ಬಾಲ್ಯವಿವಾಹ ನಿಷೇಧ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ-2012ರ ಕಾನೂನು ಅರಿವು ಕಾರ್ಯಕ್ರಮ ನವಲಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆಯಿತು.
ನವಲಿ: ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವಿದ್ದಲ್ಲಿ ಮುಂಬರುವ ದಿನಗಳಲ್ಲಿ ಅವರು ಉತ್ತಮ ಸಮಾಜ ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ ಎಂದು ಎಎಸ್‌ಐ ನಿಂಗಪ್ಪ ಹೂಗಾರ ಹೇಳಿದರು.
ನವಲಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಬಾಲ್ಯವಿವಾಹ ನಿಷೇಧ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ-2012ರ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕಾನೂನು ಬಗ್ಗೆ ಅಧ್ಯಯನ ನಡೆಸಿ ಅರಿವು ಮೂಡಿಸಿಕೊಂಡು ಸಾರ್ವಜನಿಕರಿಗೂ ಕಾನೂನು ಬಗ್ಗೆ ತಿಳಿ ಹೇಳಬೇಕು ಎಂದು ಹೇಳಿದರು.ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಈ ಕಾಯ್ದೆಯ ಬಗ್ಗೆ ಅರಿತು ಸುತ್ತಲಿನ ಜನರಿಗೆ ಜಾಗೃತಿ ಮೂಡಿಸಬೇಕು. ಹೆಣ್ಣು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾದರೆ ತಂದೆ, ತಾಯಿ, ಪೋಷಕರಿಗೆ ಅಥವಾ ಶಿಕ್ಷಕರಿಗೆ ತಿಳಿಸಬೇಕು. ಬಾಲ್ಯ ವಿವಾಹದ ಬಗ್ಗೆ ಮಕ್ಕಳಿಗೆ ತಿಳಿದು ಬಂದರೆ ಅದನ್ನು ತಿಳಿಸುವ ಕೆಲಸ ಆಗಬೇಕು. ಬೇರೆಯವರಿಂದ ತೊಂದರೆಯಾದರೆ ಕಾನೂನಿನ ಸಹಾಯ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾನೂನು ಕೈಗತ್ತಿಕೊಳ್ಳಬಾರದು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಪಿಡಿಒ ವೀರಣ್ಣ ನೇಕ್ರಳ್ಳಿ ಮಾತನಾಡಿ, ತಾಲೂಕುವಾರು ಕಾನೂನು ಸೇವಾ ಸಮಿತಿ ರಚಿಸಿ ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ನ್ಯಾಯಾಂಗ ಅತ್ಯಂತ ಶ್ರೇಷ್ಠವಾದುದು. ಇದು ಮನುಷ್ಯರ ಜೀವನದಲ್ಲಿ ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ ಎಂದು ಹೇಳಿದರು.ನವಲಿ ಪಿಡಿಒ ವೀರಣ್ಣ ನೇಕ್ರಳ್ಳಿ, ಸರ್ಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಗುರು ಅಜ್ಮೀರಸಾಬ್, ಎಸ್‌ಡಿಎಂಸಿ ಅಧ್ಯಕ್ಷ ನಾಗಪ್ಪ ಭಜಂತ್ರಿ, ಉಪಾಧ್ಯಕ್ಷ ರಜೀಯ ಬೇಗಂ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಭೀಮನಗೌಡ ಹರ್ಲಾಪುರ, ಎಸ್‌ಡಿಎಂಸಿ ಸದಸ್ಯರಾದ ವೀರೇಶ ಕಂಬಳಿ, ಯಲ್ಲಪ್ಪ ಪೂಜಾರಿ, ಶಿಕ್ಷಣಪ್ರೇಮಿ ದೊಡ್ಡಬಸಪ್ಪ ಉಪಸ್ಥಿತರಿದ್ದರು.