ಸಾರಾಂಶ
ಪ್ರತಿಪಕ್ಷವು ಆಡಳಿತದಲ್ಲಿ ಹೇಗಿರಬೇಕೆಂದು ಬಿಜೆಪಿಯವರು ಅಟಲ್ ಬಿಹಾರಿ ವಾಜಪೇಯಿ ಅವರಂತಹ ವ್ಯಕ್ತಿಗಳಿಂದ ತಿಳಿದುಕೊಳ್ಳಲಿ ಎಂದರು.
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿನಾ ಕಾರಣ ಆರೋಪ ಮಾಡುವ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಕಸರತ್ತು ನಡೆಸುತ್ತಿದೆ. ಇದಕ್ಕಾಗಿ ಮೈಸೂರಿಗೆ ಪಾದಯಾತ್ರೆ ಮಾಡುವ ಬದಲು ಅವರಿಗೆ ನಿಜವಾಗಿಯೂ ಜನರ ಮೇಲೆ ಕಾಳಜಿಯಿದ್ದರೆ ಜ್ವಲಂತ ಸಮಸ್ಯೆಗಳಾದ ಬೆಲೆಯೇರಿಕೆ, ಕೇಂದ್ರದ ಅನುದಾನ ತಾರತಮ್ಯದ ಬಗ್ಗೆ ದೆಹಲಿಗೆ ಪಾದಯಾತ್ರೆ ತೆರಳಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ತನ್ನ ಪ್ರತಿಪಕ್ಷದ ಜವಾಬ್ದಾರಿ ಮರೆತು ವಿಧಾನಸಭೆ, ವಿಧಾನ ಪರಿಷತ್ ಅಧಿವೇಶನಕ್ಕೆ ಅಡ್ಡಿಪಡಿಸಿದೆ. ಪ್ರತಿಪಕ್ಷವು ಆಡಳಿತದಲ್ಲಿ ಹೇಗಿರಬೇಕೆಂದು ಬಿಜೆಪಿಯವರು ಅಟಲ್ ಬಿಹಾರಿ ವಾಜಪೇಯಿ ಅವರಂತಹ ವ್ಯಕ್ತಿಗಳಿಂದ ತಿಳಿದುಕೊಳ್ಳಲಿ ಎಂದರು.
ಮುಖಂಡರಾದ ಪದ್ಮರಾಜ್ ಆರ್., ಎಂ.ಎಸ್. ಮುಹಮ್ಮದ್, ಶಶಿಧರ ಹೆಗ್ಡೆ, ಅಶ್ರಫ್ ಕೆ., ಹರಿನಾಥ್, ಮಹಾಬಲ ಮಾರ್ಲ, ನವೀನ್ ಡಿಸೋಜ, ಸುಭಾಷ್ ಕೊಲ್ನಾಡ್, ನೀರಜ್ ಚಂದ್ರಪಾಲ್, ಶುಭೋದಯ ಆಳ್ವ, ಪ್ರೇಮ್ ಬಳ್ಳಾಲ್‌ಬಾಗ್, ವಿಕಾಶ್ ಶೆಟ್ಟಿ, ಲಾರೆನ್ಸ್ ಡಿಸೋಜ ಇದ್ದರು.ಕೆತ್ತಿಕಲ್ ಗುಡ್ಡ ಕೊರೆಯಲು ಅನುಮತಿ ನೀಡಿದ್ದು ಯಾರು?
ಕೆತ್ತಿಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಭೂಕುಸಿತ ಉಂಟಾಗಿರುವುದು ಸ್ವಯಂಕೃತ ಅಪರಾಧ. ಆ ರೀತಿ ಗುಡ್ಡ ಕೊರೆಯಲು, ಮಣ್ಣು ಸಾಗಾಟಕ್ಕೆ ಅನುಮತಿ ನೀಡಿದವರು ಯಾರು? ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಹಾಗೂ ಮೇಲ್ಭಾಗದಲ್ಲಿರುವವರನ್ನು ಬೇರೆಡೆ ಸ್ಥಳಾಂತರಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಮಂಜುನಾಥ ಭಂಡಾರಿ ಹೇಳಿದರು.