ಮೈ ಭಾರತ್ ಕೇಂದ್ರ, ಕಡಲ ಸಿರಿ ಯುವ ಸಂಘ, ಅರಣ್ಯ ವಲಯ ಹಾಗೂ ಕಡವಾಡದ ಜನತಾ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಕಡವಾಡದ ಜನತಾ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರವಾರದಲ್ಲಿ ಕಡಲಸಿರಿ ಯುವಸಂಘದಿಂದ ವಿಶ್ವ ಪರಿಸರ ದಿನಾಚರಣೆ

ಕನ್ನಡಪ್ರಭ ವಾರ್ತೆ ಕಾರವಾರ

ಮೈ ಭಾರತ್ ಕೇಂದ್ರ, ಕಡಲ ಸಿರಿ ಯುವ ಸಂಘ, ಅರಣ್ಯ ವಲಯ ಹಾಗೂ ಕಡವಾಡದ ಜನತಾ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಕಡವಾಡದ ಜನತಾ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಡವಾಡ ಪಿಡಿಒ ಸಂತೋಷಿ ಬಂಟ್ ಉದ್ಘಾಟಿಸಿ, ವಿದ್ಯಾರ್ಥಿಗಳು ಬಾಲ್ಯದಿಂದಲೇ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಮೈ ಭಾರತ್ ಕೇಂದ್ರದ ಅಧಿಕಾರಿ ಲೋಕೇಶ್ ಕುಮಾರ್, ಪರಿಸರ ಸಂರಕ್ಷಣೆಗಾಗಿ ಸರ್ಕಾರದ ಯೋಜನೆಗಳ ಮಾಹಿತಿ ನೀಡಿದರು.

ಕಡವಾಡ ಗ್ರಾಪಂ ಮಾಜಿ ಸದಸ್ಯ ಕಿಶೋರ್ ಕಡವಾಡಕರ್ ಅವರು, ಗಿಡ ನೆಡುವುದು ಮಾತ್ರವಲ್ಲದೆ, ಅವುಗಳನ್ನು ಬೆಳೆಸಿ ಪೋಷಿಸುವ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಕಡಲ ಸಿರಿ ಯುವ ಸಂಘದ ಅಧ್ಯಕ್ಷ ಅಭಿಷೇಕ್ ಜಿ. ಕಳಸ, ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಹಾಗೂ ಸಾಲುಮರದ ತಿಮ್ಮಕ್ಕ ಅವರ ಪರಿಸರ ಕ್ಷೇತ್ರದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿ, ಅವರ ಜೀವನದಿಂದ ಪ್ರೇರಣೆ ಪಡೆಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಂಘದ ಗೌರವಾಧ್ಯಕ್ಷ ಪ್ರಕಾಶ್ ಬೋವಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಡವಾಡ ಗ್ರಾಪಂ ಮಾಜಿ ಅಧ್ಯಕ್ಷ ಆನಂದು ನಾಯ್ಕ, ಪರಿಸರದ ಮಹತ್ವವನ್ನು ವಿವರಿಸಿದರು. ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸುಮಾರು 100 ಗಿಡಗಳನ್ನು ವಿತರಿಸಿ ಅವುಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನು ವಹಿಸಲಾಯಿತು.

ಉಪ ವಲಯ ಅರಣ್ಯಾಧಿಕಾರಿ ರಜತ್ ಗೋವೇಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಬಿ. ಶೇಟ್, ಸಾಮಾಜಿಕ ಜಾಲತಾಣದ ಕಾರ್ಯಕರ್ತ ನೋಯೆಲ್ ಕೊಯೆಲ್ಹೋ, ಯುವ ಸಂಘದ ಸದಸ್ಯರಾದ ವೈಭವ್ ವರ್ಣೇಕರ್, ಸಾವಿಯೋ ರೋಚೆ, ಸ್ವಾತಿ ನಾಯ್ಕ, ಮೈ ಭಾರತ್ ಕೇಂದ್ರದ ಕಾರ್ಯಕರ್ತ ಶಿವು ಇದ್ದರು.

ಶಾಲೆಯ ಮುಖ್ಯಾಧ್ಯಾಪಕ ಕಮಲಾಕರ್ ಹುಲಸ್ವಾರ್ ಸ್ವಾಗತಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ಶೆಟ್ಟಿ ವಂದಿಸಿದರು. ಮಹಾದೇವ ರಾಣೆ ಕಾರ್ಯಕ್ರಮ ನಿರೂಪಿಸಿದರು.