ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಾಹಿತ್ಯ ಕೇವಲ ಅಕ್ಷರಗಳ ರೂಪವಲ್ಲ. ಅದು ಒಂದು ಪರಂಪರೆ ಒಂದು ಇತಿಹಾಸ. ಒಂದು ಜಾನಪದ ಹಾಡು ಕೂಡ ಸಾಹಿತ್ಯವಾಗಬಹುದು ಎಂದು ಸಂಸ್ಕೃತಿ ಚಿಂತಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ. ರಹಮತ್ ತರೀಕೆರೆ ಹೇಳಿದರು.ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಂದರ್ಶಕ ಪ್ರಾಧ್ಯಾಪಕರ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತ್ಯ ಓದು ಸಂಸ್ಕೃತಿ ಅನುಸಂದಾನದ ಮಾದರಿಗಳ ಕುರಿತ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಾಹಿತ್ಯ ನಮ್ಮನ್ನು ಡಿಸ್ಟರ್ಬ್ ಮಾಡುವಂತಿರಬೇಕು. ಎಷ್ಟೋ ಸಾಹಿತ್ಯವು ನಮ್ಮ ಮನಸ್ಸನ್ನು ಕದಡುವುದು ನಿಜ, ಸ್ಥಾಪಿತ ಮಾದರಿಗಳನ್ನು ಭಗ್ನ ಮಾಡುತ್ತದೆ ಎಂದರು.
ಸಂಗೀತ ಕೂಡ ಸಾಹಿತ್ಯವೇ. ಮಂಟೆಸ್ವಾಮಿಯಂತಹ ಹಾಡುಗಳು ಸಾಹಿತ್ಯಕ್ಕಿಂತ ಮೊದಲೇ ಇದ್ದಿದ್ದು, ಹಾಗಾಗಿ ಸಾಹಿತ್ಯ ದೃಶ್ಯಗಳ ಮೂಲಕವೂ ಸಾಗಿ ಅದು ಒಂದು ಪ್ರಜ್ಞಾ ಸ್ಥಿತಿಯನ್ನು ತಲುಪುತ್ತದೆ. ಮತ್ತು ಸ್ಥಾನ ಪಲ್ಲಟ ಮಾಡುತ್ತದೆ. ಸಂಸ್ಕೃತಿಗೆ ಹಲವು ಅರ್ಥಗಳಿವೆ. ಸಮುದಾಯ, ನೈತಿಕ ಮೌಲ್ಯಗಳು, ಕಲೆ, ಬದುಕಿನ ಆಲೋಚನೆಗಳು, ಚಿಂತನೆ, ವರ್ತನೆ ಇವೆಲ್ಲವೂ ಸಂಸ್ಕೃತಿಯ ಬೇರೆ ಬೇರೆ ರೂಪದ ಅರ್ಥಗಳೇ ಆಗಿವೆ ಎಂದರು.ಬದುಕಿನ ಚಿಂತನ ಕ್ರಮವನ್ನು ನಾವು ಸಂಸ್ಕೃತಿಯೆಂದೇ ಕರೆಯುತ್ತಿದ್ದೇವೆ. ಸಂಸ್ಕೃತಿಯಲ್ಲಿ ಮಾರಕವಾದದ್ದು ಇರುತ್ತದೆ. ಭೂತ ಕಾಲದ ಸಂಸ್ಕೃತಿಯನ್ನು ನಾವು ಕೇವಲ ನೋಡುವುದಷ್ಟೇ ಅಲ್ಲ. ಅದನ್ನು ವರ್ತಮಾನಕ್ಕೆ ತರಬೇಕು. ಆಗ ಹೊಸ ಆಲೋಚನ ಕ್ರಮ ನಮ್ಮ ಮುಂದೆ ಬರುತ್ತದೆ. ಯಜಮಾನಿಕೆ ಪ್ರವೃತ್ತಿಯನ್ನ ವಿರೋಧಿಸುವುದು ಸಿದ್ದ ಮಾದರಿಯನ್ನು ಒಡೆದುಹಾಕುವುದರಿಂದ ಹೊಸ ಸಂಸ್ಕೃತಿಯನ್ನು ಹೊಸ ಆಲೋಚನ ಕ್ರಮಗಳನ್ನು ನಾವು ಕಟ್ಟಬಹುದಾಗಿದೆ ಎಂದರು.
ಓದಿಗೆ ವ್ಯಾಪಕವಾದ ಅರ್ಥ ಇದೆ. ಓದು ಎಂದರೆ ಕೇವಲ ಗ್ರಂಥ ಭಾಷೆ ಮಾತ್ರ ಅಲ್ಲ. ಮುದ್ರಣದ ವಿಷಯಗಳನ್ನು ಬಿಟ್ಟು ಆಚೆ ನೋಡುವುದೇ ಓದು. ಮುದ್ರಿತ ಸಾಹಿತ್ಯದಿಂದ ಆಚೆ ಬಂದಾಗ ಮಾತ್ರ ಹೊಸ ಗ್ರಹಿಕೆ ಸಾಧ್ಯ. ಇದು ಕೇವಲ ಓದುವುದು ಮಾತ್ರ ಅಲ್ಲ. ಕೇಳುವುದು, ನೋಡುವುದು ಆಗಬಹುದು. ಮುದ್ರಿತ ಸಾಹಿತ್ಯದಿಂದ ಆಚೆ ಬಂದಾಗ ಮಾತ್ರ ನಮಗೆ ಸಾಹಿತ್ಯ ದಕ್ಕುತ್ತದೆ. ಮತ್ತು ಸೀಮಿತ ಗ್ರಹಿಕೆಯನ್ನು ಒಡೆದುಹಾಕುತ್ತದೆ ಎಂದು ತಿಳಿಸಿದರು.ಸಂದರ್ಶಕ ಪ್ರಾಧ್ಯಾಪಕರ ಸರಣಿ ಉಪನ್ಯಾಸ ಚಿಂತಕರೊಂದಿಗೆ ಮಾತುಕತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಹಾಗೂ ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಸಣ್ಣರಾಮ, ಜಗತ್ತು ಇಂದು ಕುದಿಯುತ್ತಿದೆ. ಮನುಷ್ಯತ್ವವೇ ನಾಶವಾಗುತ್ತಿದೆ. ದೆಹಲಿಯ ಕೆಂಪು ಕೋಟೆಯಲ್ಲಿ ನೆನ್ನೆ ನಡೆದ ದುರ್ಘಟನೆಯೇ ಇದಕ್ಕೆ ಸಾಕ್ಷಿ. ಜಗತ್ತಿನ ಯಾವ ರಾಷ್ಟ್ರಗಳು ನೆಮ್ಮದಿಯಿಂದ ಉಸಿರಾಡುವಂತಿಲ್ಲ. ಮನುಷ್ಯತ್ವವೇ ಸತ್ತು ಹೋಗುತ್ತಿದೆ ಎಂದರು.
ಸಾಹಿತ್ಯದ ವಿದ್ಯಾರ್ಥಿಗಳು ಚಿಂತಿಸುವ ಅಗತ್ಯ ಇಂದು ತುರ್ತಾಗಿದೆ. ಪಠ್ಯಪುಸ್ತಕಗಳ ಆಚೆ ನಿಂತು ನಾವು ನೋಡಬೇಕಾಗಿದೆ. ಪ್ರೀತಿ ವಿಶ್ವಾಸಗಳಿಗೆ ತೆರೆದುಕೊಳ್ಳಬೇಕಾಗಿದೆ. ಮನುಷ್ಯತ್ವವೇ ಮುಖ್ಯ ಎಂಬುವುದನ್ನು ಖಚಿತ ಪಡಿಸಿಕೊಳ್ಳಬೇಕಾಗಿದೆ. ಸಾಹಿತಿ ಕೇವಲ ಒಂದು ವಿಷಯಕ್ಕೆ ಮಾತ್ರ ಸೀಮಿತವಾಗಬಾರದು. ಆತ ಮನೋವಿಜ್ಞಾನಿಯೂ ಆಗಿರಬೇಕು. ಈ ಹಿನ್ನಲೆಯಲ್ಲಿ ರಹಮತ್ ತರಿಕೆರೆಯವರು ನನ್ನ ಶಿಷ್ಯ ಕೂಡ, ಹಲವು ವಿಷಯಗಳ ವಿದ್ವಾಂಸ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಸಿರಾಜ್ ಅಹಮ್ಮದ್ ಮಾತನಾಡಿ, ಜ್ಞಾನ ದಿಕ್ಕು ತಪ್ಪಲು ಬಿಡಬಾರದು. ವಿದ್ಯಾರ್ಥಿಗಳು ದ್ವೀಪಗಳಾಗಬಾರದು. ನಮ್ಮ ಮುಂದೆ ಇರುವು ಎಲ್ಲಾ ಗೋಡೆಗಳನ್ನು ಒಡೆಯಬೇಕಾಗಿದೆ. ನಮಗೀಗ ಮಾನವೀಕ ಶಾಸ್ತ್ರದ ಅಗತ್ಯವಿದೆ. ಏಕತೆ ಎಂಬುವುದು ನಮ್ಮನ್ನು ದೂರ ಕರೆದುಕೊಂಡು ಹೋಗುತ್ತದೆ. ಬಹುತ್ವವೇ ನಮಗೆ ಈಗ ಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಕ್ಷೇಮಾಧಿಕಾರಿ ಡಾ.ಕೆ.ಎನ್.ಮಂಜುನಾಥ್, ಐಕ್ಯೂಎಸಿ ಸಂಚಾಲಕ ಡಾ.ಎಚ್.ಪಿ.ಮಂಜುನಾಥ್, ಕಾರ್ಯಕ್ರಮದ ಸಂಚಾಲಕರಾದ ಡಾ.ಕೆ.ಎಂ.ಮಹದೇವಸ್ವಾಮಿ, ಡಾ. ಎಚ್.ಹಾಲಮ್ಮ , ಮೇಟಿ ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))