ರಾಜ್ಯದ ಪ್ರತಿ ಮನೆಯಲ್ಲಿ ಒಬ್ಬ ಕ್ರೀಡಾಳು ರೂಪುಗೊಳ್ಳಲಿ

| Published : Nov 30 2024, 12:50 AM IST

ಸಾರಾಂಶ

ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡುವ ಮನಸ್ಸಿದ್ದರೆ ನಿರಂತರ ಸಾಧನೆ ಮಾಡಿ.

ಬಳ್ಳಾರಿ: ಹರಿಯಾಣ-ಪಂಜಾಬ್ ರಾಜ್ಯಗಳಂತೆ ನಮ್ಮಲ್ಲೂ ಕ್ರೀಡಾಳುಗಳು ಮುನ್ನೆಲೆಗೆ ಬರಬೇಕು. ರಾಜ್ಯದ ಪ್ರತಿ ಒಂದು ಮನೆಯಲ್ಲಿ ಒಬ್ಬ ಕ್ರೀಡಾಳು ರೂಪುಗೊಳ್ಳುವಂತಾಗಬೇಕು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ನಗರದ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಹಾಗೂ ಸೇಂಟ್ ಜಾನ್ಸ್ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಫುಟ್ಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಕನಸಿನಂತೆಯೇ ಮುನ್ನಡೆಯಿರಿ. ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡುವ ಮನಸ್ಸಿದ್ದರೆ ನಿರಂತರ ಸಾಧನೆ ಮಾಡಿ. ಗುರಿ ಮುಟ್ಟುವವರೆಗೂ ಶ್ರಮಿಸಿ. ಪೋಷಕರ ಒತ್ತಡಕ್ಕೆ ಮಣಿಯದೆ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ. ಸಾಧನೆ ಎಂಬುದು ಸುಮ್ಮನೆ ಬರುವುದಿಲ್ಲ. ನಿರ್ದಿಷ್ಟ ಗುರಿ ಹಾಗೂ ಸತತ ಪರಿಶ್ರಮ ಬೇಕಾಗುತ್ತದೆ ಎಂದರಲ್ಲದೆ, ಕ್ರೀಡಾ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಸಾಕಷ್ಟು ಉತ್ತೇಜನ ನೀಡುತ್ತಿದೆ. ಪೋಷಕರಿಂದಲೂ ಸಹಕಾರ ಸಿಗಬೇಕಾಗಿದೆ. ಆಗ ಮಾತ್ರ ಮತ್ತಷ್ಟೂ ಪ್ರಗತಿಯಾಗಲು ಸಾಧ್ಯ ಎಂದು ತಿಳಿಸಿದರು.

ನನ್ನ ತಂದೆ ನಾರಾ ಸೂರ್ಯನಾರಾಯಣ ರೆಡ್ಡಿ ಅವರು ಕೂಡ ಫುಟ್ಬಾಲ್ ಆಟಗಾರರಾಗಿದ್ದರು. ಬಳ್ಳಾರಿಯಲ್ಲಿ ಫುಟ್ಬಾಲ್ ಪಂದ್ಯಾವಳಿ ಏರ್ಪಡಿಸಿದ್ದ ಮೊದಲಿಗರಾಗಿದ್ದಾರೆ. ಈಗಲೂ ಅವರಲ್ಲಿ ಕ್ರೀಡಾಮನೋಭಾವವಿದೆ. ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಕ್ರೀಡೆಯಿಂದ ಬರಲು ಮಾತ್ರ ಸಾಧ್ಯ ಎಂದರು.

ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗೆಲ್ಲುವ ತಂಡಕ್ಕೆ ₹1 ಲಕ್ಷ, ರನ್ನರ್ ಅಪ್ ತಂಡಕ್ಕೆ ₹50 ಸಾವಿರ ಟಚ್ ಫಾರ್ ಲೈಫ್ ಫೌಂಡೇಶನ್ ವತಿಯಿಂದ ನೀಡುವುದಾಗಿ ಇದೇ ವೇಳೆ ಶಾಸಕ ಭರತ್ ರೆಡ್ಡಿ ಘೋಷಿಸಿದರು. ಮೇಯರ್ ಮುಲ್ಲಂಗಿ ನಂದೀಶ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಾಲಾಕ್ಷ ಟಿ, ಸೇಂಟ್ ಜಾನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹೆಚ್.ಎಸ್.ಶಿವರಾಮ್ ಸೇರಿದಂತೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.29ಬಿಆರ್‌ವೈ1ಬಳ್ಳಾರಿಯಲ್ಲಿ ಜರುಗಿದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಫುಟ್ಬಾಲ್ ಪಂದ್ಯಾವಳಿಗೆ ಶಾಸಕ ನಾರಾ ಭರತ್ ರೆಡ್ಡಿ ಚಾಲನೆ ನೀಡಿದರು.