ಮನುಷ್ಯ ಸತ್ಯ ಶುದ್ಧ ಕಾಯಕದಲ್ಲಿ ತೊಡಗಲಿ

| Published : Apr 22 2024, 02:17 AM IST

ಸಾರಾಂಶ

ನಾವು ಮಾಡುವ ಕಾರ್ಯದಲ್ಲಿ ತನ್ನಿಂದ ತಾನೇ ಪರಿವರ್ತನೆ ಹೊಂದಿ ಯಶಸ್ವಿಯಾಗಿ ಆ ಕೆಲಸದಲ್ಲಿ ಪ್ರಗತಿ ಕಾಣಲು ಸಾಧ್ಯ

ನರಗುಂದ: ಮನುಷ್ಯ ನನ್ನದು, ನನ್ನಿಂದಲೇ ಎಂಬ ಅಹಂಭಾವ ತೊಡೆದು ನಮ್ಮ ನಿತ್ಯ ಜೀವನದಲ್ಲಿ ಸತ್ಯ ಶುದ್ಧ ಕಾಯಕದಲ್ಲಿ ತೊಡಗಬೇಕೆಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಹೇಳಿದರು.

ಅವರು ತಾಲೂಕಿನ ಶಿರೋಳ ಗ್ರಾಮದ ಶ್ರಿಬೀರಲಿಂಗೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ನಿಮಿತ್ತ ಪಲ್ಲಕ್ಕಿ ಉತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು, ನನ್ನದು, ನನ್ನಿಂದಲೆ ಎಂಬ ಅಹಂಭಾವ ತೊಡೆದು ನಮ್ಮ ನಿತ್ಯಜೀವನದಲ್ಲಿ ಸತ್ಯ ಶುದ್ಧ ಕಾಯಕದಲ್ಲಿ ತೊಡಗಿ ನಾವು ಮಾಡುವ ಕಾರ್ಯದಲ್ಲಿ ತನ್ನಿಂದ ತಾನೇ ಪರಿವರ್ತನೆ ಹೊಂದಿ ಯಶಸ್ವಿಯಾಗಿ ಆ ಕೆಲಸದಲ್ಲಿ ಪ್ರಗತಿ ಕಾಣಲು ಸಾಧ್ಯ ಎಂದು ಹೇಳಿದರು.

ಪ್ರಭಾಕರ ಉಳ್ಳಾಗಡ್ಡಿ ಮಾತನಾಡಿ, ಈ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮನುಷ್ಯನಲ್ಲಿ ಆತ್ಮದ ಅರಿವಿನ ಕೊರತೆ ಇದೆ, ಮಾನವನ ಮನಸ್ಸು ಪರಿವರ್ತನೆಯಾಗಬೇಕೆಂದರೆ ಅದು ಆಧ್ಯಾತ್ಮಿಕ ಶಕ್ತಿಯಿಂದ ಮಾತ್ರ ಸಾಧ್ಯ, ಆದ್ದರಿಂದ ಮಾನವ ಕನಕದಾಸರ ವಚನಗಳ ಮೂಲಕ ಸಾಧು, ಸಂತರ, ಶಿವ ಶರಣರ ಜೀವನ ಸಂದೇಶ ಹಾಗೂ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾನಸಿಕ ನೆಮ್ಮದಿ ಪಡೆಯಬೇಕು ಎಂದು ತಿಳಿಸಿದರು.

ಜಾಲಿಕಟ್ಟಿಯ ಪೂರ್ಣಾನಂದ ಮಠದ ಕೃಷ್ಣಾನಂದ ಶ್ರೀಗಳು, ಶಿರೋಳ ಶಿವಯೋಗಾಶ್ರಮದ ಅಕ್ಕಮಹಾದೇವಿ ಶರಣಮ್ಮ, ಮುರನಾಳದ ಗುರುನಾಥ ಶ್ರೀಗಳು, ಜಗದ್ಗುರು ಯಚ್ಚರ ಮಹಾಸ್ವಾಮಿಗಳ ಗವಿಮಠದ ಅಭಿನವ ಯಚ್ಚರ ಶ್ರೀಗಳು, ಬಾಪುಗೌಡ್ರ ತಿಮ್ಮನಗೌಡ್ರ, ಶರಣಪ್ಪ ಕಾಡಪ್ಪನವರ, ಮುತ್ತಣ್ಣ ತೆಗ್ಗಿ, ಮುತ್ತಪ್ಪ ಕುರಿ, ಬಸವರಾಜ ಕಂಬಳಿ, ಬಸವರಾಜ ಕುಪ್ಪಸ್ತ, ಗುರುಪಾದ ಭಂಜತ್ರಿ,ಮಲ್ಲಣ್ಣ ಚಿಕ್ಕನರಗುಂದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.