₹1700 ಕೋಟಿ ವೆಚ್ಚದಲ್ಲಿ 99 ರಸ್ತೆ ವೈಟ್‌ಟಾಪಿಂಗ್‌

| Published : Jul 03 2024, 12:22 AM IST

ಸಾರಾಂಶ

ನಗರದಲ್ಲಿ ₹1,700 ಕೋಟಿ ವೆಚ್ಚದಲ್ಲಿ ಕೈಕೊಂಡಿರುವ 133 ಕಿಲೋ ಮೀಟರ್‌ ಉದ್ದದ 99 ರಸ್ತೆಗಳನ್ನು ವೈಟ್‌ ಟಾಪಿಂಗ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ₹1,700 ಕೋಟಿ ವೆಚ್ಚದಲ್ಲಿ ಕೈಕೊಂಡಿರುವ 133 ಕಿಲೋ ಮೀಟರ್‌ ಉದ್ದದ 99 ರಸ್ತೆಗಳನ್ನು ವೈಟ್‌ ಟಾಪಿಂಗ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಂಗಳವಾರ ಬೆಂಗಳೂರು ಜಲಮಂಡಳಿ, ಸಂಚಾರಿ ಪೊಲೀಸ್‌, ಬೆಸ್ಕಾಂ, ಕೆಪಿಟಿಸಿಎಲ್, ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ‘ಯೋಜನಾ ವಿಭಾಗ’ದಿಂದ ₹800 ಕೋಟಿ ವೆಚ್ಚದಲ್ಲಿ 64 ಕಿ.ಮೀ ಉದ್ದದ 43 ರಸ್ತೆಗಳು ಹಾಗೂ ‘ರಸ್ತೆ ಮತ್ತು ಮೂಲಸೌಕರ್ಯ ವಿಭಾಗ’ದಿಂದ ₹900 ಕೋಟಿ ವೆಚ್ಚದಲ್ಲಿ 71 ಕಿ.ಮೀ ಉದ್ದದ 56 ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

ಒಟ್ಟು 15 ಪ್ಯಾಕೇಜ್‌ ಪೈಕಿ 13 ಪ್ಯಾಕೇಜ್‌ಗಳು ಈಗಾಗಲೇ ಅಂತಿಮಗೊಂಡಿದ್ದು, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಇನ್ನೆರಡು ಪ್ಯಾಕೇಜ್‌ಗಳು ಸರ್ಕಾರದ ಹಂತದಲ್ಲಿದೆ. ಶೀಘ್ರ ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದರು.

ಸ್ಥಳ ವರದಿ ಸಲ್ಲಿಸಿ:

ವೈಟ್‌ಟಾಪಿಂಗ್‌ ಕೈಗೊಳ್ಳುತ್ತಿರುವ ರಸ್ತೆಗಳಲ್ಲಿ ಜಲಮಂಡಳಿಯ ನೀರಿನ ಹಾಗೂ ಒಳಚರಂಡಿ ಕೊಳವೆ, ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಕೇಬಲ್‌ಗಳು, ಗೇಲ್ ಗ್ಯಾಸ್ ಪೈಪ್ ಲೈನ್‌ಗಳ ಬದಲಾವಣೆ ಸೇರಿದಂತೆ ಇನ್ನಿತರೆ ಇಲಾಖೆಗಳು ಸ್ಥಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ನಿರ್ದೇಶಿಸಿದರು.

ಕಾಮಗಾರಿ ವೇಳೆಯಲ್ಲಿಯೇ ಕೇಬಲ್‌, ಕೊಳವೆ ಸೇರಿದಂತೆ ಇನ್ನಿತರೆ ಅಳವಡಿಕೆ ಮಾಡಿಕೊಳ್ಳುವಂತೆ ಜಲಮಂಡಳಿ, ಬೆಸ್ಕಾಂ ಸೇರಿದಂತೆ ಇನ್ನಿತರೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, ರಸ್ತೆಯ ಎರಡೂ ಬದಿ ಪಾದಚಾರಿ ಮಾರ್ಗದಲ್ಲಿ ಯುಟಿಲಿಟಿಗಾಗಿ ಡಕ್‌ಗಳ ಅಳವಡಿಕೆ ಮಾಡಿಕೊಳ್ಳಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ಯಾವುದೇ ಕಾರಣಕ್ಕೂ ರಸ್ತೆ ಕತ್ತರಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.ಪ್ರಧಾನ ಅಭಿಯಂತರ ಪ್ರಹ್ಲಾದ್‌, ಯೋಜನಾ ವಿಭಾಗದ ಮುಖ್ಯ ಅಭಿಯಂತರ ಲೋಕೇಶ್, ಜಲಮಂಡಳಿ ಮುಖ್ಯ ಅಭಿಯಂತರ ಗಂಗಾಧರ್, ವೆಂಕಟೇಶ್, ದೇವರಾಜ್, ಸಂಚಾರ ಪೊಲೀಸ್, ಕೆಪಿಟಿಸಿಎಲ್, ಬೆಸ್ಕಾಂ, ಗೇಲ್ ಗ್ಯಾಸ್, ಇನ್ನಿತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.ಸಂಚಾರ ಬದಲಾವಣೆ

ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುವ ಕಡೆ ಸಂಚಾರ ಪೊಲೀಸ್ ವಿಭಾಗದ ಜತೆಗೆ ಸಮನ್ವಯ ಸಾಧಿಸಿ ಮಾರ್ಗ ಬದಲಾವಣೆ ಮಾಡಿಕೊಂಡು ಕಾಲಮಿತಿಯೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕಾಮಗಾರಿಯ ವೇಳೆ ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಹಂತ-ಹಂತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಬಿಬಿಎಂಪಿ ಅಧಿಕಾರಿಗಳಿಗೆ ತುಷಾರ್‌ ಗಿರಿನಾಥ್‌ ಸೂಚಿಸಿದರು.