ಕಾನೂನು ಅರಿವಿನಿಂದ ಶೋಷಣೆ ಮುಕ್ತ ಬದುಕು ಸಾಧ್ಯ:

| Published : Nov 14 2025, 03:30 AM IST

ಸಾರಾಂಶ

ಕಾನೂನು ಅರಿವಿನಿಂದಾಗಿ ಶೋಷಣೆ ಮುಕ್ತ, ನೆಮ್ಮದಿಯ ಬದುಕು ನಮ್ಮದಾಗುತ್ತದೆ.

ಕನ್ನಡಪ್ರಭ ವಾರ್ತೆ ಹೊನ್ನಾವರ

ಕಾನೂನು ಅರಿವಿನಿಂದಾಗಿ ಶೋಷಣೆ ಮುಕ್ತ, ನೆಮ್ಮದಿಯ ಬದುಕು ನಮ್ಮದಾಗುತ್ತದೆ ಎಂದು ಹೊನ್ನಾವರ ಸಿವಿಲ್ ಮತ್ತು ಪ್ರಿನ್ಸಿಪಲ್ ಜೆಎಂಎಫ್‌ಸಿ ನ್ಯಾಯಾಧೀಶ ಈರಣ್ಣ ಹುಣಸಿಕಟ್ಟೆ ಹೇಳಿದರು.

ಕಾರ್ಮಿಕ ಇಲಾಖೆ, ವಕೀಲರ ಸಂಘ, ತಾಲೂಕಾ ಕಾನೂನು ಸೇವಾ ಸಮಿತಿ ಹಾಗೂ ಪೊಲೀಸ್ ಇಲಾಖೆ ಸಂಯುಕ್ತವಾಗಿ ತಾಲೂಕಾ ಕಾರ್ಮಿಕ ಭವನದಲ್ಲಿ ಏಪರ್ಡಿಸಿದ ಕಾನೂನು ಅರಿವು ಕಾರ್ಯಕ್ರಮ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಸಂಘಟಿತ ಕಾರ್ಮಿಕ ವಲಯವು ಸಂಘಟಿತರಾಗಿ ಸರ್ಕಾರವು ಜಾರಿಗೆ ತಂದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ನಿರೀಕ್ಷಕ ಗುರುಪ್ರಸಾದ ವಿ. ನಾಯ್ಕ ಮಾತನಾಡಿ, ಸರ್ಕಾರವು ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ತಂದ ಯೋಜನೆಗಳ ಮಾಹಿತಿ ವಿವರಿಸಿದರು.

ಇದೇ ಸಮಯದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಅರ್ಹ ಸಧಸ್ಯರಿಗೆ ಸರ್ಕಾರ ನೀಡಿದ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಮಿಕರ ಕಾನೂನು ಕುರಿತು ಸಹಾಯಕ ಸರ್ಕಾರಿ ಅಭಿಯೋಜಕಿ ಸಂಪದಾ ಗುನಗಾ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ವಿ.ಎಂ. ಭಂಡಾರಿ ಮಾತನಾಡಿದರು.

ವೇದಿಕೆಯಲ್ಲಿ ವಕೀಲ ಸಂಘದ ಕಾರ್ಯದರ್ಶಿ ಉದಯ ನಾಯ್ಕ ಚಿತ್ತಾರ ಹಾಗೂ ಇತರರು ಉಪಸ್ಥಿತರಿದ್ದರು. ಗುಣವಂತೆಯ ಕರಾವಳಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನ ಗೀತೆ ಹಾಡಿದರು. ಯುವಜನ ಕ್ರೀಡಾಧಿಕಾರಿ ಸುಧೀಶ ನಾಯಕ್ ಕಾರ್ಯಕ್ರಮ ನಿರೂಪಿಸಿದರು.ಇಂದು ಯಕ್ಷನಾದೋತ್ಸವ ಕಾರ್ಯಕ್ರಮ:

ಸಾಲ್ಕೋಡ್ ಯಕ್ಷನಾದ ಕಲಾ ಪ್ರತಿಷ್ಠಾನ ಗೌರವ ಸನ್ಮಾನ ಹಾಗೂ ಯಕ್ಷಗಾನ ಕಾರ್ಯಕ್ರಮವನ್ನು ಒಳಗೊಂಡ ಯಕ್ಷನಾದೋತ್ಸವ ಕಾರ್ಯಕ್ರಮ ಹೊನ್ನಾವರದ ಸ್ಥಿತಿಗಾರ ಶಾಲಾ ಆವರಣದಲ್ಲಿ ನ. 14ರಂದು ಸಂಜೆ 7 ಗಂಟೆಗೆ ಜರುಗಲಿದೆ.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಪಂ ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ವಹಿಸಲಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದ ಪ್ರಭಾಕರ ಹೆಗಡೆ ಚಿಟ್ಟಾಣಿಗೆ ಸನ್ಮಾನ ನಡೆಯಲಿದ್ದು, ಯಕ್ಷರಂಗ ಮಾಸಪತ್ರಿಕೆಯ ಸಂಪಾದಕ ಗೋಪಾಲಕೃಷ್ಣ ಭಾಗವತ, ಗ್ರಾಪಂ ಅಧ್ಯಕ್ಷ ಸುರೇಶ ಶೆಟ್ಟಿ, ಗ್ರಾಪಂ ಉಪಾಧ್ಯಕ್ಷ ಬಾಲಚಂದ್ರ ನಾಯ್ಕ, ಸದಸ್ಯ ಗೋವಿಂದ ಭಟ್ ಉಪಸ್ಥಿತರಿರುವರು. ನಾಗರಾಜ ಹೆಗಡೆ ಖಾಸ್ಕಂಡ ಅಭಿನಂದನಾ ನುಡಿಗಳನ್ನಾಡುವರು. ಸಭಾ ಕಾರ್ಯಕ್ರಮದ ನಂತರ ಬಡಗುತಿಟ್ಟಿನ ಕಲಾವಿದರಿಂದ ಚಂದ್ರಾವಳಿ ವಿಲಾಸ, ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.