ಕುಷ್ಠರೋಗಿಗಳು ಸಂಪೂರ್ಣ ಗುಣಮುಖರಾಗಲು ಸಾಧ್ಯ

| Published : Jan 31 2025, 12:45 AM IST

ಸಾರಾಂಶ

ಸೂಕ್ತ ಚಿಕಿತ್ಸೆಯಿಂದ ಕುಷ್ಠರೋಗವನ್ನು ಸಂಪೂರ್ಣವಾಗಿ ಗುಣಮುಖಪಡಿಸಬಹುದಾಗಿದೆ ಎಂದು ನ್ಯಾ. ನೂರುನ್ನಿಸಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಸೂಕ್ತ ಚಿಕಿತ್ಸೆಯಿಂದ ಕುಷ್ಠರೋಗವನ್ನು ಸಂಪೂರ್ಣವಾಗಿ ಗುಣಮುಖಪಡಿಸಬಹುದಾಗಿದೆ ಎಂದು ನ್ಯಾ. ನೂರುನ್ನಿಸಾ ತಿಳಿಸಿದರು. ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸುಮಾರು ವರ್ಷಗಳ ಹಿಂದೆ ಕುಷ್ಠರೋಗವು ಯಾವುದೇ ಔಷಧೋಪಚಾರವಿಲ್ಲದೆ ಗುಣಮುಖವಾಗದ ಖಾಯಿಲೆಯಾಗಿತ್ತು. ಕುಷ್ಠರೋಗಿಗಳನ್ನು ಅಸ್ಪ್ರಶ್ಯರಂತೆ ಕಾಣುವ ವ್ಯವಸ್ಥೆಯಿತ್ತು. ಪ್ರಸ್ತುತ ಕುಷ್ಠರೋಗಕ್ಕೆ ಉಚಿತ ಔಷಧಿ ಲಭ್ಯವಿದ್ದು, ಸಕಾಲದಲ್ಲಿ ಚಿಕಿತ್ಸೆ ಪಡೆಯುವುದರಿಂದ ಕುಷ್ಠರೋಗದಿಂದ ಗುಣಮುಖ ಹೊಂದಬಹುದು ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್ ಮಾತನಾಡಿ ಹಿಂದಿನ ಕಾಲದಲ್ಲಿ ಕುಷ್ಠರೋಗವನ್ನು ಶಾಪಗ್ರಸ್ಥ ರೋಗವೆಂದು ಪರಿಗಣಿಸಲಾಗುತ್ತಿತ್ತು. ಜಿಲ್ಲೆಯ ಇತರೆ ತಾಲೂಕುಗಳಿಗಿಂತ ಶಿರಾ, ಪಾವಗಡ, ಮಧುಗಿರಿ ತಾಲೂಕಿನಲ್ಲಿ ಕುಷ್ಠರೋಗ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಆರೋಗ್ಯ ಇಲಾಖೆಯಿಂದ ಕುಷ್ಠ ರೋಗಿಗಳಿಗೆ ಉಚಿತವಾಗಿ ಪೌಷ್ಟಿಕಾಂಶ ಔಷಧಿ, ಎಂಸಿಆರ್ ಚಪ್ಪಲಿ, ಕೈಕಾಲುಗಳಿಗೆ ಗ್ರಿಪ್ ಸೇರಿದಂತೆ ಅನೇಕ ಉಪಕರಣಗಳನ್ನು ನೀಡಲಾಗುತ್ತಿದೆ ಎಂದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ರವೀಂದ್ರ ನಾಯ್ಕ ಮಾತನಾಡಿ, ಕುಷ್ಠರೋಗ ನಿರ್ಮೂಲನೆಯಲ್ಲಿ ಗಾಂಧೀಜಿಯವರ ಕೊಡುಗೆ ಇದ್ದು, ಗಾಂಧೀಜಿಯವರು ಹುತಾತ್ಮರಾದ ದಿನದ ನೆನಪಾಗಿ ಇಂದು ಕುಷ್ಠರೋಗ ನಿರ್ಮೂಲನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ರೋಗದ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ ಎಂದರು. ಕಾರ್ಯಕ್ರಮದ ಪ್ರಯುಕ್ತ ಜಿಲ್ಲಾಸ್ಪತ್ರೆ ಆವರಣದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿವರೆಗೂ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಸ್ಗರ್ ಬೇಗ್, ಜಿಲ್ಲಾ ಚರ್ಮರೋಗ ತಜ್ಞ ಡಾ. ಅಸ್ಮಾ ತಬಸುಮ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಿದಾನಂದಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ, ಲಕ್ಷ್ಮಿಕಾಂತ್, ನಾಗರಾಜ್, ಜಯಣ್ಣ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.