ಸಾರಾಂಶ
ಯುದ್ಧದಿಂದ ಕಂಗೆಟ್ಟಿರುವ ವಿಶ್ವಕ್ಕೆ ಭಾರತದ ಬುದ್ಧ, ಮಹಾವೀರರಂತ ಸಂತರ ಸಂದೇಶ ಬೇಕಿದೆ. ಈ ಎಲ್ಲಾ ಮಹನೀಯರ ಸಂದೇಶ ಇಂದು ಹೆಚ್ಚು ಅಗತ್ಯವಿದೆ. ಪ್ರಾಚೀನ ಕಾಲದಲ್ಲಿ ಕನ್ನಡದಲ್ಲಿ ಗುರು ಬಸವ ಕವಿ ಏಳು ಮಹಾ ಕಾವ್ಯ ಬರೆದಿದ್ದರು. ಈ ಕಾಲದಲ್ಲಿ ಲತಾ ರಾಜಶೇಖರ್ ಸಪ್ತ ಮಹಾ ಕಾವ್ಯಗಳ ಕರ್ತೃ ಆಗಿದ್ದಾರೆ. ಏಳು ಮಹಾ ಕಾವ್ಯಗಳು ಜಗತ್ತಿನ ಯಾವ ಭಾಷೆಗಳಲ್ಲೂ ಬಂದಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ಎಲ್ಲಾ ಧರ್ಮಗಳನ್ನೂ ಪ್ರವೇಶಿಸಿರುವ ಡಾ.ಲತಾ ರಾಜಶೇಖರ್ ಅವರು, ಇಸ್ಲಾಂ ಧರ್ಮವನ್ನೂ ಪ್ರವೇಶಿಸಿ ಮಹಮ್ಮದ್ ಪೈಗಂಬರ್ ಬಗ್ಗೆಯೂ ಮಹಾ ಕಾವ್ಯ ಬರೆಯಲಿ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಆಶಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಮೈಸೂರಿನ ಆಚಾರ್ಯ ಗುರುಕುಲ ಏರ್ಪಡಿಸಿದ್ದ ‘ಮಹಾವೀರ ಮಹಾ ದರ್ಶನ’ ಕಾವ್ಯ ವಾಚನ ಮತ್ತು ವ್ಯಾಖ್ಯಾನ ಸತತ 350 ದಿನ ಮನದ ಸಂಭ್ರಮ ಹಾಗೂ ಕವಯತ್ರಿ ಡಾ.ಲತಾ ರಾಜಶೇಖರ್ ಅವರಿಗೆ ಆಚಾರ್ಯ ಗುರುಕುಲ ಭಗವಾನ್ ಮಹಾವೀರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುದ್ಧದಿಂದ ಕಂಗೆಟ್ಟಿರುವ ವಿಶ್ವಕ್ಕೆ ಭಾರತದ ಬುದ್ಧ, ಮಹಾವೀರರಂತ ಸಂತರ ಸಂದೇಶ ಬೇಕಿದೆ. ಈ ಎಲ್ಲಾ ಮಹನೀಯರ ಸಂದೇಶ ಇಂದು ಹೆಚ್ಚು ಅಗತ್ಯವಿದೆ. ಪ್ರಾಚೀನ ಕಾಲದಲ್ಲಿ ಕನ್ನಡದಲ್ಲಿ ಗುರು ಬಸವ ಕವಿ ಏಳು ಮಹಾ ಕಾವ್ಯ ಬರೆದಿದ್ದರು. ಈ ಕಾಲದಲ್ಲಿ ಲತಾ ರಾಜಶೇಖರ್ ಸಪ್ತ ಮಹಾ ಕಾವ್ಯಗಳ ಕರ್ತೃ ಆಗಿದ್ದಾರೆ. ಏಳು ಮಹಾ ಕಾವ್ಯಗಳು ಜಗತ್ತಿನ ಯಾವ ಭಾಷೆಗಳಲ್ಲೂ ಬಂದಿಲ್ಲ. ಕನ್ನಡದಲ್ಲಿ ಈ ದಾಖಲೆ ಮಾಡಿರುವ ಲತಾ ರಾಜಶೇಖರ್ ನನ್ನ ಶಿಷ್ಯೆ. ಮಹಿಳೆಯಾಗಿ ಲತಾ ಅವರ ಸಾಧನೆ ವಟವೃಕ್ಷದಂತಿದೆ ಎಂದರು.ಮಹಾವೀರ, ಬುದ್ಧ, ಕ್ರಿಸ್ತ ಮುಂತಾದ ಲೋಕ ಗುರುಗಳ ಪರಧರ್ಮವನ್ನು ಪ್ರವೇಶಿಸಿ ಅದರ ತಿರುಳನ್ನು ಕನ್ನಡಕ್ಕೆ ತಂದಿದ್ದಾರೆ. ಜೈನ ಧರ್ಮದ ತತ್ತ್ವಗಳು ಬಹಳ ಗಹನ ಮತ್ತು ಜಟಿಲ ಆದರೂ ಅವುಗಳನ್ನು ಅರ್ಥ ಮಾಡಿಕೊಂಡು ಕನ್ನಡದಲ್ಲಿ ಬರೆದಿದ್ದಾರೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಲತಾ ರಾಜಶೇಖರ್ ಮಾತನಾಡಿ, ಪತಿ ರಾಜಶೇಖರ್ ಅವರ ಪ್ರೋತ್ಸಾಹವಿಲ್ಲದಿದ್ದರೆ ನಾನು ಸಪ್ತ ಮಹಾ ಕಾವ್ಯಗಳನ್ನು ಬರೆಯಲು ಆಗುತ್ತಿರಲಿಲ್ಲ. ನನ್ನ ಈ ಕಾರ್ಯದಲ್ಲಿ ಅವರು ಸದಾ ಬೆನ್ನೆಲುಬಾಗಿ ನಿಂತಿದ್ದಾರೆ. ಡಾ.ಎಚ್.ಪಿ.ಮೋಹನಕುಮಾರ ಶಾಸ್ತ್ರಿ ಅವರು ಕಾವ್ಯ ವಾಚನ ಮತ್ತು ವ್ಯಾಖ್ಯಾನವನ್ನು ಅತ್ಯುತ್ತಮವಾಗಿ ನಡೆಸಿಕೊಡುತ್ತಿರುವುದನ್ನು ಕೇಳಿ ನಾನು ಮಹಾವೀರ ಮಹಾ ದರ್ಶನ ಬರೆದಿದ್ದು ಸಾರ್ಥಕವಾಯಿತು ಎಂದರು.ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷರಾದ ಶೀಲಾ ಅನಂತರಾಜ್ ಹಾಗೂ ನಾಗರತ್ನ ಪ್ರಸನ್ನಕುಮಾರ್ ಮಾತನಾಡಿದರು.
ಅಚಾರ್ಯ ಗುರುಕುಲದ ಕುಲಸಚಿವ ಡಾ.ಎಚ್.ಪಿ. ಮೋಹನಕುಮಾರ ಶಾಸ್ತ್ರಿ, ಅಂತಾರಾಷ್ಟ್ರೀಯ ಜೈನ್ ಮಿಲನ್ ಸಂಘಟಕ ನಾ. ಪ್ರಸನ್ನಕುಮಾರ, ರಾಜಶೇಖರ್ ಫೌಂಡೇಶನ್ ಅಧ್ಯಕ್ಷ ಡಾ.ಎಚ್.ಬಿ. ರಾಜಶೇಖರ್, ಎಸ್.ಎಂ. ಸನ್ಮತಿ ಕುಮಾರ ಶಾಸ್ತ್ರಿ, ಧರಣೇಂದ್ರ ಎಂ. ಇಂದ್ರ, ಪದ್ಮಪ್ರಭ ಇಂದ್ರ ಇದ್ದರು.