ಬೆಂಬಲ ಬೆಲೆಯನ್ನು ಕಾನೂನು ವ್ಯಾಪ್ತಿಗೆ ತನ್ನಿ : ಡಾ. ಪ್ರಕಾಶ್ ಕಮ್ಮರಡಿ

| Published : Mar 25 2024, 12:49 AM IST

ಬೆಂಬಲ ಬೆಲೆಯನ್ನು ಕಾನೂನು ವ್ಯಾಪ್ತಿಗೆ ತನ್ನಿ : ಡಾ. ಪ್ರಕಾಶ್ ಕಮ್ಮರಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಎರಡು-ಮೂರು ವರ್ಷಗಳಿಂದ ಕೊಬ್ಬರಿ ಬೆಲೆ ತೀರಾ ಕಡಿಮೆಯಾಗಿದ್ದು, ಬೆಲೆ ಸ್ಥಿರವಾಗಿಲ್ಲ. ಸರ್ಕಾರ ಶೇ. ೨೫ರಷ್ಟು ಕೊಬ್ಬರಿ ಖರೀದಿ ಮಾಡುತ್ತಿದ್ದು, ಮುಕ್ತ ಮಾರುಕಟ್ಟೆ, ವರ್ತಕರು ಶೇ. ೭೫ರಷ್ಟು ಕೊಬ್ಬರಿ ಖರೀದಿ ಮಾಡುತ್ತಿದ್ದಾರೆ. ಪಾಮಾಯಿಲ್ ಎಣ್ಣೆಯ ಆಮದು ಹೆಚ್ಚಾಗಿರುವ ಕಾರಣ ಕೊಬ್ಬರಿ ಬೆಲೆ ಕುಸಿಯುತ್ತಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಕ್ಕರೆ ಮಾತ್ರ ರೈತ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆಯನ್ನು ಕಾನೂನಿನ ವ್ಯಾಪ್ತಿಗೆ ತರಬೇಕೆಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಒತ್ತಾಯಿಸಿದರು.

ನಗರದ ಕಲ್ಪತರು ಗ್ರ್ಯಾಂಡ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗಬೇಕಾದರೆ ಬೆಂಬಲ ಬೆಲೆಯನ್ನು ವೈಜ್ಞಾನಿಕವಾಗಿ ನಿಗಧಿಪಡಿಸಬೇಕು. ಈ ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳನ್ನು ಎಚ್ಚರಿಸುವ ಕೆಲಸವನ್ನು ರೈತ ಸಮುದಾಯ ಮಾಡಬೇಕಿದೆ. ಕೊಬ್ಬರಿ, ಜೋಳ, ಹತ್ತಿ ಸೇರಿದಂತೆ ಪ್ರಮುಖ ಆಹಾರ ಪದಾರ್ಥಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿದರೆ ರೈತರು ಹೋರಾಟ, ಪ್ರತಿಭಟನೆ ಮಾಡುವಂತಹ ಅವಶ್ಯಕತೆ ಇರುವುದಿಲ್ಲ ಎಂದರು.ಕಳೆದ ಎರಡು-ಮೂರು ವರ್ಷಗಳಿಂದ ಕೊಬ್ಬರಿ ಬೆಲೆ ತೀರಾ ಕಡಿಮೆಯಾಗಿದ್ದು, ಬೆಲೆ ಸ್ಥಿರವಾಗಿಲ್ಲ. ಸರ್ಕಾರ ಶೇ. ೨೫ರಷ್ಟು ಕೊಬ್ಬರಿ ಖರೀದಿ ಮಾಡುತ್ತಿದ್ದು, ಮುಕ್ತ ಮಾರುಕಟ್ಟೆ, ವರ್ತಕರು ಶೇ. ೭೫ರಷ್ಟು ಕೊಬ್ಬರಿ ಖರೀದಿ ಮಾಡುತ್ತಿದ್ದಾರೆ. ಪಾಮಾಯಿಲ್ ಎಣ್ಣೆಯ ಆಮದು ಹೆಚ್ಚಾಗಿರುವ ಕಾರಣ ಕೊಬ್ಬರಿ ಬೆಲೆ ಕುಸಿಯುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಬಲ ಬೆಲೆಯನ್ನು ಕಾನೂನಿನ ವ್ಯಾಪ್ತಿಗೆ ತರುವುದಾಗಿ ಹೇಳಿಕೆ ನೀಡಿದ್ದು, ಇದಕ್ಕೆ ಕೇಂದ್ರ ಸರ್ಕಾರವೂ ಸಹಮತ ನೀಡಬೇಕು. ಬೆಲೆ ಕಾನೂನಾತ್ಮಕವಾದರೆ ಬೆಲೆ ಇಳಿಕೆಯಾಗಲ್ಲ, ಮೌಲ್ಯವರ್ಧನೆಗೆ ಅವಕಾಶ ಸಿಗಲಿದ್ದು, ರೈತರು ಆರ್ಥಿಕವಾಗಿ ನಿಟ್ಟುಸಿರು ಬಿಡಲಿದ್ದಾರೆ. ಈಗಾಗಲೇ ಲೋಕಸಭಾ ಚುನಾವಣೆ ಪ್ರಾರಂಭವಾಗಿದ್ದು ಅಭ್ಯರ್ಥಿಗಳು ಮನೆ ಬಾಗಿಲಿಗೆ ಬಂದಾಗ ರೈತ ಮುಖಂಡರು ಸಂಘಟನೆಯಾಗಿ ಕರಪತ್ರಗಳನ್ನು ಮುದ್ರಿಸಿಕೊಂಡು ಬೆಂಬಲ ಬೆಲೆಯ ಬಗ್ಗೆ ಮಾತನಾಡುವ ಅವಶ್ಯಕತೆ ಇದೆ. ಇಚ್ಛಾಶಕ್ತಿಯ ಕೊರತೆಯಿಂದ ಬೆಂಬಲ ಬೆಲೆ, ಡಾ. ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ರೈತರ ಹಲವಾರು ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುತ್ತಿದ್ದು, ಈ ನಿಟ್ಟಿನಲ್ಲಿ ರೈತರು ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಹಣಕಾಸು ತಜ್ಞ ಜಿ.ವಿ. ಸುಂದರ್ ಮಾತನಾಡಿ, ಕೇಂದ್ರ ಸರ್ಕಾರ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕಿದ್ದು, ಇದಕ್ಕೆ ಅವಕಾಶ ಕೊಡಬಾರದು. ಇದರಿಂದ ಕೊಬ್ಬರಿ ಬೆಲೆ ಯಾವತ್ತೂ ಏರಿಕೆಯಾಗುವುದಿಲ್ಲ. ಕೇಂದ್ರಕ್ಕೆ ನಮ್ಮ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಂತಾಗಿದ್ದು ಉದ್ಯಮಿಗಳ, ಕಾರ್ಪೋರೇಟ್‌ಗಳ ೧೪ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಆದರೆ ರೈತರ ಸಾಲ ಮನ್ನಾ ಮಾಡುವಲ್ಲಿ ಮೀನಾಮೇಷ ಎಣಿಸುತ್ತಿದೆ. ಆದ್ದರಿಂದ ಚುನಾವಣೆಯ ಸಂದರ್ಭವಾಗಿದ್ದು ರೈತರು ಬೆಂಬಲ ಬೆಲೆಯ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕಿದೆ ಎಂದರು.