ಶಿರೂರು ದುರಂತ ಐಆರ್‌ಬಿ ಪರಿಹಾರ ನೀಡಲಿ: ಭಾಸ್ಕರ್ ಪಟಗಾರ

| Published : Jul 30 2024, 12:46 AM IST

ಸಾರಾಂಶ

ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ದುರಂತಕ್ಕೆ ಐಆರ್‌ಬಿ ಕಂಪನಿಯೇ ಹೊಣೆಯಾಗಿದ್ದು, ಮೃತಪಟ್ಟವರಿಗೆ ಕಂಪನಿಯೇ ಪರಿಹಾರ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಭಾಸ್ಕರ್ ಪಟಗಾರ ಆಗ್ರಹಿಸಿದರು.

ಕಾರವಾರ: ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ದುರಂತಕ್ಕೆ ಐಆರ್‌ಬಿ ಕಂಪನಿಯೇ ಹೊಣೆಯಾಗಿದ್ದು, ಮೃತಪಟ್ಟವರಿಗೆ ಕಂಪನಿಯೇ ಪರಿಹಾರ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಭಾಸ್ಕರ್ ಪಟಗಾರ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ದುರ್ಘಟನೆಯಲ್ಲಿ 11 ಜನರು ಮೃತಪಟ್ಟಿದ್ದಾರೆ. ಈ ಹಿಂದೆಯೂ ಇಂತಹ ಹಲವು ದುರ್ಘಟನೆಗಳು ನಡೆದು, ಸಾವು-ನೋವು ಸಂಭವಿಸಿದರೂ ಐಆರ್‌ಬಿ ಕಂಪೆನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಹೇಳಿದರು.

ಐಆರ್‌ಬಿ ಕಂಪನಿ ಸಾವಿರಾರು ಕೋಟಿ ಮೊತ್ತದ ನಮ್ಮ ಕಲ್ಲು-ಮಣ್ಣುಗಳನ್ನು ಬಳಸಿಕೊಂಡಿದೆ. ಅಲ್ಲದೆ ಹೆದ್ದಾರಿ ಅರೆಬರೆಯಾಗಿದ್ದರೂ ಟೋಲ್ ಸಂಗ್ರಹವನ್ನು ನಿರಂತರವಾಗಿ ಮಾಡುತ್ತಿದೆ. ಮೃತಪಟ್ಟವರಿಗೆ ಪರಿಹಾರದ ಜತೆಗೆ ಹಾನಿಗೊಳಗಾದ ಮನೆಗಳನ್ನು ಕಂಪನಿಯೇ ಕಟ್ಟಿಸಿಕೊಡುವಂತೆ ಮಾಡಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂತಹ ಹಲವೆಡೆ ಗುಡ್ಡಗಳನ್ನು ಕತ್ತರಿಸಿರುವುದು ಅವೈಜ್ಞಾನಿಕವಾಗಿದೆ. ಇದರಿಂದ ಮತ್ತಷ್ಟು ಕುಸಿಯುವ ಭೀತಿ ಇದ್ದು, ನಮ್ಮ ಜನಪ್ರತಿನಿಧಿಗಳು ರಾಜಕೀಯ ಬಿಟ್ಟು ಶಾಶ್ವತ ಪರಿಹಾರಕ್ಕಾಗಿ ಪ್ರಯತ್ನಿಸಬೇಕು. ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಎಲ್ಲ ರಾಜಕೀಯ ಪಕ್ಷದವರನ್ನೊಳಗೊಂಡ ನಿಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಬಳಿ ಕೊಂಡೊಯ್ದು ಶಾಶ್ವತ ಪರಿಹಾರಕ್ಕಾಗಿ ತಡೆಗೋಡೆ ನಿರ್ಮಾಣಕ್ಕೆ ಅಗತ್ಯವಿರುವಷ್ಟು ಹಣವನ್ನು ಪಡೆಯಲು ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಇನ್ನು 20 ದಿನಗಳ ಒಳಗಾಗಿ ಯಾವುದೇ ಪ್ರಯತ್ನಗಳು ನಡೆಯದೆ ಇದ್ದಲ್ಲಿ ಆ. 20ರಂದು ಸಂಸದರ ಕಚೇರಿ ಎದುರು ಜಿಲ್ಲೆಯ ಸಮಸ್ತ ಹೋರಾಟಗಾರರನ್ನು ಒಗ್ಗೂಡಿಸಿಕೊಂಡು ಬೃಹತ್ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕಾರವಾರ ತಾಲೂಕು ಅಧ್ಯಕ್ಷ ನರೇಂದ್ರ ತಳೇಕರ್, ಕುಮಟಾ ಅಧ್ಯಕ್ಷ ತಿಮ್ಮಪ್ಪ ನಾಯ್ಕ, ದಾಂಡೇಲಿ ಘಟಕದ ಅಧ್ಯಕ್ಷ ಅಶೋಕ ಮಾನೆ, ಮಂಜುನಾಥ ಗೌಡ, ಗಣಪತಿ ನಾಯ್ಕ ಇದ್ದರು.