ರಾಜ್ಯದ ಎಲ್ಲ ವರ್ಗಗಳಿಗೂ 5 ವರ್ಷಗಳ ಕಾಲ ಸಿಎಂ ಸಿದ್ದರಾಮಯ್ಯ ಅವರ ಸೇವೆ ತಲುಪಲಿ: ಭೈರತಿ ಸುರೇಶ್

| Published : Apr 23 2025, 12:38 AM IST

ರಾಜ್ಯದ ಎಲ್ಲ ವರ್ಗಗಳಿಗೂ 5 ವರ್ಷಗಳ ಕಾಲ ಸಿಎಂ ಸಿದ್ದರಾಮಯ್ಯ ಅವರ ಸೇವೆ ತಲುಪಲಿ: ಭೈರತಿ ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 2013ರ ಚುನಾವಣೆಯಲ್ಲಿ ರಾಜ್ಯದ ಜನರ ಆಶೀರ್ವಾದದಿಂದ 136 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಸಿದ್ದರಾಮಯ್ಯ ಅವರ ಪರಿಶ್ರಮ ಮತ್ತು ಜನಪ್ರಿಯತೆ ಕಾರಣ. ಸಿದ್ದರಾಮಯ್ಯ ಅವರು ಯಾವುದೇ ಪ್ರಭಾವ ಅಥವಾ ಆಮಿಷಕ್ಕೊಳಗಾಗಿ ಸಿಎಂ ಆಗಿಲ್ಲ. ಒಕ್ಕಲಿಗ ಸಮುದಾಯದ ನಾಯಕರೂ ಕೂಡ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ದೇಶದಲ್ಲಿ ಪ್ರಾಮಾಣಿಕ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. ರಾಜ್ಯದ ಎಲ್ಲ ವರ್ಗಗಳ ಬಡಜನರು, ಧೀನ ದಲಿತರಿಗೆ 5 ವರ್ಷ ಕಾಲ ಅವರ ಸೇವೆ ತಲುಪಲಿ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಿಳಿಸಿದರು.

ತಾಲೂಕಿನ ದೊಡ್ಡಬಾಲ ಗ್ರಾಮದಲ್ಲಿ ಶ್ರೀಹುಚ್ಚಪ್ಪಸ್ವಾಮಿ ಮತ್ತು14 ಕೂಟದ ದೇವರುಗಳ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಮುಂಚೂಣಿಗೆ ಬಂದ ನಂತರ ನಾನು ಕೂಡ ಅದೇ ಸಮುದಾಯದವನು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದರು.

ಕಳೆದ 2013ರ ಚುನಾವಣೆಯಲ್ಲಿ ರಾಜ್ಯದ ಜನರ ಆಶೀರ್ವಾದದಿಂದ 136 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಸಿದ್ದರಾಮಯ್ಯ ಅವರ ಪರಿಶ್ರಮ ಮತ್ತು ಜನಪ್ರಿಯತೆ ಕಾರಣ. ಸಿದ್ದರಾಮಯ್ಯ ಅವರು ಯಾವುದೇ ಪ್ರಭಾವ ಅಥವಾ ಆಮಿಷಕ್ಕೊಳಗಾಗಿ ಸಿಎಂ ಆಗಿಲ್ಲ. ಒಕ್ಕಲಿಗ ಸಮುದಾಯದ ನಾಯಕರೂ ಕೂಡ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ ಎಂದರು.

ಅಹಿಂದ ವರ್ಗಗಳೊಂದಿಗೆ ಗುರುತಿಸಿಕೊಂಡಿದ್ದರೂ ಸಹ ಉಳಿದೆಲ್ಲಾ ಜಾತಿ ವರ್ಗಗಳ, ಬಡವರ, ತುಳಿತಕ್ಕೊಳಗಾದವರ ಪರ ಧ್ವನಿಯಾಗಿ ನಿಂತು ಸಿದ್ದರಾಮಯ್ಯ ಅವರ ಜೀವನವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಬಹಳಷ್ಟು ಶ್ರಮ ಹಾಕುತ್ತಿದ್ದಾರೆಂದು ಬಣ್ಣಿಸಿದರು.

ನರೇಂದ್ರಸ್ವಾಮಿಗೆ ಮಂತ್ರಿ ಸ್ಥಾನ:

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಾನು ಹಾಗೂ ಚಲುವರಾಯಸ್ವಾಮಿ ಸಚಿವರಾಗಿರುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಅವರಿಗೆ ಮುಂದಿನ ದಿನಗಳಲ್ಲಿ ಮಂತ್ರಿ ಯಾಗುತ್ತಾರೆಂಬ ನಂಬಿಕೆ ಇದೆ ಎಂದರು.

ನನ್ನಿಂದಲೇ ಸಿಆರ್‌ಎಸ್ ಎಂಎಲ್‌ಎ ಎಂಪಿ:ಶಿವರಾಮೇಗೌಡ;

ಜಿಪಂ ಮಾಜಿ ಸದಸ್ಯ ಎಂ.ಪ್ರಸನ್ನ ಮೊದಲಿನಿಂದಲೂ ಚಲುವರಾಯಸ್ವಾಮಿ ಜೊತೆ ಇದ್ದವನು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸಮಾರಂಭದ ವೇದಿಕೆಯಲ್ಲಿರುವ ಅನೇಕ ಮುಖಂಡರು ನನ್ನ ಶಿಷ್ಯಂದಿರು. ನನ್ನನ್ನು ಬಿಟ್ಟು ಚಲುವರಾಯಸ್ವಾಮಿ ಜೊತೆ ಸೇರಿಕೊಂಡಿದ್ದಾರೆ. ನನ್ನಿಂದಲೇ ಚಲುವರಾಯಸ್ವಾಮಿ ಒಂದು ಬಾರಿ ಶಾಸಕ, ಸಂಸದರಾಗಿದ್ದು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಈ ಶಿವರಾಮೆಗೌಡ ಸತ್ಯ ಹೇಳ್ತಾನೆ. ಆದರೆ, ಒಂದೊಂದ್ಸಲ ಸುಳ್ಳೂ ಹೇಳ್ತಾನೆ. ನೀವಿಬ್ಬರೂ ಜೊತೆಗಿದ್ದು ಎಲ್ಲ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು ಎಂದು ಸೂಚಿಸಿದರು. ಸಿಎಂ ಸಿದ್ದರಾಮಯ್ಯ ಭಾಷಣದ ಮಧ್ಯೆ ನೆರೆದಿದ್ದ ಅಭಿಮಾನಿಗಳು ಹೌದು ಹುಲಿಯಾ ಘೋಷಣೆ ಕೂಗಿ ಶಿಳ್ಳೆ ಚಪ್ಪಾಳೆಯ ಸುರಿಮಳೆಗೈಯ್ಯುತ್ತಿದ್ದ ದೃಶ್ಯ ಕಂಡುಬಂತು.

ಬೆಳ್ಳಿಗದೆ, ಟಗರುಮರಿ ಕೊಟ್ಟ ಅಭಿಮಾನಿಗಳು:

ಇದೇ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಕರಿಕಂಬಳಿ ಹೊದಿಸಿ ಟಗರುಮರಿ ಕೊಟ್ಟು ಗೌರವಿಸಿದರೆ, ಮತ್ತೆ ಕೆಲವರು ಬೆಳ್ಳಿ ಗದೆಯೊಂದಿಗೆ ಬೃಹತ್ ಗಾತ್ರದ ಸೇಬು, ಮಲ್ಲಿಗೆ ಮತ್ತು ಗುಲಾಬಿ ಹಾರ ಹಾಕಿ ಸನ್ಮಾನಿಸಿದರು.

ತಾಲೂಕಿನ ಅದ್ದೀಹಳ್ಳಿ ಸರ್ಕಲ್ ಬಳಿ ನಿರ್ಮಿಸಿದ್ದ ತಾತ್ಕಾಲಿಕ ಹೆಲಿಪ್ಯಾಡ್‌ಗೆ ಬಂದಿಳಿದ ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಗೌರವ ವಂದನೆ ಸ್ವೀಕರಿಸಿದ ಬಳಿಕ ದೊಡ್ಡಾಬಾಲ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಚಂಡೆವಾದ್ಯ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು. ಬಳಿಕ ಶ್ರೀ ಹುಚ್ಚಪ್ಪಸ್ವಾಮಿ ದೇವಸ್ಥಾನಕ್ಕೆ ಭೇಟಿಕೊಟ್ಟ ಸಿಎಂ ಸಿದ್ದರಾಮಯ್ಯ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದುಕೊಂಡರು.