ಸಾಹಿತಿ ಮನೆ-ಮನಸ್ಸಿನ ನಡುವಿನ ಕಂದಕ ಮಚ್ಚಲಿ

| Published : Mar 28 2025, 12:32 AM IST

ಸಾರಾಂಶ

ನಮ್ಮದು ಜಾತ್ಯತೀತ ದೇಶ. ಆದರೆ, ಇಲ್ಲಿ ನಾವು ಎಲ್ಲರಿಗೂ ಜಾತಿಯ ಪಟ್ಟ ಕಟ್ಟಿದ್ದೇವೆ. ಈ ಜಾತಿಯ ವ್ಯವಸ್ಥೆ ವಿನಾಶಕಾರಿ ಬಾಂಬ್‌ಗಿಂತಲೂ ಅಪಾಯಕಾರಿ.

ಗಂಗಾವತಿ:

ಬರಹಗಾರ ಅರಳಿಸುವ ಸಾಹಿತ್ಯ ರಚಿಸಬೇಕೇ ಹೊರತು ಕೆರಳಿಸುವ ಸಾಹಿತ್ಯವನ್ನಲ್ಲ ಎಂದು 13ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಲಿಂಗಾರೆಡ್ಡಿ ಆಲೂರು ಹೇಳಿದರು.

ಸಮ್ಮೇಳನಾಧ್ಯಕ್ಷರಾಗಿ ಮಾತನಾಡಿದ ಅವರು, ಮನೆ ಮತ್ತು ಮನಸ್ಸುಗಳ ನಡುವಿನ ಕಂದಕ ಮುಚ್ಚುವ ಕೆಲಸ ಸಾಹಿತಿಗಳಿಂದ ಆಗಬೇಕಿದೆ ಎಂದರು.

ಇಲ್ಲಿನ ನೆಲ, ಜಲ, ಸಂಸ್ಕೃತಿ, ಇತಿಹಾಸ ಎಲ್ಲವೂ ಶ್ರೇಷ್ಠ. ಈ ಮಣ್ಣಿನ ಕಣಕಣವೂ ಬಂಗಾರ. ಆದಿಕವಿ ಪಂಪನಿಂದ 21ನೇ ಶತಮಾನದ ವರೆಗಿನ ಕವಿ ಪುಂಗವರೆಲ್ಲ ಈ ನಾಡನ್ನು ಹಾಡಿ ಹೊಗಳಿದ್ದಾರೆ. ಕಾವ್ಯ, ಕಾದಂಬರಿ, ಕಥೆ, ನಾಟಕ.. ಹೀಗೆ ಸಾಹಿತ್ಯದ ಹಲವು ವಿಭಾಗಗಳ ಮೂಲಕ ಕನ್ನಡದ ಋಣ ತೀರಿಸಿದ್ದಾರೆ. ಹಳೆಗನ್ನಡ, ನಡುಗನ್ನಡ ಕಾವ್ಯ ಪರಂಪರೆಯ ಬರಹಗಾರರು, ನವ್ಯ, ನವೋದಯ, ಬಂಡಾಯ, ಪರಂಪರೆಯ ಸಾಹಿತಿಗಳು ಕನ್ನಡದ ಕೀರ್ತಿಯನ್ನು ವಿಶ್ವಮಟ್ಟಕ್ಕೆ ವಿಸ್ತರಿಸಿದ್ದಾರೆ ಎಂದರು.

ಕನ್ನಡಿಗರು ಕುರಿತೋದದೆಯೇ, ಕಾವ್ಯಪ್ರಯೋಗ ಮಾಡುವ ಮೇಧಾವಿಗಳೆಂದು ಜಗತ್ತಿಗೆ ಸಾರಿಯಾಗಿದೆ. ಕುವೆಂಪು, ಡಾ. ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಶಿವರಾಮ ಕಾರಂತ, ಗಿರೀಶ ಕಾರ್ನಾಡ, ಡಾ. ಚಂದ್ರಶೇಖರ ಕಂಬಾರ, ವಿ.ಕೃ. ಗೋಕಾಕ, ಅನಂತಮೂರ್ತಿ ಅವರು ಜ್ಞಾನಪೀಠ ತಂದು ಕೊಟ್ಟ ಮಹನೀಯರು. ನರ್ಕಕ್ಕೆ ಕಳ್ಸಿ ನಾಲ್ಗೆ ಸೀಳಿದ್ರೂ, ಮೂಗ್ನಲ್ಲ್ ಕನ್ನಡ್ ಪದವಾಡ್ತೀನಿ ಎಂದ ಜಿ.ಪಿ. ರಾಜರತ್ನಂ, ಮೊದಲು ಮಾನವನಾಗು ಎಂದ ನಮ್ಮ ಜಿಲ್ಲೆಯ ಹೆಮ್ಮೆಯ ಕವಿ ಸಿದ್ದಯ್ಯ ಪುರಾಣಿಕರು, ಬಂಡಾಯಕ್ಕೆ ನೀರೆರೆದು ಪೋಷಿಸಿದ ಸಿದ್ದಲಿಂಗಯ್ಯ, ದೇವನೂರು ಮಹಾದೇವ... ಹೀಗೆ ಸಾವಿರಾರು ಕವಿ ಪುಂಗವರಿಗೆ ನಾವು ಋಣಿಯಾಗಿರಲೇ ಬೇಕಾಗಿದೆ ಎಂದು ಹೇಳಿದರು.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕದ ನೆಲ ಹಲವಾರು ವೈಶಿಷ್ಟ್ಯ ಹೊಂದಿದೆ ಎಂದ ಅವರು, ನಮ್ಮದು ಜಾತ್ಯತೀತ ದೇಶ. ಆದರೆ, ಇಲ್ಲಿ ನಾವು ಎಲ್ಲರಿಗೂ ಜಾತಿಯ ಪಟ್ಟ ಕಟ್ಟಿದ್ದೇವೆ. ಈ ಜಾತಿಯ ವ್ಯವಸ್ಥೆ ವಿನಾಶಕಾರಿ ಬಾಂಬ್‌ಗಿಂತಲೂ ಅಪಾಯಕಾರಿ. ಅದರ ಬೇರುಗಳು ಬಗೆದಷ್ಟೂ ಆಳಕ್ಕೆ ಹೋಗುತ್ತಿವೆ. ಜಾತಿಗೊಂದು ಜಯಂತಿ, ಜಾತಿ ಸೂಚಕ ಫಲಕ, ಪ್ರತಿ ಹಳ್ಳಿ-ಹಳ್ಳಿಯಲ್ಲೂ ಜಾತಿ ಸಂಘಟನೆಗಳು ಸಕ್ರಿಯವಾಗಿವೆ. ಜಾತಿ ಬಂಧುಗಳಾಗಿ ಕಟ್ಟಿದ ಸಮುದಾಯ ಕೇಂದ್ರಗಳು ಜೂಜು ಕೇಂದ್ರಗಳಾಗುತ್ತಿವೆ. ಪ್ರಜಾಪ್ರಭುತ್ವದ ಚುನಾವಣೆಗಳೆಲ್ಲ ಜಾತಿ ಆಧಾರದ ಮೇಲೆಯೇ ನಿಂತಿವೆ. ಇದು ಹೀಗೆಯೇ ಮುಂದುವರಿದರೆ ಜಾತಿಯ ಚಕ್ರವ್ಯೂಹದಲ್ಲಿ ಸಿಕ್ಕು ಸರ್ವನಾಶವಾಗುವುದಂತೂ ಸತ್ಯ ಎಂದರು.

ವಿಶ್ವದಲ್ಲಿ ಯಾವ ಉದ್ದಿಮೆ ಬೇಕಾದರೂ ಮುಚ್ಚಬಹುದು, ಆದರೆ, ಕೃಷಿ ಶಾಶ್ವತ. ಇದು ಚಿರಂಜೀವಿ. ಎಲ್ಲಿಯವರೆಗೂ ಈ ಭೂಮಿಯ ಮೇಲೆ ಗಾಳಿ, ಬೆಳಕು, ನೀರು, ಇರುತ್ತದೆಯೋ, ಅಲ್ಲಿಯವರೆಗೂ ಅನ್ನದಾತನಿಗೆ ಸಾವಿಲ್ಲ ಎಂದರು.