ದೇಶಿಯ ತಳಿ ಉಳಿಸಿ ವೃದ್ಧಿಸುವ ಕಾರ್ಯವಾಗಲಿ: ಲಕ್ಷ್ಮಣ ಕಳ್ಳೇನ್ನವರ

| Published : Feb 12 2025, 12:31 AM IST

ದೇಶಿಯ ತಳಿ ಉಳಿಸಿ ವೃದ್ಧಿಸುವ ಕಾರ್ಯವಾಗಲಿ: ಲಕ್ಷ್ಮಣ ಕಳ್ಳೇನ್ನವರ
Share this Article
  • FB
  • TW
  • Linkdin
  • Email

ಸಾರಾಂಶ

ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶ ಹೊಂದಿರುವ ದೇಶಿಯ ತಳಿ ಕೃಷಿ ಉತ್ಪನ್ನಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕೆಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶ ಹೊಂದಿರುವ ದೇಶಿಯ ತಳಿ ಕೃಷಿ ಉತ್ಪನ್ನಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕೆಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ ಸಲಹೆ ನೀಡಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ದೇಶಿಯ ತಳಿಗಳ ಸಂರಕ್ಷಣೆ ಹಾಗೂ ಉತ್ತೇಜನ ಕಾರ್ಯಕ್ರಮದಡಿ ಮಂಗಳವಾರ ಹಮ್ಮಿಕೊಂಡ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದು ರೈತರು ಗುಣಮಟ್ಟ, ಮಣ್ಣಿನ ಆರೋಗ್ಯದ ಕಡೆ ಕಾಳಜಿ ವಹಿಸದೆ ಅಧಿಕ ಇಳುವರಿ ಪಡೆಯಲು ಒಲವು ತೋರುತ್ತಿದ್ದಾರೆ. ಕೆಲವು ತಳಿಯ ಬೆಳೆಗಳು ಹೆಚ್ಚು ಪೌಷ್ಟಿಕಾಂಶ, ಬಹುದಿನಗಳ ಬಳಕೆಗೆ ಯೋಗ್ಯವಾಗಿವೆ. ಇಳುವರಿ ಕಡಿಮೆ ಇದ್ದರೂ ಪೌಷ್ಟಿಕಾಂಶ ಹೊಂದಿರುತ್ತವೆ ಎಂದು ಹೇಳಿದರು.

ಭೂಮಿಯಲ್ಲಿ ಸಾಕಷ್ಟು ಪೋಷಕಾಂಶ ಇದ್ದು, ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ. ಇದಕ್ಕಾಗಿ ಕೃಷಿ ಇಲಾಖೆ ಸಾಕಷ್ಟು ಸಹಾಯಧನ ಯೊಜನೆ, ತ್ರಾಂತ್ರಿಕತೆ, ಮೌಲ್ಯವರ್ಧನೆಗಳಂತಹ ಕಾರ್ಯಕ್ರಮ ರೂಪಿಸಿ ಗುಣಮಟ್ಟ ಹೊಂದಿರುವ ದೇಶಿಯ ತಳಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ತೋವಿವಿಯ ಪ್ರೊ.ಡಾ.ಭವ್ಯ ಎಂ.ಆರ್. ಮಾತನಾಡಿ, ಆಹಾರ ಭದ್ರತೆ ದೃಷ್ಟಿಯಿಂದ ಹೈಬ್ರಡ್ ತಳಿ ಪರಿಚಯಿಸಲಾಯಿತು. ಆದರೀಗ ಪರಿಸ್ಥಿತಿ ಇಲ್ಲ. ಗುಣಮಟ್ಟದ ಬೆಳೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಿದೆ. ಸಾವಯವ ಕೃಷಿಯಲ್ಲಿ ಆಧುನಿಕ ಬೇಸಾಯ ಕ್ರಮ ಕಲಿಯಬೇಕು ಎಂದು ಹೇಳಿದರು.

ತೋವಿವಿಯ ಬೀಜಘಟಕ ವಿಭಾಗದ ಪ್ರೊ.ಡಾ.ಪಲ್ಲವಿ ಮಾತನಾಡಿ ಬಿಸಿಲಿನಲ್ಲಿ ಬೆಳೆಯುವ ತಳಿಗಳು ಬೇರೆ ಹಾಗೂ ಕಡಿಮೆ ಬಿಸಿನಲ್ಲಿ ಬೆಳೆಯುವ ತಳಿಗಳು ಬೇರೆ ಇದ್ದು, ಕಾಲಕ್ಕ ತಕ್ಕಂತೆ ಬೀಜ ಬಿತ್ತನೆ ಮಾಡುವಾಗ ಮಳೆಯ ಆಧಾರ ಮೇಲೆ ತಳಿಗಳನ್ನು ಬಳಸಬೇಕು ಎಂದರು.

ಕೃಷಿ ಇಲಾಖೆಯ ಉಪನಿರ್ದೇಶಕ ಎಲ್.ಐ. ರೂಢಗಿ, ಸಹಾಯಕ ಕೃಷಿ ನಿರ್ದೇಶಕರಾದ ತಿರಕನ್ನವರ, ಪ್ರೀತಿ ತೇಲಿ, ಜಂಟಿ ಕೃಷಿ ಇಲಾಖೆ ವ್ಯವಸ್ಥಾಪಕ ಮಂಜುನಾಥ ಜಂಬಗಿ ಇತರರು ಇದ್ದರು.

ಕಾರ್ಯಾಗಾರ ಹಿನ್ನೆಲೆಯಲ್ಲಿ ದೇಶಿ ತಳಿಗಳ ಬಿತ್ತನೆ ಬೀಜಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಜವಾರಿ ಕಡಲೆ, ಸಾಮೆ, ಬರಗು, ಸದಕ, ಕೆಂಪು ಅಕ್ಕಿ, ಕರಿ ಅಕ್ಕಿ, ಗೋವಿನ ಜೋಳ, ಬಿಳಿ ಅವರೆ, ಕೆಂಪು ಹಾಗೂ ಕರಿ ಅವರೆ, ಗುರೆಳ್ಳು, ಹುರುಳಿ, ಬಿಳಿಜೋಳ, ಹೆಸರು, ಅಗಸೆ, ಬಿಳಿ ಮತ್ತು ಕೆಂಪು ಎಳ್ಳು, ಕೆಂಪು ಗೋದಿ, ಕರಿ ಬದನೆ, ಕರಿ ಕಡಲೆ, ಕರಿ ಗೋದಿ ಸೇರಿದಂತೆ ದೇಶಿ ತಳಿ ಬೀಜಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಪ್ರದರ್ಶನದಲ್ಲಿ 58 ರೈತರು ಪಾಲ್ಗೊಂಡಿದ್ದರು.