ಮುಡಾದಲ್ಲಿ ನ್ಯಾಯಾಂಗದಿಂದ ಬಿಜೆಪಿಗೆ ತಕ್ಕ ಪಾಠ: ಕಾರ್ಮಿಕ ಸಚಿವ ಸಂತೋಷ ಲಾಡ್

| Published : Feb 21 2025, 11:45 PM IST

ಸಾರಾಂಶ

ಬಿಜೆಪಿಯವರ ಷಡ್ಯಂತ್ರದಿಂದಾಗಿ ಮುಡಾ ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿಗೆ ಕ್ಲೀನ್ ಚಿಟ್ ದೊರೆತಿರುವುದು ಬಿಜೆಪಿಗೆ ನ್ಯಾಯಾಂಗದಿಂದ ತಕ್ಕ ಪಾಠ ದೊರೆತಂತಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು.

ಬಿಜೆಪಿ ಷಡ್ಯಂತ್ರದ ಕೇಸು । ಮುಖ್ಯಮಂತ್ರಿ, ಪತ್ನಿಗೆ ಕ್ಲೀನ್‌ ಚಿಟ್‌ಗೆ ಹರ್ಷ

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಜೆಪಿಯವರ ಷಡ್ಯಂತ್ರದಿಂದಾಗಿ ಮುಡಾ ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿಗೆ ಕ್ಲೀನ್ ಚಿಟ್ ದೊರೆತಿರುವುದು ಬಿಜೆಪಿಗೆ ನ್ಯಾಯಾಂಗದಿಂದ ತಕ್ಕ ಪಾಠ ದೊರೆತಂತಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಮತ್ತವರ ಪತ್ನಿಗೆ ಈಗ ಲೋಕಾಯುಕ್ತದಿಂದಲೇ ಕ್ಲೀನ್ ಚಿಟ್ ಸಿಕ್ಕಿರುವುದು ತಮಗೆ ಸಂತಸ ತಂದಿದೆ ಎಂದರು.

ಒಬ್ಬ ಹಿಂದುಳಿದ ವರ್ಗಗಳ ನಾಯಕನಿಗೆ ಕಪ್ಪು ಚುಕ್ಕೆ ತರಲು ಬಿಜೆಪಿ ಯಾವ ರೀತಿ ಸಂಚು ಮಾಡಿತ್ತು ಎಂಬುದು ಇದರಿಂದಲೇ ತಿಳಿಯುತ್ತದೆ. ಮುಡಾದ 14 ನಿವೇಶನಗಳ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆ. ಆದರೆ, ಅಲ್ಲಿರುವ 125ಕ್ಕೂ ಹೆಚ್ಚು ನಿವೇಶನಗಳ ಬಗ್ಗೆ ಯಾಕೆ ಚರ್ಚೆಯಾಗುತ್ತಿಲ್ಲ? ಉ‍ಳಿದ 111 ನಿವೇಶನಗಳನ್ನು ನೀಡಿದ್ದು ಯಾರು? ಯಾವ ಆಧಾರದಲ್ಲಿ ಹಂಚಿಕೆ ಮಾಡಿದ್ದರು ಎಂಬುದೂ ಚರ್ಚೆಯಾಗಬೇಕಲ್ಲವೇ. ಅದರ ಬಗ್ಗೆ ಯಾಕೆ ತನಿಖೆಯಾಗಿಲ್ಲ ಎಂದು ಪ್ರಶ್ನಿಸಿದರು.

ಗಡ್ಕರಿ ಪ್ರಧಾನಿಯಾದ್ರೆ ದೇಶ ಅಭಿವೃದ್ಧಿ ಕಡೆ:

ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಧಾನಿಯಾದರೆ ಒಳ್ಳೆಯದಾಗುತ್ತದೆ. ಬಿಜೆಪಿ ಪಕ್ಷವೇ ಈ ದೇಶದಲ್ಲಿ ಇರಬಾರದು ಎಂಬುದು ನಮ್ಮ ಅಭಿಪ್ರಾಯವಿದೆ. ಆದರೆ, ಗಡ್ಕರಿ ಪ್ರಧಾನಿ ಆಗಬೇಕು. ದೇಶ ಇನ್ನೂ ಬೆಳೆಯಬೇಕಾದರೆ ಉಳಿದ 4 ವರ್ಷಗಳ ಅವಧಿಗೆ ನಿತಿನ್ ಗಡ್ಕರಿಗೆ ಪ್ರಧಾನಿಯಾಗಲು ಅ‍ವಕಾಶ ಮಾಡಿಕೊಟ್ಟರೆ ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ವಿವಿಗಳನ್ನು ಪ್ರಾರಂಭ ಮಾಡಿದ್ದರು. ಆದರೆ, ಅದೇ ಸರ್ಕಾರ ವಿವಿಗಳಿಗಾಗಿ ಎಷ್ಟು ಅನುದಾನ ಮೀಸಲಿಟ್ಟಿದ್ದರು? ಒಂದು ವಿಶ್ವವಿದ್ಯಾಲಯಕ್ಕೆ 2 ಕೋಟಿ ರು. ಅನುದಾನ ಬಿಡುಗಡೆ ಮಾಡಿದರೆ, ಅವು ಸಮರ್ಪಕವಾಗಿ ನಡೆಯಲು ಸಾಧ್ಯವೇ? ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.

ಗೃಹಲಕ್ಷ್ಮಿ ಹಣ ಮೂರು ತಿಂಗಳಿನದು ಬಾಕಿ ಇದ್ದು, ಅದನ್ನು ಕೊಡುವುದಾಗಿ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಕೇಂದ್ರ ಸರ್ಕಾರ 10 ಲಕ್ಷ ರು. ಕೊಡ್ತೀವಿ, 11 ಲಕ್ಷ ರು. ಕೊಡ್ತೀವಿ ಎಂದು ಹೇಳಿಯೇ 11 ವರ್ಷವಾಯ್ತು. ಅದನ್ನು ಯಾರೂ ಕೇಳುತ್ತಿಲ್ಲ. ಇದು ಚರ್ಚೆಯಾಗುತ್ತಿಲ್ಲ. ಕೇಂದ್ರ ಹೇಳಿದ್ದ ಕಾಮಗಾರಿಗಳ ಬಗ್ಗೆಯೂ ಚರ್ಚೆಯಾಗುತ್ತಿಲ್ಲ. ಮೂರು ತಿಂಗಳ ಗೃಹಲಕ್ಷ್ಮಿ ಹಣ ಬಂದಿಲ್ಲವೆಂದರೆ ಮಾತ್ರ ಕೇಳುತ್ತೀರಿ ಎಂದು ವ್ಯಂಗ್ಯವಾಡಿದರು.

ಬೆಂಕಿಪಟ್ಟಣವೂ ಚೀನಾದ್ದೇ, ಎಲ್ಲಿದೆ ಮೇಕ್ ಇನ್ ಇಂಡಿಯಾ:

ಮೇಕ್ ಇನ್ ಇಂಡಿಯಾ ಎಂದು ಹೇಳುತ್ತಾರೆ. ಏನಾಗಿದೆ ಅದರಲ್ಲಿ ಎಂಬ ಬಗ್ಗೆ ಕೇಂದ್ರ ಸರ್ಕಾರ ಚರ್ಚೆಗೆ ಬರಲಿ. ನಮಗೊಂದು ಕಡ್ಡಿಪಟ್ಟಣ ಬರಬೇಕಂದರೂ ಅದು ಚೀನಾದಿಂದ ಬರಬೇ

ಕು. ದೀಪಾವಳಿಗೆ ದೀಪಿಕಾ ಪಟಾಕಿ ಬೇಕಂದರೂ ಅದೇ ಚೈನಾದಿಂದಲೇ ಬರಬೇಕು. ಎಲ್ಲಿ ಹೋಯ್ತು ಮತ್ತೇ ಮೇಕ್ ಇನ್ ಇಂಡಿಯಾ? ಮೇಕ್ ಇನ್ ಇಂಡಿಯಾದ ಪ್ರಚಾರಕ್ಕಾಗಿಯೇ ಎಷ್ಟು ಹಣ ಖರ್ಚಾಗಿದೆಯೆಂಬ ಬಗ್ಗೆಯೂ ಚರ್ಚೆಯಾಗಬೇಕು. ಇಂತಹ ವಿಚಾರ ಚರ್ಚೆಗೇ ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ಹಣೆಬರಹವನ್ನು ಯಾರೂ ಬದಲಾಯಿಸೋಕೆ ಆಗುವುದಿಲ್ಲ. ಯಾರೂ ಸಹ ಏನು ಮಾಡುವುದಕ್ಕೂ ಆಗುವುದಿಲ್ಲ. ದೇಶದ ಜನತೆಗೆ ಕೇಂದ್ರದ ಐವರು ಮಂತ್ರಿಗಳ ಹೆಸರು ಗೊತ್ತಿಲ್ಲ

ದಂತೆ ಪ್ರಧಾನಿ ಮಾಡಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ಬಿಟ್ಟರೆ, ಬೇರೆ ಯಾರೂ ಮಾತನಾಡುವುದಿಲ್ಲ. ಇನ್ನು ಯಾವೊಬ್ಬ ಕೇಂದ್ರ ಸಚಿವರ ಸುದ್ದಿನೇ ಇಲ್ಲ. ಎಲ್ಲದಕ್ಕೂ ಪ್ರಧಾನ ಮಂತ್ರಿಯನ್ನೇ ತೋರಿಸಿದರೆ, ಗ್ರಾಪಂ, ಜಿಪಂಗಳಾದರೂ ಯಾಕೆ ಬೇಕು ಎಂದು ಕೇಂದ್ರ ನಾಯಕರನ್ನು ಟೀಕಿಸಿದರೆ ರಾಜ್ಯದಲ್ಲಿ ಸಚಿವರಿಗೆ ಸ್ಥಾನ ಉಳಿಯುತ್ತದೆಂದಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹೇಳಿಕೆಗೆ ಅಣಕವಾಡಿದರು.