ಸಾರಾಂಶ
ಹೂವಿನಹಡಗಲಿ ತಾಲೂಕಿನ ಅತಿಸೂಕ್ಷ್ಮ ಮತಗಟ್ಟೆಯಾದ ಕೋಮಾರನಹಳ್ಳಿ ತಾಂಡದಲ್ಲಿ ಸಹಾಯಕ ಚುನಾವಣಾಧಿಕಾರಿ ರಮೇಶ ಕುಮಾರ ಶಾಂತಿಸಭೆ ನಡೆಸಿದ್ದಾರೆ.
ಹೂವಿನಹಡಗಲಿ: ಪ್ರತಿಯೊಬ್ಬರೂ ನಿರ್ಭೀತಿಯಿಂದ ಮತಗಟ್ಟೆ ತೆರಳಿ ಮತದಾನ ಮಾಡಬೇಕಿದೆ. ಇದಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿ ರಮೇಶ ಕುಮಾರ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಅತಿಸೂಕ್ಷ್ಮ ಮತಗಟ್ಟೆಯಾದ ಕೋಮಾರನಹಳ್ಳಿ ತಾಂಡದಲ್ಲಿ ಆಯೋಜಿಸಿದ್ದ ಶಾಂತಿಸಭೆ ಮಾತನಾಡಿದ ಅವರು, ತಾಂಡಾ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಮತಗಟ್ಟೆಗಳಲ್ಲಿ ವೆಬ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮತಗಟ್ಟೆಗೆ ಬಂದ ಮತದಾರರರಿಗೆ ವಿನಾಕಾರಣ ಅಡ್ಡಿಪಡಿಸಿದರೇ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಪ್ರತಿಯೊಬ್ಬ ಮತದಾರ ಮತದಾನ ಮಾಡಬೇಕು ಎಂದು ಹೇಳಿದರು.ಸಿಪಿಐ ದೀಪಕ್ ಬೂಸರೆಡ್ಡಿ ಮಾತನಾಡಿ, ಈ ಹಿಂದೆ ನಡೆದಿರುವ ಚುನಾವಣೆಯ ಸಂದರ್ಭದಲ್ಲಿ ನಡೆದ ಘಟನೆಯಿಂದ ಈ ತಾಂಡದ ಮತಗಟ್ಟೆ ಅತಿಸೂಕ್ಷ್ಮವಾಗಿದೆ. ಪ್ರತಿಯೊಬ್ಬರೂ ಶಾಂತಿಯುತವಾಗಿ, ಮತಗಟ್ಟೆ ಬಂದು ದಿಟ್ಟತನದಿಂದ ಮತದಾನ ಮಾಡಿದರೆ ಅತಿಸೂಕ್ಷ್ಮ ಮತಗಟ್ಟೆ ಎಂಬ ಪಟ್ಟವನ್ನು ತೆಗೆದು ಹಾಕುತ್ತೇವೆ. ಆದರೂ ಯಾರಾದರೂ ಮತಗಟ್ಟೆ ಬಳಿ ಹಾಗೂ ಮತದಾನಕ್ಕೆ ಅಡ್ಡಿಪಡಿಸಿದ್ದಲ್ಲಿ ಕ್ರಮಕ್ಕೆ ಮುಂದಾಗುತ್ತೇವೆಂದು ಹೇಳಿದರು.
ತಹಸೀಲ್ದಾರ್ ಟಿ. ಜಗದೀಶ ಮಾತನಾಡಿ, ಈ ಹಿಂದೆ 2019ರ ವಿಧಾನಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿದೆ. ಶೇ. 68ರಷ್ಟು ಮಾತ್ರ ಮತದಾನವಾಗಿತ್ತು. ಈ ಬಾರಿ ಮತದಾರರು ಈ ಚುನಾವಣೆಯನ್ನು ಹಬ್ಬದಂತೆ ಆಚರಿಸುವ ಮೂಲಕ ಪ್ರತಿಯೊಬ್ಬರೂ ಮತದಾನಕ್ಕೆ ಮುಂದಾಗಬೇಕಿದೆ ಎಂದರು.ಪಿಎಸ್‌ಐ ವೆಂಕಟೇಶ ನಾಯಕ, ಸೆಕ್ಟರ್ ಅಧಿಕಾರಿ ಪ್ರದೀಪ್, ಮತಗಟ್ಟೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.