ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಮನೆಗೆ ಹೊಕ್ಕು ಕೈ ಕಾಲು ಮುರಿಯುವುದಾಗಿ ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಸಮ್ಮುಖದಲ್ಲಿ ಸೆಲ್ಫಿ ವಿಡಿಯೋ ಮಾಡಿ ಪತ್ರಕರ್ತರಿಗೆ ಬಹಿರಂಗವಾಗಿಯೇ ಧಮಕಿ ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬೆವನೂರಲ್ಲಿ ನಡೆದಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.ಸಂತೋಷ್ ವಿಠ್ಠಲ ಚೊರಮುಲೆ ಬೆದರಿಕೆ ಹಾಕಿದ ವ್ಯಕ್ತಿ. ಬೆವನೂರು ಗ್ರಾಮದ ಗ್ರಾಮ ದೇವತೆ ಅಮೋಘ ಸಿದ್ಧೇಶ್ವರ ಜಾತ್ರೆ ಸಂದರ್ಭದಲ್ಲಿ ಶಾಸಕ ರಾಜು ಕಾಗೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದುಕೊಂಡಿದ್ದರು. ಇದೇ ಸಂದರ್ಭದಲ್ಲಿ ಶಾಸಕ ರಾಜು ಕಾಗೆ ಅವರೊಂದಿಗೆ ಸೆಲ್ಫಿ ವಿಡಿಯೋ ಮಾಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೊಂಡು ನೇರವಾಗಿಯೇ ಧಮ್ಕಿ ಹಾಕಿದ್ದಾನೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಬೆದರಿಕೆ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಬಂಧಿಸಿದಂತೆ ಶಾಸಕರು ಸ್ಪಷ್ಟನೆ ನೀಡಿದ್ದು, ವ್ಯಕ್ತಿಯ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿ ಖಡಕ ಸಂದೇಶ ನೀಡಿದ್ದಾರೆ.ನಾನು ಬೆವನೂರಿಗೆ ಅಮೋಘ ಸಿದ್ಧೇಶ್ವರ ಜಾತ್ರೆಗೆ ಹೋದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಧಮಕಿ ಹಾಕಿರುವುದಕ್ಕೂ ನನಗೂ ಸಂಬಂಧವೇ ಇಲ್ಲ. ಆತ ನನ್ನ ಕಾರ್ಯಕರ್ತನೇ ಅಲ್ಲ. ನಾನು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾನೆಂದು ತಿಳಿದಿದ್ದೆ. ಆದರೆ, ಆತ ಬೆದರಿಕೆ ಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿನ ವಿಡಿಯೋ ನೋಡಿದ ಬಳಿಕ ಗಮನಕ್ಕೆ ಬಂದಿದೆ.
-ರಾಜು ಕಾಗೆ, ಶಾಸಕರು.