ಸಾರಾಂಶ
ಮಂಡ್ಯ ಜಿಲ್ಲೆಯ ಎಲ್ಲ ಎಪಿಎಂಸಿ ಮಾರುಕಟ್ಟೆ ವ್ಯಾಪ್ತಿಯ ಹೊರಗೆ ಕೆಲವರು ಅನಧಿಕೃತವಾಗಿ ರಸ್ತೆ ಬದಿ, ತೋಟಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಎಳನೀರು ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಎಪಿಎಂಸಿ ಕಾಯ್ದೆ ಸ್ಪಷ್ಟವಾಗಿ ಉಲ್ಲಂಘನೆ ಆಗುತ್ತಿದೆ. ಅಲ್ಲದೇ, ಶುಲ್ಕ ಪಾವತಿ ಮಾಡದ ಕಾರಣ ಸರ್ಕಾರಕ್ಕೆ ಆರ್ಥಿಕವಾಗಿ ನಷ್ಟ ಉಂಟಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯ ಜಿಲ್ಲೆಯ ಎಲ್ಲಾ ಎಪಿಎಂಸಿ ಮಾರುಕಟ್ಟೆ ವ್ಯಾಪ್ತಿಯ ಹೊರಗೆ ಅನಧಿಕೃತವಾಗಿ ಎಳನೀರು ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳು ಮತ್ತು ದಲ್ಲಾಳಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಎಪಿಎಂಸಿ ವರ್ತಕರ ಸಂಘದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ರವಿ ಚನ್ನಸಂದ್ರ ನೇತೃತ್ವದಲ್ಲಿ ಮಾರುಕಟ್ಟೆ ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘದ ಪದಾಧಿಕಾರಿಗಳು, ಮಾರುಕಟ್ಟೆ ಕಾರ್ಯದರ್ಶಿ ಆರ್.ಲತಾ ಕುಮಾರಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಎಲ್ಲ ಎಪಿಎಂಸಿ ಮಾರುಕಟ್ಟೆ ವ್ಯಾಪ್ತಿಯ ಹೊರಗೆ ಕೆಲವರು ಅನಧಿಕೃತವಾಗಿ ರಸ್ತೆ ಬದಿ, ತೋಟಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಎಳನೀರು ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಎಪಿಎಂಸಿ ಕಾಯ್ದೆ ಸ್ಪಷ್ಟವಾಗಿ ಉಲ್ಲಂಘನೆ ಆಗುತ್ತಿದೆ. ಅಲ್ಲದೇ, ಶುಲ್ಕ ಪಾವತಿ ಮಾಡದ ಕಾರಣ ಸರ್ಕಾರಕ್ಕೆ ಆರ್ಥಿಕವಾಗಿ ನಷ್ಟ ಉಂಟಾಗುತ್ತಿದೆ ಎಂದು ಸಂಘದ ಅಧ್ಯಕ್ಷ ರವಿ ಚನ್ನಸಂದ್ರ ಆರೋಪಿಸಿದರು.ಎಪಿಎಂಸಿ ಕಾಯ್ದೆ ಉಲ್ಲಂಘನೆ ಮಾಡಿ ಹಾಗೂ ಮಾರುಕಟ್ಟೆಗೆ ಯಾವುದೇ ಶುಲ್ಕ ಪಾವತಿ ಮಾಡದೆ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರುವುದರಿಂದ ಮಾರುಕಟ್ಟೆಯಿಂದ ಲೈಸನ್ಸ್ ಪಡೆದು ವ್ಯಾಪಾರ ಮಾಡುತ್ತಿರುವ ನೈಜ ವರ್ತಕರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ದೂರಿದರು.
ಮಾರುಕಟ್ಟೆ ಅಧಿಕಾರಿಗಳು ಅನಧಿಕೃತವಾಗಿ ಎಳನೀರು ವ್ಯಾಪಾರ ಮಾಡುತ್ತಿರುವ ಸ್ಥಳಗಳ ಮೇಲೆ ದಾಳಿ ನಡೆಸಿ ವ್ಯಾಪಾರಸ್ಥರು ಮತ್ತು ದಲ್ಲಾಳಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅವರು ಆಗ್ರಪಡಿಸಿದರು.ಈ ವೇಳೆ ಸಂಘದ ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಎ.ರಾಜು, ಖಜಾಂಚಿ ಕೆಂಪೀರಯ, ನಿರ್ದೇಶಕರಾದ ಶಿವರಾಜು, ಯೋಗೇಶ್, ಶಿವಣ್ಣ, ತಮ್ಮಯ್ಯ, ಶಿವು, ವಿಜಯ್, ಸಿದ್ದರಾಜು, ಹೊನ್ನೇಶ, ನಗರ ಕೆರೆ ಕೃಷ್ಣ, ಸಾದೊಳಲು ಕುಮಾರ, ವಳಗೆರೆಹಳ್ಳಿ ಸುನೀಲ್ ಹಲವರು ಭಾಗವಹಿಸಿದ್ದರು.