ಕನ್ನಡದ ಪರಂಪರೆ ಉಳಿಸುವ ಕಾರ್ಯ ಆಗಲಿ: ಪ್ರೊ. ಬಿ.ಕೆ. ರವಿ

| Published : Oct 21 2024, 12:32 AM IST

ಕನ್ನಡದ ಪರಂಪರೆ ಉಳಿಸುವ ಕಾರ್ಯ ಆಗಲಿ: ಪ್ರೊ. ಬಿ.ಕೆ. ರವಿ
Share this Article
  • FB
  • TW
  • Linkdin
  • Email

ಸಾರಾಂಶ

ವರ್ತಮಾನದ ಸಾಹಿತ್ಯ ಮತ್ತು ಶಿಕ್ಷಣದ ಸ್ಥಿತಿಯನ್ನು ಗಮನಿಸಿದರೆ ಭವಿಷ್ಯದ ಪೀಳಿಗೆಗೆ ಕನ್ನಡ ಉಳಿಯುವುದೇ ಅನುಮಾನ.

ಚಿಂತನ ಮಂಥನ ಕಾರ್ಯಕ್ರಮದಲ್ಲಿ ಕೊಪ್ಪಳ ವಿವಿ ಕುಲಪತಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಭವಿಷ್ಯದ ಯುವ ಪೀಳಿಗೆಗೆ ಕನ್ನಡ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಜರೂರತ್ತು ಇದೆ ಎಂದು ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ. ರವಿ ಹೇಳಿದರು.

ನಗರದ ಶಕ್ತಿ ಶಾರದೆಯ ಮೇಳ ಹಾಗೂ ಬೆರಗು ಪ್ರಕಾಶನ ಹಮ್ಮಿಕೊಂಡಿದ್ದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು. ವರ್ತಮಾನದ ಸಾಹಿತ್ಯ ಮತ್ತು ಶಿಕ್ಷಣದ ಸ್ಥಿತಿಯನ್ನು ಗಮನಿಸಿದರೆ ಭವಿಷ್ಯದ ಪೀಳಿಗೆಗೆ ಕನ್ನಡ ಉಳಿಯುವುದೇ ಅನುಮಾನ. ಹಾಗಾಗಿ ಈಗಿನಿಂದಲೇ ಅದರ ಉಳಿಯುವಿಕೆ ಮಾಡುವ ಜರೂರು ನಮಗಿದೆ. ಹಳಗನ್ನಡ ಮತ್ತು ನಡುಗನ್ನಡ ಸಾಹಿತ್ಯ ಮರೆತು ಹೋಗುವ ಹಂತಕ್ಕೆ ಬಂದಿದೆ. ಪಂಪ, ರನ್ನ, ಪೊನ್ನ, ಜನ್ನ, ಕುಮಾರವ್ಯಾಸ, ಲಕ್ಷ್ಮೀಶ ಮುಂತಾದವರ ಬರಹಗಳನ್ನು ಸದ್ಯದ ಯುವ ಪೀಳಿಗೆ ಓದುವ ಅಗತ್ಯವಿದೆ ಎಂದರು.ನಾವೆಲ್ಲ ಒಗ್ಗೂಡಿ ಕೆಲಸ ಮಾಡಬೇಕು. ದಿಡೀರ್ ಪ್ರಚಾರ ಬಯಸುವುದು ಸಾಹಿತಿಗಳಿಗೆ ಒಳಿತಲ್ಲ. ಸಾಹಿತ್ಯ ಓದುಗರನ್ನು ತಾನೇ ಸೆಳೆಯಬೇಕು. ಆಗಲೇ ಅದಕ್ಕೊಂದು ಮೆರಗು ಎಂದರು.

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಪೀಠದ ಅಧ್ಯಕ್ಷ ಹಾಗೂ ಸಾಹಿತಿ ಕಾ. ತ. ಚಿಕ್ಕಣ್ಣ ಮಾತನಾಡಿ, ಕನಕರ ಕೀರ್ತನೆ ಹಾಗೂ ಕೃತಿಗಳು ಯುವಕರ ಮನದಾಳಕ್ಕೆ ಇಳಿಯುವ ಅಗತ್ಯ ಇದೆ ಎಂದರು.

ಹಿರಿಯ ಸಾಹಿತಿಗಳಾದ ಈಶ್ವರ ಹತ್ತಿ, ಅಂದಾನಪ್ಪ ಬೆಣಕಲ್, ವಿಜಯ ಅಮೃತರಾಜ, ಶಿವಪ್ರಸಾದ ಹಾದಿಮನಿ, ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ದಾನಪ್ಪ ಜಿ. ಕವಲೂರು, ಡಿ.ಎಂ. ಬಡಿಗೇರ, ಪ್ರವೀಣ್ ಪೋಲಿಸ್ ಪಾಟೀಲ, ಪ್ರೊ. ಶರಣಬಸಪ್ಪ ಬಿಳಿಎಲೆ, ಮಲ್ಲಿಕಾರ್ಜುನಗೌಡ ಪಾಟೀಲ, ವಿನಯ ಎ. ಮದರಿ, ಮಹೇಶ ಬಳ್ಳಾರಿ ಮುಂತಾದವರು ಇದ್ದರು. ನಿವೃತ್ತ ಉಪನ್ಯಾಸಕಿ ಮಾಲಾ ಬಡಿಗೇರ ಪ್ರಾರ್ಥನಾ ಗೀತೆ ಹಾಡಿದರು. ಕನ್ನಡ ಭಾಷಾ ಉಪನ್ಯಾಸಕಿ ಅನುಪಮ ಕನಕಗಿರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.