ಸಾರಾಂಶ
ಧಾರವಾಡ:
ನೋಂದಾಯಿತ ಖಾಸಗಿ ಲೇವಾದೇವಿಗಾರರು ಹೆಚ್ಚಿನ ಬಡ್ಡಿ ವಸೂಲು ಮಾಡಿದರೆ ಅವರ ಲೈಸನ್ಸ್ ರದ್ದುಪಡಿಸಿ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಎಚ್ಚರಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಖಾಸಗಿ ಲೇವಾದೇವಿದಾರರು, ಮೈಕ್ರೋ ಫೈನಾನ್ಸ್ ಮತ್ತು ಫೈನಾನ್ಸ್ ಸಂಸ್ಥೆಗಳ ಪ್ರಮುಖರು ಮತ್ತು ಸಹಕಾರಿ ಇಲಾಖೆ, ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿ ಸಾಲದ ಹೆಸರಿನಲ್ಲಿ ಸಾರ್ವಜನಿಕರಿಗೆ ಕಿರಿಕಿರಿ, ತೊಂದರೆ ಆಗದಂತೆ ಕ್ರಮಕೈಗೊಳ್ಳುವ ಕುರಿತು ಸಭೆ ಜರುಗಿಸಿ ಮಾತನಾಡಿದರು.
ಆರ್ಥಿಕ ಚಟುವಟಿಕೆ ಹಮ್ಮಿಕೊಳ್ಳುವಾಗ ಸರ್ಕಾರದ ನಿಯಮ ಪಾಲಿಸಬೇಕು. ಸಾಲದ ಮೊತ್ತ, ಬಡ್ಡಿ, ನಿಯಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದವರು ಸಾಲದ ಹೆಸರಿನಲ್ಲಿ ಶೋಷಣೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ಸಹಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆ ನಿಗಾವಹಿಸಿ, ಅಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.ಜಿಲ್ಲೆಯಲ್ಲಿ ಒಟ್ಟು 720 ಲೇವಾದೇವಿಗಾರು, 104 ಗಿರವಿದಾರರು, 281 ಹಣಕಾಸು ಸಂಸ್ಥೆಗಳನ್ನೊಳಗೊಂಡ ಒಟ್ಟು1,105 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಕೆಲ ಸಂಸ್ಥೆಗಳು ಸ್ಥಗಿತಗೊಂಡಿದ್ದು ಅಂತಹ ಸಂಸ್ಥೆಗಳ ರದ್ದತಿಗೆ ಕ್ರಮಕೈಗೊಳ್ಳಬೇಕು. ಮುಂದಿನ ಎರಡು ತಿಂಗಳಲ್ಲಿ ಮೈಕ್ರೊಫೈನಾನ್ಸ್ ಸಾಲದ ಮೊತ್ತ, ಬಡ್ಡಿ ಆಕರಣೆ, ಸಾಲದ ನಿಯಮಗಳ ಕುರಿತು ಹಾಗೂ ಸಹಕಾರ ಇಲಾಖೆ ಲೇವಾದೇವಿ ವ್ಯವಹಾರಗಳ ಕುರಿತು ಜನರಲ್ಲಿ ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಬೇಕೆಂದರು.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಅವಳಿ ನಗರದಲ್ಲಿ ಸಾಲ ಕೊಟ್ಟವರ ಕಿರಿಕಿರಿಯಿಂದ ತೊಂದರೆ ಅನುಭವಿಸುತ್ತಿರುವ ಕುರಿತು 31 ಪ್ರಕರಣ ದಾಖಲಾಗಿದ್ದು, ಈ ಸಂಬಂಧ 50 ಜನರನ್ನು ಬಂಧಿಸಲಾಗಿದೆ. ಲೈಸನ್ಸ್ ಪಡೆದು ವ್ಯವಹಾರ ಮಾಡುವವರ ಬಗ್ಗೆ ಮಾತ್ರ ನಿಗಾವಹಿಸದೇ ಲೈಸನ್ಸದಾರರು ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡುವ ಮತ್ತು ಲೈಸನ್ಸ್ ಪಡೆಯದೆ ಸಾಲದ ವ್ಯವಹಾರ ನಡೆಸುವರ ಬಗ್ಗೆ ನಿಗಾವಹಿಸಿ, ಕಾನೂನಿಗೆ ಒಪ್ಪಿಸಬೇಕು. ಈ ಕೆಲಸವನ್ನು ಸಹಕಾರ ಇಲಾಖೆ ನಮ್ಮ ಸಹಯೋಗದೊಂದಿಗೆ ಮಾಡಬೇಕೆಂದು ಹೇಳಿದರು.ಎಸ್ಪಿ ಡಾ. ಗೋಪಾಲ ಬ್ಯಾಕೋಡ ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಾಲದ ಒತ್ತಡದಿಂದಾಗಿ ಎರಡು ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ಆತ್ಮಹತ್ಯೆ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.
ಸಹಕಾರ ಇಲಾಖೆ ಸಹಾಯಕ ನಿಬಂಧಕ ನಿಂಗರಾಜ ಬೆಣ್ಣಿ ಮಾತನಾಡಿ, ಎಲ್ಲ ಹಣಕಾಸು ಸಂಸ್ಥೆಗಳು ಭದ್ರತಾ ಸಾಲಕ್ಕೆ ವರ್ಷಕ್ಕೆ ಶೇ. 14ರಷ್ಟು ಹಾಗೂ ಭದ್ರತೆ ಇಲ್ಲದ ಸಾಲಕ್ಕೆ ವರ್ಷಕ್ಕೆ ಶೇ. 16ರಷ್ಟು ಬಡ್ಡಿ ಮಾತ್ರ ಆಕರಣೆ ಮಾಡಬೇಕು. ಹಣಕಾಸು ಸಂಸ್ಥೆಗಳು ಪ್ರತಿ ಐದು ವರ್ಷಕ್ಕೊಮ್ಮೆ ಕಡ್ಡಾಯವಾಗಿ ತಮ್ಮ ಲೈಸನ್ಸ್ ನವೀಕರಣ ಮಾಡಿಕೊಳ್ಳಬೇಕು ಎಂದರು.ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭುದೇವ ಎನ್.ಜಿ., ಇದ್ದರು.