ಸಾರಾಂಶ
ರಮೇಶ್ ಬಿದರಕೆರೆ
ಹಿರಿಯೂರು : ತಾಲೂಕಿನ ಕೆಲ ಗ್ರಾಮಗಳಲ್ಲಿ ಕಳೆದ ಬೇಸಿಗೆಯ ಸಮಯದಲ್ಲಿ ನೀರಿನ ಹಾಹಾಕಾರ ಉತ್ತುಂಗಕ್ಕೇರಿತ್ತು.
ಜೆಜಿ ಹಳ್ಳಿ ಹೋಬಳಿಯ ಹಳ್ಳಿಗಳಲ್ಲಿ ಕಿಮೀ ಗಟ್ಟಲೆ ನಡೆದು ಹೋಗಿ ಯಾವುದೋ ಜಮೀನುಗಳ ಬೋರ್‌ಗಳಲ್ಲಿ ಕುಡಿವ ನೀರು ಹಿಡಿದು ತರುವಷ್ಟು ನೀರಿನ ತೊಂದರೆಯಾಗಿತ್ತು. ಸಚಿವರಿಗೆ ಕುಡಿಯುವ ನೀರಿನ ವಿಚಾರಕ್ಕೆ ಘೇರಾವ್ ಹಾಕಿದ ಘಟನೆಯೂ ನಡೆದಿತ್ತು. ಆದರೆ ಈ ಬಾರಿ ಆ ಮಟ್ಟದ ನೀರಿನ ಹಾಹಾಕಾರವಾಗಲಾರದು ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ವಿವಿ ಸಾಗರ ಜಲಾಷಯ ತುಂಬಿರುವುದು ಮತ್ತು ಅಚ್ಚುಕಟ್ಟು ವ್ಯಾಪ್ತಿಗೆ ಕಾಲುವೆಗಳಲ್ಲಿ ನೀರು ಹರಿಸಿರುವುದರಿಂದ ಬೋರ್‌ವೆಲ್‌ಗಳು ರೀ ಚಾರ್ಜ್ ಆಗಿದ್ದು ನೀರಿನ ತೊಂದರೆ ಅಲ್ಪ ಮಟ್ಟಿಗೆ ಕಡಿಮೆಯಾದಂತಿದೆ.
ಸುಮಾರು 300ಕ್ಕೂ ಹೆಚ್ಚು ಜನವಸತಿ ಪ್ರದೇಶಗಳಿಗೆ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ ಜಾರಿಯಲ್ಲಿದ್ದು ಕಾಮಗಾರಿ ಚಾಲ್ತಿಯಲ್ಲಿದೆ. ಉಡುವಳ್ಳಿ ಗ್ರಾಪಂ ವ್ಯಾಪ್ತಿಯ ಚಳ್ಳಮಡು, ಭೂತಯ್ಯನಹಟ್ಟಿ, ಅಜ್ಜನಹಟ್ಟಿ, ನಜೀರ್ ಕಾಲೋನಿ, ಇದ್ದಲ ನಾಗೇನಹಳ್ಳಿ, ವಸಂತ ನಗರಗಳಲ್ಲಿ ಅಂತರ್ಜಲ ಬತ್ತಿ ಹೋಗಿ ಸ್ವಲ್ಪ ಮಟ್ಟಿನ ನೀರಿನ ಸಮಸ್ಯೆ ಇದೆ.
ಉಡುವಳ್ಳಿ ಕೆರೆ ನೀರಿನ ಪ್ರಮಾಣ ಕಡಿಮೆಯಾಗಿದ್ದು ಆ ಭಾಗದ ಬೋರ್‌ವೆಲ್‌ಗಳನ್ನು ರೀ ಬೋರ್ ಮಾಡಲಾಗುತ್ತಿದೆ. ಈಗಲೂ ಚಳ್ಳಮಡು ಮತ್ತು ಭೂತಯ್ಯನ ಹಟ್ಟಿ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ವಿವಿ ಪುರ ಪಂಚಾಯಿತಿ ವ್ಯಾಪ್ತಿಯ ಭರಂಗಿರಿ, ತಳವಾರಹಟ್ಟಿ, ಕಕ್ಕಯ್ಯನಹಟ್ಟಿ ಮತ್ತು ಐಮಂಗಲ ಭಾಗದ ದಾಸಣ್ಣನ ಮಾಳಿಗೆ, ಕಲ್ಲಟ್ಟಿ, ಜೆಜಿ ಹಳ್ಳಿ ಭಾಗದಲ್ಲಿ ಆನೆಸಿದ್ರಿ ಮುಂತಾದ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಗಾಯಿತ್ರಿ ಜಲಾಷಯದಿಂದ ಮತ್ತು ಚಾನೆಲ್‌ನಲ್ಲಿ ವಿವಿ ಸಾಗರದ ನೀರು ಹರಿದಿದ್ದರಿಂದ ಒಂದಿಷ್ಟು ನೀರಿನ ಕೊರತೆ ನೀಗಿದೆ.
ಈಗಾಗಲೇ ಗ್ರಾಪಂಗಳಲ್ಲಿ ತುರ್ತು ಕುಡಿಯುವ ನೀರು ಒದಗಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ತಾಲೂಕಿನಲ್ಲಿ 201 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಅವುಗಳಲ್ಲಿ 189 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 12 ಘಟಕಗಳು ದುರಸ್ಥಿ ಸ್ಥಿತಿಯಲ್ಲಿದ್ದು ಇನ್ನೆರಡು ಉಪಯೋಗಕ್ಕೆ ಬರದಷ್ಟು ಹಾಳಾಗಿವೆ. ಸುಮಾರು 12 ರಿಂದ 15 ವರ್ಷದಷ್ಟು ಹಳೆಯ ಆರ್‌ಒ ಪ್ಲಾoಟ್ ಗಳಿರುವುದು ಸಹ ನೀರಿನ ತೊಂದರೆಗೆ ಕಾರಣವಾಗಿದೆ. ಬೇಸಿಗೆಯಲ್ಲಿ ಸುಮಾರು 12 ಗ್ರಾಮ ಪಂಚಾಯಿತಿಗಳ 118 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಆತಂಕವಿದೆ. ತಾಲೂಕಿನಲ್ಲಿ 1298 ಕೊಳವೆ ಬಾವಿಗಳಿದ್ದು, 591 ಕಾರ್ಯಾಚರಣೆಯ ಸ್ಥಿತಿಯಲ್ಲಿವೆ. ಕಡಿಮೆ ನೀರಿನಿಂದಾಗಿ 433 ಕೊಳವೆ ಬಾವಿಗಳು ಸ್ಥಗಿತಗೊಂಡಿವೆ. ಸುಮಾರು 274 ಕೊಳವೆ ಬಾವಿಗಳು ಬತ್ತಿ ಹೋಗಿವೆ. ವಿವಿ ಸಾಗರದ ರಂಗನಾಥ ಸ್ವಾಮಿ ದೇವಸ್ಥಾನದ ಬಳಿ ಅಂದಾಜು 250 ಕೋಟಿ ವೆಚ್ಚದಲ್ಲಿ 128 ಹಳ್ಳಿಗಳಿಗೆ ನೀರು ಪೂರೈಸಲು ಜಲ ಶುದ್ಧೀಕರಣ ಘಟಕ ನಿರ್ಮಿಸಲಾಗುತ್ತಿದೆ. ಒಟ್ಟಿನಲ್ಲಿ ಕಳೆದ ಬಾರಿಗಿಂತ ಈ ಸಲ ಕುಡಿಯುವ ನೀರಿನ ಕೊರತೆ ಕಡಿಮೆ ಪ್ರಮಾಣದ್ದು ಎನ್ನಲಾಗಿದೆ.