ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಹಲವು ಭಾಗಗಳಲ್ಲಿ ದಿನದಿಂದ ದಿನಕ್ಕೆ ಚಿರತೆ ಹಾವಳಿ ಹೆಚ್ಚಾಗುತ್ತಿದ್ದು ಗ್ರಾಮಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು ಕೆಲವು ಕಡೆಗಳಲ್ಲಿ ಚಿರತೆ ದಾಳಿ ಪ್ರಕರಣಗಳು ನಡೆದಿದ್ದು ಅರಣ್ಯ ಇಲಾಖೆ ಚಿರತೆಗಳ ಹಾವಳಿ ಇರುವ ಕಡೆಗಳಲ್ಲಿ ಬೋನ್ ಇಡುವ ಮೂಲಕ ಚಿರತೆಗಳಿಗೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ರೈತರು ಹೊಲ-ತೋಟಗಳಿಗೆ ಕೃಷಿ ಕೆಲಸ ಕಾರ್ಯಗಳಿಗೆ ಹೋಗಲು ಭಯಪಡುವಂತಾಗಿದೆ. ಈ ಹಿಂದೆ ಹಲವಾರು ಬಾರಿ ಕುರಿ, ಮೇಕೆ, ಸಾಕು ನಾಯಿ, ಕರುಗಳನ್ನು ತಿಂದಿದ್ದು, ಗ್ರಾಮಸ್ಥರು ಹೊಲ ತೋಟಗಳಿಗೆ ನೀರು ಹಾಯಿಸಲು ಹಾಗೂ ತಮ್ಮ ದನ, ಕುರಿ, ಮೇಕೆಗಳನ್ನು ಮೇಯಿಸಲು ಭಯಪಡುತ್ತಿದ್ದಾರೆ. ಚಿರತೆಗಳ ಸಂತತಿ ಹೆಚ್ಚಾಗುತ್ತಿದ್ದು, ಒಂದಲ್ಲೊಂದು ಚಿರತೆ ದಾಳಿ ಪ್ರಕರಣಗಳು ನಡೆಯುತ್ತಿದ್ದು ಪ್ರತಿನಿತ್ಯ ಭಯದ ವಾತಾವರಣ ನಿರ್ಮಾಣವಾಗಿದೆ.ಎಲ್ಲೆಲ್ಲೂ ಚಿರತೆ ಹಾವಳಿ: ಕಳೆದ ಒಂದು ತಿಂಗಳ ಹಿಂದೆ ನೊಣವಿನಕೆರೆ ಹೋಬಳಿ ಎನ್. ಮೇಲನಹಳ್ಳಿ ಗ್ರಾಮದ ಶಂಕರಲಿಂಗಪ್ಪ ಎಂಬುವವರ ಮೇಲೆ ಬೆಳಗ್ಗೆ ಆರು ಗಂಟೆ ವೇಳೆ ತಮ್ಮ ತೋಟಕ್ಕೆ ಬಂದಾಗ ಚಿರತೆಯೊಂದು ಅಟ್ಟಾಡಿಸಿದ್ದು, ಜೀವಭಯದಿಂದ ಮನಸೋಇಚ್ಛೆ ಹೊಲಬದುಗಳಲ್ಲಿ ಎದ್ದು ಬಿದ್ದು ಓಡಿ ಚಿರತೆ ಬಾಯಿಂದ ತಪ್ಪಿಸಿಕೊಂಡಿರುವ ಘಟನೆ ನಡೆದಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ರಂಗಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ತಂಡ ಚಿರತೆ ಹಿಡಿಯಲು ಆಗಮಿಸಿದ್ದಾಗ ಚಿರತೆ ತಪ್ಪಿಸಿಕೊಂಡು ಓಡಿದ್ದು ಇದರಿಂದ ಸಿಟ್ಟಾದ ಗ್ರಾಮಸ್ಥರು ಗುಂಪುಕಟ್ಟಿಕೊಂಡು ಚಿರತೆಯಿಂದೆ ಓಡಿದ್ದಾರೆ. ನಿತ್ರಾಣಗೊಂಡ ಚಿರತೆಯನ್ನು ಗುಂಪಿನ ಯುವಕ ಆನಂದ್ ಎಂಬಾತ ಬಾಲವನ್ನು ಹಿಡಿದು ಬೋನಿಗೆ ಹಾಕಿದ್ದ ಘಟನೆ ಕೂಡ ನಡೆದಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ಚಿರತೆಗಳ ದಂಡೇ ಇದ್ದು ಸಂಜೆಯಾದರೆ ಸಾಕು ರಸ್ತೆಗಳ ಮೇಲೆ ರಾಜಾರೋಷವಾಗಿ ಓಡಾಡುತ್ತಿವೆ. ಕೆಲ ಮನೆಗಳ ಬಳಿ ಓಡಾಡಿರುವ ಹೆಜ್ಜೆ ಗುರುತುಗಳಿದ್ದು ನಾಯಿಗಳನ್ನು ತಿಂದಿರುವ ನಿದರ್ಶನಗಳೂ ನಡೆದಿವೆ. ಹೀಗಾಗಿ ಜನರು, ರೈತರು ತುಂಬಾ ಹೆದರಿದ್ದು ಅರಣ್ಯ ಇಲಾಖೆಯವರು ಅಗತ್ಯ ಕ್ರಮ ತೆಗೆದುಕೊಳ್ಳಬೇಕಿದೆ. ಶಾಲಾ ದಾರಿಯಲ್ಲಿ ಚಿರತೆ ಪ್ರತ್ಯಕ್ಷ: ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಕಲ್ಲುಶೆಟ್ಟಿಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗಿಣಕಿಕೆರೆ, ಆಯರಹಳ್ಳಿ ಗೊಲ್ಲರಹಟ್ಟಿ ಮತ್ತಿತರೆ ಹಳ್ಳಿಗಳಿಂದ ಮಕ್ಕಳು ಬರುತ್ತಾರೆ. ಆದರೆ ಬರುವ ದಾರಿಯಲ್ಲಿರುವ ಚಾನಲ್ ಪಕ್ಕದಲ್ಲಿ ಚಿರತೆ ಪ್ರತಿದಿನ ಮಕ್ಕಳ ಕಣ್ಣಿಗೆ ಕಾಣಿಸುತ್ತಿದ್ದು ಮಕ್ಕಳಲ್ಲಿ ಆತಂಕ ಉಂಟಾಗಿದ್ದು ಇದರಿಂದ ಶಾಲೆಗೆ ಭಯದಿಂದ ಬರುವಂತಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ. ಆದ್ದರಿಂದ ಚಿರತೆಯನ್ನು ಸೆರೆಯಿಡಿಯುವ ಮೂಲಕ ಮಕ್ಕಳ ರಕ್ಷಣೆ ಮಾಡಬೇಕೆಂದು ಶಾಲೆ ಮುಖ್ಯ ಶಿಕ್ಷಕರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಒಟ್ಟಾರೆ ಚಿರತೆಗಳ ಕಾಟದಿಂದ ರೈತರು, ಸಾರ್ವಜನಿಕರು, ಶಾಲಾ ಮಕ್ಕಳು ಕಂಗಾಲಾಗಿದ್ದು ಕೂಡಲೆ ಅರಣ್ಯ ಇಲಾಖೆಯವರು ಬೋನ್ ಇಟ್ಟು ಚಿರತೆಗಳ ಹಾವಳಿ ತಡೆಗಟ್ಟಿ ನಿರ್ಭಯದಿಂದ ಓಡಾಡುವಂತೆ ಮಾಡಬೇಕಿದೆ. ಇಲ್ಲವಾದಲ್ಲಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.