ಮಹಿಳೆಯರಿಂದಲೇ ಬದಲಾವಣೆ ಆರಂಭವಾಗಲಿ: ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಾಲ್

| Published : Mar 19 2025, 12:33 AM IST

ಮಹಿಳೆಯರಿಂದಲೇ ಬದಲಾವಣೆ ಆರಂಭವಾಗಲಿ: ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಾಲ್
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲು ಮಹಿಳೆ ಸುಶಿಕ್ಷಿತಳಾಗಬೇಕು, ತನ್ನ ವೈಯಕ್ತಿಕ ಶುಚಿತ್ವಕ್ಕೆ ಹಾಗೂ ಮನೆಯ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜಿಪಂ ಸಿಇಒ ರುಚಿ ಬಿಂದಲ್ ತಿಳಿಸಿದರು.

ಹಾವೇರಿ: ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹಿಳೆ ಮೊದಲು ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮಹಿಳೆಯರು ವಾಸ್ತವ ತಿಳಿದುಕೊಳ್ಳಬೇಕು ಹಾಗೂ ಮಹಿಳೆಯರಿಂದಲೇ ಬದಲಾವಣೆ ಆರಂಭವಾಗಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಾಲ್ ಹೇಳಿದರು.

ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮೊದಲು ಮಹಿಳೆ ಸುಶಿಕ್ಷಿತಳಾಗಬೇಕು, ತನ್ನ ವೈಯಕ್ತಿಕ ಶುಚಿತ್ವಕ್ಕೆ ಹಾಗೂ ಮನೆಯ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಹಿಳೆಯರು ಶ್ರಮಿಜೀವಿಗಳು, ಅವರ ಪರಿಶ್ರಮಕ್ಕೆ ಪ್ರಶಂಸೆ ಸಿಗುತ್ತಿಲ್ಲ. ಹಾಗಾಗಿ ಇಂದು ಉತ್ತಮ ಮಹಿಳಾ ಕೆಲಸಗಾರರನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಗುತ್ತಿದೆ. ಜೀವನದಲ್ಲಿ ಏನೇ ಸಮಸ್ಯೆ ಬಂದರೂ ಸಹ ಧೈರ್ಯವಾಗಿ ಎದುರಿಸಬೇಕು ಹಾಗೂ ಸದಾ ಖುಷಿಯಾಗಿರಬೇಕು ಎಂದು ಸಲಹೆ ನೀಡಿದರು.

ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ ಸಂವಿಧಾನದಲ್ಲಿ ಮಹಿಳೆಯರಿಗೆ ಶಿಕ್ಷಣ, ಸಮಾನತೆ ಸೇರಿದಂತೆ ವಿವಿಧ ಹಕ್ಕುಗಳನ್ನು ನೀಡುವ ಮೂಲಕ ಅವರಿಗೆ ಗಟ್ಟಿ ನೆಲೆ ಕಲ್ಪಿಸಿಕೊಟ್ಟಿದ್ದಾರೆ. ಇಂದು ಗ್ರಾಪಂದಿಂದ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿವರೆಗೆ ಎಲ್ಲ ಹುದ್ದೆ ಅಲಂಕರಿಸಿದ್ದಾರೆ. ತೊಟ್ಟಿಲನ್ನು ತೂಗುವ ಕೈ ದೇಶವನ್ನು ಆಳಬಲ್ಲದೆ ಎಂದು ತೋರಿಸಿದ್ದಾರೆ. ದೇಶದ ಆರ್ಥಿಕ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ ಮಾತನಾಡಿ, ಕುಟುಂಬ ನಿರ್ವಹಣೆಯಲ್ಲಿ ಮಹಿಳೆ ಪಾತ್ರ ಪ್ರಮುಖವಾಗಿದೆ. ಸರ್ಕಾರ ಶಿಕ್ಷಣ, ಉದ್ಯೋಗ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿದೆ. ಸರ್ಕಾರದ ನೀಡಿದ ಅವಕಾಶದ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕು ಎಂದು ಕರೆ ನೀಡಿದರು.

ಅಕ್ಷತಾ ಕೆ.ಸಿ. ಮಾತನಾಡಿ, ಬಸವಣ್ಣ, ಡಾ. ಬಿ.ಆರ್.ಅಂಬೇಡ್ಕರ ಹಾಗೂ ಸಾವಿತ್ರಿಬಾಯಿಫುಲೆ ಮಹಿಳಾ ಸಮಾನತೆಗೆ ಹೋರಾಡಿದ ಮಹಾನ್ ವ್ಯಕ್ತಿಗಳು. ಎಲ್ಲರೂ ಮಾತಿನಲ್ಲಿ ಹೇಳುತ್ತಾರೆ ಮಹಿಳೆಗೆ ಸಮಾನ ಅವಕಾಶ ನೀಡಲಾಗಿದೆ. ಆದರೆ ಇಂದಿಗೂ ಮಹಿಳೆ ಮೇಲೆ ಅತ್ಯಾಚಾರ, ದೌರ್ಜನ್ಯಗಳ ಹಾಗೂ ಆ್ಯಸಿಡ್ ದಾಳಿಗಳು ನಡೆಯುತ್ತಿರುವುದು ವಿಷಾಧದ ಸಂಗತಿಯಾಗಿದೆ. ಮಹಿಳೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ದಿನನಿತ್ಯ ಹೋರಾಟ ಮಾಡುತ್ತಿದ್ದಾಳೆ ಎಂದು ಹೇಳಿದರು.

ರಾಣಿಬೆನ್ನೂರು ತಾಲೂಕು ಆರೋಗ್ಯಾಧಿಕಾರಿ ರಾಜೇಶ್ವರಿ ಕದರಮಂಡಲಗಿ ಮಹಿಳೆಯರ ವೈಯಕ್ತಿಕ ಶುಚಿತ್ವ ಹಾಗೂ ಪರಿಸರ ಸ್ವಚ್ಛತೆ ಬಗ್ಗೆ ಉಪನ್ಯಾಸ ನೀಡಿದರು. ವಿದ್ಯಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ಎಚ್.ಮೀಶೆ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ಆಲದರ್ತಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ದಿಲ್‌ಶಾದ್ ಉಪಸ್ಥಿತರಿದ್ದರು. ಸುನಿತಾ ಸ್ವಾಗತಿಸಿದರು. ರಕ್ಷಾ ಅಣ್ಣಿಗೇರಿ ನಿರೂಪಿಸಿದರು.