ಸಾರಾಂಶ
ಜನರಿಂದ ಆಯ್ಕೆಯಾದ ಸರ್ಕಾರವನ್ನು ಅಸ್ತಿರಗೊಳಿಸುವ ಪ್ರಯತ್ನ ಆಗದು, ಬಿಜೆಪಿಗರಿಗೆ ಜನರಿಂದ ಆಯ್ಕೆ ಆಗಿ ಸರ್ಕಾರ ರಚನೆ ಮಾಡುವ ತಾಕತ್ ಇಲ್ಲ.
ಸಚಿವ ಶಿವರಾಜ್ ತಂಗಡಗಿ ಒತ್ತಾಯಕನ್ನಡಪ್ರಭ ವಾರ್ತೆ ಕಾರಟಗಿ
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉರುಳಿಸಲು ಬಿಜೆಪಿ ಮುಖಂಡರು ₹೧ ಸಾವಿರು ಕೋಟಿ ಮೀಸಲಿಟ್ಟಿದ್ದಾಗಿ ಸ್ವತಃ ಅದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಹಿರಂಗ ಪಡಿಸಿದ್ದು, ಈ ವಿಷಯನ್ನು ಗಂಭೀರವಾಗಿ ಪರಿಗಣಿಸಿ ಇಡಿ ಅಧಿಕಾರಿಗಳು ಅವರಿಗೆ ನೋಟೀಸ್ ಕೊಟ್ಟು ತನಿಖೆ ಮಾಡಬೇಕೆಂದು ಸಚಿವ ಶಿವರಾಜ್ ತಂಗಡಗಿ ಒತ್ತಾಯಿಸಿದ್ದಾರೆ.ಪಟ್ಟಣದ ತಮ್ಮ ಗೃಹಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನರಿಂದ ಆಯ್ಕೆಯಾದ ಸರ್ಕಾರವನ್ನು ಅಸ್ತಿರಗೊಳಿಸುವ ಪ್ರಯತ್ನ ಆಗದು, ಬಿಜೆಪಿಗರಿಗೆ ಜನರಿಂದ ಆಯ್ಕೆ ಆಗಿ ಸರ್ಕಾರ ರಚನೆ ಮಾಡುವ ತಾಕತ್ ಇಲ್ಲ. ಅವರೆಲ್ಲ ಖರೀದಿ ಗಿರಾಕಿಗಳು ಎಂದು ಕಿಡಿಕಾರಿದರು.
ಶಾಸಕ ಯತ್ನಾಳ ಹೇಳಿಕೆ ಹಿನ್ನೆಲೆ ₹ಒಂದು ಸಾವಿರ ಕೋಟಿ ಇಟ್ಟುಕೊಂಡವರ ಬಗ್ಗೆ ತನಿಖೆ ಮಾಡಬೇಕು. ಇಡಿ ಅಧಿಕಾರಿಗಳು ಅವರಿಗೆ ನೋಟೀಸ್ ಕೊಟ್ಟು ತನಿಖೆ ನಡೆಸಿ ಬಸನಗೌಡ ಪಾಟೀಲ್ ಯತ್ನಾಳರನ್ನು ವಶಕ್ಕೆ ಪಡೆದು ಸಾವಿರ ಕೋಟಿ ಹಣ ಇಟ್ಟುಕೊಂಡವರು ಯಾರು ಎಂದು ಕೇಳಬೇಕು. ಸಾವಿರ ಕೋಟಿ ಹಣ ಇದ್ದರೆ ಅವರ ವಿರುದ್ಧ ಇಡಿ ತನಿಖೆ ಮಾಡಬೇಕು. ಕಾಂಗ್ರೆಸ್ ನಾಯಕರ ಬಳಿ ಹತ್ತಾರು ಕೋಟಿ ಸಿಕ್ಕರೂ ಇಡಿ ಪ್ರವೇಶ ಮಾಡುತ್ತದೆ. ಈಗ ಯತ್ನಾಳ ₹೧ ಸಾವಿರ ಕೋಟಿ ಡೀಲ್ ಬಗ್ಗೆ ಮಾತನಾಡಿದ್ದಾರೆ ಇದು ತನಿಖೆ ಆಗಲಿ ಎಂದರು.ಸಿಎಂ ಅವರ ಮೇಲಿನ ಮುಡಾ ಹಗರಣ ಆರೋಪ ₹೬೨ ಕೋಟಿ ಎಂದ ತಕ್ಷಣವೇ ಇಡಿ ಪ್ರವೇಶ ಮಾಡಿದೆ. ನಮ್ಮ ಕಾಂಗ್ರೆಸ್ ನಾಯಕರು ₹೩೦-೪೦ ಕೋಟಿ ಎಂದು ಮಾತನಾಡಿದರೂ, ಬಿಜೆಪಿ ಕೇಂದ್ರ ಸರ್ಕಾರ ಇಡಿ ಅವರನ್ನು ಛೂ ಬಿಟ್ಟು ತನಿಖೆ ಮಾಡಿಸುತ್ತದೆ. ಇಡಿಗೆ ಕೇವಲ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಮತ್ತವರ ಮಿತ್ರಪಕ್ಷಗಳು ಮಾತ್ರ ಕಾಣುತ್ತವೆ. ಎನ್‌ಡಿಎ ಮೈತ್ರಿಯ ಯಾವುದೇ ನಾಯಕರು ಸಾವಿರಾರು ಕೋಟಿ ಹಗರಣ ಮಾಡಿದರೂ ಅವರ ಬಳಿಗೆ ಯಾವ ಇಡಿ ತಲೆ ಹಾಕುವುದಿಲ್ಲ.
ಮೊದಲಿಗೆ ಬಿಜೆಪಿಯವರಿಗೆ ಮಾನ, ಮರ್‍ಯಾದೆ ಇದ್ದರೆ ಕೂಡಲೇ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ನೋಟೀಸ್ ನೀಡಿ, ಸರ್ಕಾರ ಬೀಳಿಸಲು ₹೧ ಸಾವಿರ ಕೋಟಿ ಹಣ ಇಟ್ಟುಕೊಂಡವರ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಪುನರ್ ಉಚ್ಚರಿಸಿದರು.