ಸಾರಾಂಶ
ಗೋಕರ್ಣ: ಗ್ಯಾರಂಟಿ ಯೋಜನೆಯಿಂದ ಹಳ್ಳಿಗಾಡಿನ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಯನ್ನು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳದ ಶಾಸಕ ಆರ್.ವಿ. ದೇಶಪಾಂಡೆ ಖಂಡಿಸಿದ್ದು, ಹೇಳಿಕೆ ಹಿಂಪಡೆದು ಮಹಿಳೆಯರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಸೋಮವಾರ ಇಲ್ಲಿನ ಮಹಾಬಲೇಶ್ವರ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ ಇಂತಹ ಹೇಳಿಕೆ ನೀಡಿದ್ದು ಬೇಸರ ತಂದಿದೆ ಎಂದರು.
ಜವಾಹರಲಾಲ್ ನೆಹರೂ, ರಾಜೀವ ಗಾಂಧಿ, ಇಂದಿರಾ ಗಾಂಧಿ, ಪಿ.ವಿ. ನರಸಿಂಹ ರಾವ್, ಡಾ. ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ಸಾಕಷ್ಟು ಒಳ್ಳೆ ಕೆಲಸ ಮಾಡಲಾಗಿದೆ. ಮಹಿಳೆಯರಿಗೆ ಮೀಸಲಾತಿ, 18 ವರ್ಷ ಪೂರ್ಣಗೊಂಡವರಿಗೆ ಮತದಾನದ ಹಕ್ಕು ಸೇರಿದಂತೆ ಹಲವಾರು ಸೌಲಭ್ಯವನ್ನು ನಮ್ಮ ಪಕ್ಷದ ಆಡಳಿತದ ಅವಧಿಯಲ್ಲೇ ನೀಡಲಾಗಿದೆ ಎಂದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಗೆಲವು ನಿಶ್ಚಿತ ಎಂದ ಅವರು, ರಾಜ್ಯ ಸರ್ಕಾರ ತಂದ ಗ್ಯಾರಂಟಿ ಯೋಜನೆಗಳು ಜನರಿಗೆ ಪ್ರಯೋಜನವಾಗಿದ್ದು, ಇದರ ಪ್ರಭಾವದಿಂದ ನಮಗೆ ಮತ ನೀಡಿ ಜನ ಹಿತದ ಸರ್ಕಾರವನ್ನು ಆಯ್ಕೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಏ. 16ರಂದು ಡಾ. ಅಂಜಲಿ ನಿಂಬಾಳ್ಕರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದ ಅವರು, ತಾವು ಪ್ರಚಾರಕ್ಕೆ ತೆರಳಿದ ಎಲ್ಲೆಡೆ ಕಾಂಗ್ರೆಸ್ ಪರ ಅಲೆ ಇದೆ. ಇದರಂತೆ ದೇಶದೆಲ್ಲೆಡೆ ಬದಲಾವಣೆಯ ಅಲೆಯಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರುತ್ತದೆ ಎಂದರು.
ಈ ವೇಳೆ ಪಕ್ಷದ ನಾಗಾರಾಜ ಹಿತ್ತಲಮಕ್ಕಿ, ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಭಾವಿ ಮತ್ತಿತರರು ಉಪಸ್ಥಿತರಿದ್ದರು.
ದೇವಾಲಯ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ: ದೇಶಪಾಂಡೆ
ಗೋಕರ್ಣ: ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳದ ಶಾಸಕ ಆರ್.ವಿ. ದೇಶಪಾಂಡೆ ಅವರು ಇಲ್ಲಿನ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರಕ್ಕೆ ಸೋಮವಾರ ಮುಂಜಾನೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು.ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ. ಪರಮೇಶ್ವರ ಮಾರ್ಕಾಂಡೆ ಪೂಜಾ ಕೈಂಕರ್ಯ ನೆರವೇರಿಸಿದರು.
ಬಳಿಕ ಮಂದಿರದ ವತಿಯಿಂದ ಪ್ರಸಾದ ನೀಡಿ ಗೌರವಿಸಿದರು. ಉಪಾಧಿವಂತ ಗಣೇಶ ಜಂಭೆ ಸಹಕರಿಸಿದರು. ಇದಕ್ಕೂ ಮೊದಲು ಮಹಾಗಣಪತಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇವೆರಡು ದೇವಾಲಯದ ಭೇಟಿಯ ಬಳಿಕ ತಾಮ್ರಗೌರಿ ಮಂದಿರಕ್ಕೆ ತೆರಳಿ ದೇವಿ ದರ್ಶನ ಪಡೆದರು.ಈ ವೇಳೆ ಮಂದಿರದ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ, ಕಾಂಗ್ರೆಸ್ ಸ್ಥಳೀಯ ಪ್ರಮುಖರಾದ ನಾಗರಾಜ ಹಿತ್ತಲಮಕ್ಕಿ, ಜಿಪಂ ಮಾಜಿ ಸದಸ್ಯ ಪ್ರದೀಪ್ ನಾಯಕ್ ದೇವರಬಾವಿ, ಮತ್ತಿತರರು ಉಪಸ್ಥಿತರಿದ್ದರು. ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.
ತಾಮ್ರಗೌರಿ, ಮಹಾಗಣಪತಿ ಮಂದಿರದ ಸಮಸ್ಯೆಗೆ ಜಿಲ್ಲಾಡಳಿತ ತ್ವರಿತವಾಗಿ ಕ್ರಮ ತೆಗೆದುಕೊಳ್ಳಲಿ:ತಾಮ್ರಗೌರಿ ಮಂದಿರದಲ್ಲಿ ಅಸ್ವಚ್ಛತೆ ಇರುವುದನ್ನು ಕಂಡ ಆರ್.ವಿ. ದೇಶಪಾಂಡೆ ಅವರು ಅಸಮಾಧಾನಗೊಂಡು, ಮಂದಿರದ ಆವಾರ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದರು. ಇದರಂತೆ ಮಹಾಗಣಪತಿ ಮಂದಿರದಲ್ಲಿ ಆಡಳಿತ ವ್ಯವಸ್ಥೆ ಇಲ್ಲದಿರುವುದು, ಸಿಬ್ಬಂದಿಗೆ ಒಂದು ವರ್ಷದಿಂದ ವೇತನ ನೀಡದಿರುವ ಕುರಿತು ಮಾಹಿತಿ ಬಂದಿದ್ದು, ಇವೆರಡು ದೇವಾಲಯಗಳ ನೈಜ ಸಮಸ್ಯೆಯನ್ನು ಅರಿತು ಜಿಲ್ಲಾಡಳಿತ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.