜ್ಯದ ಕೊಡುಗೆ ಅಪಾರವಾಗಿದ್ದು, ಶೇ. 90ರಷ್ಟು ಕಾಫಿ ಮತ್ತು ರೇಷ್ಮೇ ಉತ್ಪಾದನೆಯ ಜತೆಗೆ ಐಟಿ, ಬಿಟಿ ವಲಯದಲ್ಲಿ ಪ್ರಗತಿ ಸಾಧಿಸಿದ್ದೇವೆ, ಅಪಾರವಾದ ಗಣಿ ಸಂಪತ್ತು ನಮ್ಮಲ್ಲಿದೆ. ಇಂತಹ ಹತ್ತು ಹಲವಾರು ವಿಷಯ ಕುರಿತು ಈ ಕರ್ನಾಟಕದ ಆರ್ಥಿಕತೆ ಪುಸ್ತಕ ಹೊಂದಿದೆ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶದ 5 ಜಿಲ್ಲೆಗಳ ತಾಲೂಕುಗಳು ಹಿಂದುಳಿದ ಪ್ರದೇಶವೆಂಬ ಹಣೆ ಪಟ್ಟಿ, ಆಳುವ ಸರ್ಕಾರಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಅಭಿವೃದ್ಧಿಗಾಗಿ ಸರ್ಕಾರ ಕೈಗೊಳ್ಳುವ ನಿರ್ಧಾರ ಮತ್ತು ನಿಲುವುಗಳು ಡಾ. ನಂಜುಂಡಪ್ಪ ವರದಿಯಲ್ಲಿವೆ. ಈ ವಿಷಯ ಕುರಿತು ವಿದ್ಯಾರ್ಥಿಗಳ ಚಿಂತನೆ ಹಚ್ಚುವ ಮೂಲಕ ಇದೊಂದು ಸಂಶೋಧನೆ ರೀತಿಯಲ್ಲಿದೆ. ಈ ಪುಸ್ತಕ ವಿದ್ಯಾರ್ಥಿಗಳಿಗೆ ಬಹಳಷ್ಟು ಸಹಕಾರಿಯಾಗಿದೆ. ಸಂಶೋಧನೆ ವೈಯಕ್ತಿಕ ಲಾಭಕ್ಕೆ ಅಲ್ಲ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗಿದೆ ಎಂದರು.

ಲೇಖಕ ಎಸ್‌.ಎಸ್‌. ಪಾಟೀಲ್‌ ಮಾತನಾಡಿ, ಕರ್ನಾಟಕ ಆರ್ಥಿಕತೆ ಪುಸ್ತಕ ಶೇ. 50ರಷ್ಟು ರಿಯಾಯ್ತಿ ದರದಲ್ಲಿ ಮಾರಾಟವಾಗುತ್ತಿದೆ. ಇದರಿಂದ ಬಂದ ಹಣದಲ್ಲಿ ಜಿಬಿಆರ್‌ ಕಾಲೇಜಿನ ಕರ್ನಾಟಕ ಆರ್ಥಿಕತೆ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾನಗಲ್ಲು ಗುರು ಕುಮಾರೇಶ್ವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸುವಂತಹ ಕೆಲಸವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಮಾಡುತ್ತೇವೆ ಎಂದು ಹೇಳಿದರು.

ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಅಕ್ಕಿ ಶಿವಕುಮಾರ, ವಸಂತ ಪ್ರಕಾಶನದ ಕವಿತಾ ಪಾಟೀಲ್‌ ಸೇರಿದಂತೆ ಇತರರು ಮಾತನಾಡಿದರು.