ಹಲಗೂರು ಸಮೀಪದ ನಿಟ್ಟೂರು ಗ್ರಾಮದ ಹೊರವಲಯದಲ್ಲಿ ಹಲವು ದಿನಗಳಿಂದ ಚಿರತೆ ಪದೇ ಪದೇ ಕಾಣಿಸಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರು ಹಾಗೂ ರೈತರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಗ್ರಾಮದ ಕೆರೆ ಪಕ್ಕದಲ್ಲಿ ಸ್ಮಶಾನದ ಜಮೀನಿನಲ್ಲಿ ಬೋನ್ ಅಳವಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ಸಮೀಪದ ನಿಟ್ಟೂರು ಗ್ರಾಮದ ಹೊರವಲಯದಲ್ಲಿ ಹಲವು ದಿನಗಳಿಂದ ಚಿರತೆ ಪದೇ ಪದೇ ಕಾಣಿಸಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರು ಹಾಗೂ ರೈತರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಗ್ರಾಮದ ಕೆರೆ ಪಕ್ಕದಲ್ಲಿ ಸ್ಮಶಾನದ ಜಮೀನಿನಲ್ಲಿ ಬೋನ್ ಅಳವಡಿಸಿದ್ದಾರೆ.

ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಸಂಚರಿಸುತ್ತಿದ್ದು, ಬೀದಿ ನಾಯಿಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಕೊಂದು ತಿಂದಿರುವ ಘಟನೆಗಳು ನಡೆದಿವೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ವಿಶೇಷವಾಗಿ ರಾತ್ರಿ ವೇಳೆ ಜಮೀನುಗಳಿಗೆ ತೆರಳಿ ಕೃಷಿ ಬೆಳೆಗಳಿಗೆ ನೀರು ಹಾಯಿಸಲು ರೈತರು ಎದುರುವಂತಾಗಿದೆ.

ಜಮೀನುಗಳು, ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಜಾನುವಾರುಗಳ ಸುರಕ್ಷತೆಯ ಬಗ್ಗೆಯೂ ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ. ಚಿರತೆ ಸಂಚಾರದಿಂದ ರಾತ್ರಿ ವೇಳೆ ಒಂಟಿಯಾಗಿ ಓಡಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಿರತೆಯನ್ನು ಶೀಘ್ರ ಸೆರೆ ಹಿಡಿದು ಗ್ರಾಮಸ್ಥರ ಆತಂಕ ದೂರ ಮಾಡಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ದಿನಗಳಿಂದ ಮನವಿ ಮಾಡಿದ್ದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿರುವ ಚಿರತೆ ಚಲನವಲನ ಗಮನಿಸಿ ಗ್ರಾಮದ ಕೆರೆ ಪಕ್ಕದ ಸ್ಮಶಾನದ ಜಮೀನಿನಲ್ಲಿ ಬೋನ್ ಇರಿಸಿ ಸೆರೆ ಹಿಡಿಯಲು ಮುಂದಾಗಿರುವುದರಿಂದ ಮಳವಳ್ಳಿ ಪ್ರಾದೇಶಿಕ ಅರಣ್ಯ ವಲಯದ ಗಸ್ತು ಅರಣ್ಯ ಪಾಲಕ ಕೃಷ್ಣ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶಶಾಂಕ್, ಲೋಕೇಶ್ ಸೇರಿದಂತೆ ಇತರರು ಇದ್ದರು.

ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಬೋನಿನಲ್ಲಿ ಸೆರೆ

ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ಮಲ್ಲನಕುಪ್ಪೆ, ಸಿದ್ದೇಗೌಡನದೊಡ್ಡಿ ಮತ್ತು ಚಾಕನಕೆರೆ ಗ್ರಾಮಗಳಲ್ಲಿ ಜನರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನಪಟ್ಟಣ ತಾಲೂಕು ಮತ್ತು ತುಮಕೂರು ಜಿಲ್ಲೆಯ ಹುಲಿಯೂರು ದುರ್ಗ ಗಡಿ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಮಾಕಳ್ಳಿ ಅರಣ್ಯ ಪ್ರದೇಶದಿಂದ ವಲಸೆ ಬಂದಿದ್ದ ಚಿರತೆ ಗ್ರಾಮಗಳ ರೈತರ ಮನೆಗಳಿಗೆ ದಾಳಿ ನಡೆಸಿ ಕುರಿ, ಮೇಕೆ ಮತ್ತು ಬೀದಿ ನಾಯಿಗಳ ಮೇಲೆ ದಾಳಿ ನಡೆಸಿ ತಿಂದು ಹಾಕಿತ್ತು.

ಅಲ್ಲದೇ, ಸುತ್ತಮುತ್ತಲ್ಲಿನ ಗ್ರಾಮಗಳ ಜನರು ರಾತ್ರಿ ವೇಳೆ ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮಸ್ಥರು ದೂರಿನ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿ ಗವಿಯಪ್ಪ ಮಾರ್ಗದರ್ಶನದಲ್ಲಿ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಕಳೆದ ಅಕ್ಟೋಬರ್ 9ರಂದು ಬೋನ್ ಇರಿಸಿದ್ದರು.ಸೋಮವಾರ ರಾತ್ರಿ ಚಿರತೆ ಬೋನಿನಲ್ಲಿ ಸೆರೆಯಾಗಿದ್ದು, ಚಿರತೆಯನ್ನು ನಾಗರಹೊಳೆ ವನ್ಯಜೀವಿಗಳ ಅರಣ್ಯ ಧಾಮದ ವಶಕ್ಕೆ ನೀಡಲಾಗುವುದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.