ಸಾರಾಂಶ
ಕನ್ನಡ ಸಾಹಿತ್ಯ, ಭಾಷೆ, ಪ್ರಾಂತ್ಯವಾರು ಪ್ರಾದೇಶಿಕ ವೈಶಿಷ್ಟ್ಯಗಳಿಂದ ತನ್ನದೇ ಆದ ಗಟ್ಟಿತನ ಒಳಗೊಂಡಿರುವುದರಿಂದ ಇಂದಿಗೂ ಕನ್ನಡ ಭಾಷೆ ನಿರಂತರವಾಗಿ ಮುಂದುವರಿಯುತ್ತಿದೆ ಎಂದು ಪ್ರೊ. ಎಲ್.ಎನ್. ಮುಕುಂದರಾಜ್ ಹೇಳಿದರು.
ಕನ್ನಡಪ್ರಭ ವಾರ್ತೆ ಬಳ್ಳಾರಿ
19 ಮತ್ತು 20ನೇ ಶತಮಾನವನ್ನು ಸಂಕ್ರಮಣ ಕಾಲವೆಂದು ಹೇಳಲಾಗುತ್ತಿದ್ದು, ಅಂದಿನ ಸಮಯದಲ್ಲಿ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಚಿಂತನೆಗಳ ಜೊತೆಗೆ ವೈಚಾರಿಕ ಸಮಾಜದ ಅಂಶಗಳು ಮುನ್ನೆಲೆಗೆ ಬಂದವು ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಲ್.ಎನ್. ಮುಕುಂದರಾಜ್ ಹೇಳಿದರು.ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಹಾಗೂ ಪ್ರದರ್ಶನ ಕಲೆಯ ನಾಟಕ ವಿಭಾಗದ ಸಹಯೋಗದಲ್ಲಿ ಏರ್ಪಡಿಸಿದ್ದ ಕನ್ನಡ ಭಾಷೆಯ ಏಳುಬೀಳುಗಳ ಸವಾಲುಗಳು ಮತ್ತು ಸಾಹಿತ್ಯದ ಸಾಂದರ್ಭಿಕ ಸವಾಲುಗಳು ಎಂಬ ವಿಷಯಗಳ ಮೇಲೆ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ, ಭಾಷೆ, ಪ್ರಾಂತ್ಯವಾರು ಪ್ರಾದೇಶಿಕ ವೈಶಿಷ್ಟ್ಯಗಳಿಂದ ತನ್ನದೇ ಆದ ಗಟ್ಟಿತನ ಒಳಗೊಂಡಿರುವುದರಿಂದ ಇಂದಿಗೂ ಕನ್ನಡ ಭಾಷೆ ನಿರಂತರವಾಗಿ ಮುಂದುವರಿಯುತ್ತಿದೆ. ಗಡಿಭಾಗದ ಭಾಷೆಗಳಲ್ಲಿ ದ್ವಿ ಭಾಷೆ ಪದ್ಧತಿಯನ್ನು ಅಳವಡಿಸಿಕೊಂಡು ಜನಸಾಮಾನ್ಯರ ದಿನನಿತ್ಯದ ಬದುಕಿಗೆ ಆಧಾರವಾಗಿರುವ ಭಾಷೆ ತಮ್ಮದೇ ಆದ ಅಸ್ತಿತ್ವಗಳೊಂದಿಗೆ ಉಳಿದುಕೊಂಡು ಬರುತ್ತಿವೆ ಎಂದರು.ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ತಿಕವಾಗಿ ಕೊಡುಕೊಳ್ಳುವಿಕೆಗಳು ಆರಂಭಗೊಂಡು ಹೊಸ ಸಂವೇದನೆಯು ಹರಿಯತೊಡಗಿದವು ಎಂದರಲ್ಲದೇ ಕನ್ನಡ ಸಾಹಿತ್ಯದ ಸಾಂದರ್ಭಿಕ ಸವಾಲುಗಳ ಕಣ್ಣ ಮುಂದೆ ಸಾಲುಗಟ್ಟಿ ನಿಂತಿವೆ ಎಂದರು.
ಕನ್ನಡದ ಭಾಷೆಯು ಕನ್ನಡದ ಸಾಹಿತ್ಯವನ್ನು ಹೊಂದಿಕೊಂಡು ಪ್ರಾದೇಶಿಕ ವೈವಿಧ್ಯಮಯವಾಗಿ ವಿಜೃಂಭಿಸುತ್ತ ತನ್ನ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಾಗಾಗಿ ಕನ್ನಡ ಭಾಷೆಯ ಸಾಹಿತ್ಯ ಮುಂದಿನ ಪೀಳಿಗೆಗೆ ಕನ್ನಡ ಗದ್ಯಗಳು, ಕನ್ನಡ ನಾಟಕ, ಕನ್ನಡ ಭಾವಗೀತೆ, ಕನ್ನಡ ಕವಿಗಳ ಪರಿಚಯಗಳನ್ನು ಮಕ್ಕಳಿಗೆ ಬಾಲ್ಯದಲ್ಲೇ ಕಲಿಸುವ ಮೂಲಕ ಉಳಿಸಿ ಬೆಳೆಸುವ ಮೂಲಕ ನಾವು ಗಟ್ಟಿಗೊಳಿಸಬೇಕಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪ್ರದರ್ಶನ ಕಲೆ ನಾಟಕ ವಿಭಾಗದ ಮುಖ್ಯಸ್ಥ ಪ್ರೊ. ಎನ್. ಶಾಂತನಾಯಕ್, ಆರನಕಟ್ಟೆ ಡಾ. ರಂಗನಾಥ್, ಡಾ. ವಾತ್ಸಲ್ಯ, ಡಾ. ಸಂತೋಷ್ ಕುಮಾರ್, ಡಾ. ಅಣ್ಣಾಜಿ ಕೃಷ್ಣಾರೆಡ್ಡಿ, ಡಾ. ಶಿವಪ್ರಕಾಶ್, ಡಾ. ಸಹನಾ ಪಿಂಜಾರ್, ಡಾ. ಶಕೀಲ ಸೇರಿದಂತೆ ವಿವಿಧ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.